ಬೆಂಗಳೂರು: ಬೆಂಗಳೂರು ಹೊರವಲಯದ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ನಡೆಯಲಿರುವ, ಇಂಡಿಯಾ ಎನರ್ಜಿ ವೀಕ್ 2023 ಕಾರ್ಯಕ್ರಮದ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಸಂಚಾರ ವ್ಯವಸ್ಥೆಯಲ್ಲಿ ಪ್ರಮುಖ ಮಾರ್ಪಾಡುಗಳನ್ನ ಮಾಡಲಾಗಿದೆ.
ಮುಖ್ಯವಾಗಿ ಬೆಂಗಳೂರು - ತುಮಕೂರು ರಸ್ತೆಯಲ್ಲಿ ವಾಹನ ಸಂಚಾರ ವ್ಯವಸ್ಥೆಯಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿದ್ದು, ಫೆಬ್ರವರಿ 5, 6 ಮತ್ತು 7ರಂದು ಬೆಂಗಳೂರು ನಗರದೊಳಗೆ ಎಲ್ಲ ರೀತಿಯ ಲಘು, ಮಧ್ಯಮ ಹಾಗೂ ಭಾರಿ ಸರಕು ಸಾಗಣೆ ವಾಹನಗಳಿಗೆ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆ ತನಕ ಸಂಚಾರ ನಿರ್ಬಂಧ ವಿಧಿಸಲಾಗಿದೆ.
ತುಮಕೂರು ರಸ್ತೆಯಿಂದ ಬೆಂಗಳೂರು ನಗರ, ಮೈಸೂರು ರಸ್ತೆಯಿಂದ ನಾಯಂಡಹಳ್ಳಿ ಮತ್ತು ಸೋಮನಹಳ್ಳಿಯವರೆಗೆ, ಬಳ್ಳಾರಿ ರಸ್ತೆಯಿಂದ ಬೆಂಗಳೂರು ನಗರದೊಳಗೆ, ಹೊಸಕೋಟೆ ರಸ್ತೆಯಿಂದ ಹೆಬ್ಬಾಳವರೆಗೆ ಮೂರು ದಿನ ಭಾರಿ ಹಾಗೂ ಸರಕು ಸಾಗಣೆ ವಾಹನಗಳಿಗೆ ನಿರ್ಬಂಧವಿರಲಿದ್ದು, ಬದಲಿ ಮಾರ್ಗಗಳನ್ನ ಸೂಚಿಸಲಾಗಿದೆ.
ಬದಲಿ ಮಾರ್ಗಗಳು: ತುಮಕೂರು ಕಡೆಯಿಂದ ಬಳ್ಳಾರಿ ರಸ್ತೆ ಹೈದರಾಬಾದ್ ಕಡೆಗೆ ಸಂಚರಿಸುವ ವಾಹನಗಳು ಡಾಬಸ್ ಪೇಟೆಯಲ್ಲಿ ಎಡ ತಿರುವು ಪಡೆದು ದೊಡ್ಡಬಳ್ಳಾಪುರ ಕಡೆ, ಎಲೆಕ್ಟ್ರಾನಿಕ್ ಸಿಟಿ ಕಡೆಗೆ ಸಂಚರಿಸುವ ವಾಹನಗಳು ಸೊಂಡೆಕೊಪ್ಪ ಕ್ರಾಸ್ ನಲ್ಲಿ ಬಲ ತಿರುವು ಪಡೆದು ತಾವರೆಕೆರೆ ಮೂಲಕ ಮಾಗಡಿ ರಸ್ತೆಗೆ ಸಂಪರ್ಕ ಪಡೆದು ನೈಸ್ ರಸ್ತೆ ಮಾರ್ಗವಾಗಿ, ಬಳ್ಳಾರಿ ರಸ್ತೆ ಕಡೆಯಿಂದ ತುಮಕೂರು ರಸ್ತೆ ಕಡೆಗೆ ಸಂಚರಿಸುವ ವಾಹನಗಳು ದೇವನಹಳ್ಳಿ ಬಲ ತಿರುವು ಪಡೆದು ದೊಡ್ಡಬಳ್ಳಾಪುರ ರಸ್ತೆಯ ಮೂಲಕ ತುಮಕೂರು ಕಡೆಗೆ ಸಂಪರ್ಕ ಪಡೆಯಲು, ಹೊಸಕೋಟೆಯಿಂದ ತುಮಕೂರು ಕಡೆಗೆ ಸಂಚರಿಸುವ ವಾಹನಗಳು ಬೂದಿಗೆರೆ ಕ್ರಾಸ್ ಮುಖಾಂತರ ದೇವನಹಳ್ಳಿ, ದೊಡ್ಡಬಳ್ಳಾಪುರ ಮೂಲಕ ಡಾಬಸ್ ಪೇಟೆ ಮೂಲಕ ತುಮಕೂರು ಕಡೆ ಸಂಚರಿಸಲು ಸೂಚಿಸಲಾಗಿದೆ.
ನಾಳೆಯಿಂದ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಮೂರು ದಿನಗಳ ಕಾಲ ಇಂಡಿಯಾ ಎನರ್ಜಿ ವೀಕ್ ಕಾರ್ಯಕ್ರಮ ನಡೆಯಲಿದ್ದು, ಪ್ರಪಂಚದಾದ್ಯಂತ 650 ಕ್ಕೂ ಹೆಚ್ಚು ಪ್ರದರ್ಶಕರು, 34 ಸಚಿವರು ಆಗಮಿಸುವ ನಿರೀಕ್ಷೆ ಇದೆ. ಭಾರತವು ಮೊದಲ ಬಾರಿಗೆ ಇಂತಹ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕಾರ್ಯಕ್ರಮಕ್ಕೆ ಇಂಧನ ಕಂಪನಿಗಳ ಸಿಇಒಗಳು ಭಾಗವಹಿಸಲಿದ್ದಾರೆ. ಇಂಡಿಯಾ ಎನರ್ಜಿ ವೀಕ್‌ನಲ್ಲಿ, 2025 ರ ವೇಳೆಗೆ E20 ಎಂಬ ಉಪಕ್ರಮದ ಅಡಿಯಲ್ಲಿ ಎಥೆನಾಲ್ ಮಿಶ್ರಣವನ್ನು ಶೇ20% ರಷ್ಟು ಹೆಚ್ಚಿಸುವುದು ಮತ್ತು ಲಕ್ಷಾಂತರ ಪ್ಲಾಸ್ಟಿಕ್ ಪೆಟ್ ಬಾಟಲ್‌ಗಳನ್ನು ಮರುಬಳಕೆ ಮಾಡುವ ಮೂಲಕ ಅದರಿಂದ ಬಟ್ಟೆಗಳನ್ನು ಉತ್ಪಾದಿಸುವುದು ಯೋಜನೆಗಳ ಕುರಿತು ಚರ್ಚೆ ನಡೆಯಲಿದೆ. ಈ ವೇಳೆ, ಪ್ರಧಾನಿ ನರೇಂದ್ರ ಮೋದಿ ಹಸಿರು ಹೈಡ್ರೋಜನ್ ಮೊಬಿಲಿಟಿ ರ್‍ಯಾಲಿಯನ್ನು ಉದ್ಘಾಟಿಸಲಿದ್ದಾರೆ. ನಂತರ ಪ್ರಧಾನಮಂತ್ರಿ ಅವರು ಸಿಇಒಗಳೊಂದಿಗೆ ದುಂಡು ಮೇಜಿನ ಸಭೆ ನಡೆಸಲಿದ್ದಾರೆ. ಜೂತೆಗೆ ಇನ್ನು ಹಲವು ಕಾರ್ಯಕ್ರಮಗಳನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಲಿದ್ದಾರೆ.
ಇದನ್ನೂ ಓದಿ:ರಾಜ್ಯಕ್ಕೆ ಬರಲಿದೆ ವಂದೇ ಭಾರತ್ ಮಾದರಿಯಲ್ಲಿ ವಂದೇ ಮೆಟ್ರೋ: ರೈಲ್ವೇ ಸಚಿವ ಅಶ್ವಿನಿ ವೈಷ್ಣವ್