ಬೆಂಗಳೂರು: ಮಹದೇವಪುರ ಮತ್ತು ಕೆಆರ್ ಪುರದಲ್ಲಿ ಧಾರಾಕಾರ ಮಳೆಗೆ ರಸ್ತೆಗಳು ಜಲಾವೃತವಾಗಿವೆ.
ಬೆಂಗಳೂರು ನಗರದ ಹಲವೆಡೆ ಧಾರಾಕಾರ ಮಳೆಯಾಗಿದ್ದು, ಅದರಲ್ಲೂ ಮಹದೇವಪುರ ಮತ್ತು ಕೆಆರ್ ಪುರದ ಹಲವೆಡೆ ಸತತ ಎರಡು ಗಂಟೆಗಳ ಕಾಲ ಸುರಿದ ಮಳೆಗೆ ಕೆಲವು ಕಡೆ ನೀರು ತುಂಬಿಕೊಂಡು ಜನಜೀವನ ಅಸ್ತವ್ಯಸ್ತವಾಗಿದೆ.
ಇಂದಿನಿಂದ ವೀಕೆಂಡ್ ಕರ್ಫ್ಯೂ ಜಾರಿಯಾಗಲಿದ್ದು, ಮನೆಗೆ ತೆರಳುತ್ತಿದ್ದ ಹಲವು ಜನ ಮಳೆಯಲ್ಲಿ ಸಿಲುಕಿ ಪರದಾಡುವಂತಾಯಿತು. ಮಹದೇವಪುರ ಮತ್ತು ಕೆಆರ್ ಪುರ ಕೆಲವು ತಗ್ಗು ಪ್ರದೇಶಗಳಲ್ಲಿ ಕಿಲೋಮೀಟರ್ ಗಟ್ಟಲೆ ನೀರು ತುಂಬಿಕೊಂಡು ಜನಜೀವನ ಅಸ್ತವ್ಯಸ್ತವಾಗಿದೆ
ಇನ್ನು ಮಹದೇವಪುರ ಗ್ರಾಮ ತಗ್ಗು ಪ್ರದೇಶವಾಗಿರುವುದರಿಂದ ಮಳೆ ನೀರು ರಸ್ತೆತುಂಬಾ ಹರಿದು ಮನೆ ಮತ್ತು ಅಂಗಡಿಗಳಿಗೆ ನುಗ್ಗಿದೆ. ಪ್ರತಿಬಾರಿ ಹೆಚ್ಚು ಮಳೆ ಬಂದಾಗ ಮಹದೇವಪುರ ಗ್ರಾಮದಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡುತ್ತಲೇ ಇದೆ. ಇಷ್ಟಾದರೂ ಜನರ ಪ್ರತಿನಿಧಿಗಳು ಇದನ್ನು ಬಗೆಹರಿಸುವ ಕೆಲಸ ಮಾಡುತ್ತಿಲ್ಲ ಎಂದು ಸ್ಥಳೀಯರು ಕಿಡಿಕಾರಿದ್ದಾರೆ.