ಬೆಂಗಳೂರು: ಸಂಜೆಯಿಂದ ಸುರಿಯುತ್ತಿರುವ ಭಾರಿ ಮಳೆಗೆ ನಗರದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ನಗರದ ಬಹುತೇಕ ಕಡೆ ಗಂಟೆಗೂ ಹೆಚ್ಚು ಕಾಲ ಭಾರೀ ಮಳೆಯಾಗಿದ್ದು, ರಸ್ತೆಗಳು ಜಲವೃತಗೊಂಡವು.
ಆರ್ಆರ್ ನಗರ ವಲಯದಲ್ಲಿ ಹೆಚ್ಚು ಮಳೆಯಾಗಿದ್ದು, ಮೀನಾಕ್ಷಿ ಕಲ್ಯಾಣ ಮಂಟಪಕ್ಕೆ ನೀರು ನುಗ್ಗಿದೆ. ಮದುವೆಗೆಂದು ಬಂದವರಿಗೆ ಮಳೆಗೆ ಸಿಲುಕಿ ಫಜೀತಿಗೆ ಒಳಗಾದರು. ಊಟದ ಹಾಲ್, ಅಡುಗೆ ಕೋಣೆ, ಮಂಟಪದ ಮುಂಭಾಗ ಸಂಪೂರ್ಣ ಜಲಾವೃತಗೊಂಡಿತು. ಕಾರುಗಳು ನೀರಿನಲ್ಲಿ ಮುಳುಗಿದ್ದು, ಆಹಾರ ಸಾಮಗ್ರಿ, ಕುರ್ಚಿ, ಸಿಲಿಂಡರ್ ನೀರಿನಲ್ಲಿ ತೇಲಾಡಿದವು.
ಹಲಗೇವಡೇರ ಹಳ್ಳಿಯ ಕೆರೆಯಿಂದ ಕೆಂಚೆನಹಳ್ಳಿಗೆ ಸೇರುವ ರಾಜಕಾಲುವೆಯ ನೀರು ಕಲ್ಯಾಣ ಮಂಟಪಕ್ಕೆ ನುಗ್ಗಿದ ಪರಿಣಾಮ ಇಡೀ ಮಂಟಪ ಜಲಾವೃತಗೊಂಡಿತು. ಇದಲ್ಲದೆ ಶಾಂತಿನಗರ, ಜಯನಗರ, ಕೋರಮಂಗಲ, ಮೆಜೆಸ್ಟಿಕ್, ಗಾಂಧಿನಗರ, ಯಶವಂತಪುರ, ಭದ್ರಪ್ಪ ಲೇಔಟ್ ರಸ್ತೆಗಳು ಜಲಾವೃತಗೊಂಡಿದ್ದು, ರಸ್ತೆಯಲ್ಲಿದ್ದ ಬೈಕ್, ಕಾರುಗಳು ನೀರಿನಲ್ಲಿ ಮುಳುಗಿವೆ. ಶಿವಾನಂದ ಸರ್ಕಲ್ ಬಳಿ ಇರುವ ಕೇಳ ಸೇತುವೆ ಮಾರ್ಗ ಸಂಪೂರ್ಣವಾಗಿ ನೀರಿನಿಂದ ತುಂಬಿಕೊಂಡಿದೆ.
ಅತಿ ಹೆಚ್ಚು ಮಳೆ ಬೊಮ್ಮನಹಳ್ಳಿ ವಲಯದಲ್ಲಾಗಿದ್ದು, 29 ರಿಂದ 90.50 ಮಿ ಮೀ, ಬೆಂಗಳೂರು ಪಶ್ಚಿಮ ವಲಯದಲ್ಲಿ 18 ರಿಂದ 71.50 ಮಿ ಮೀ, ದಕ್ಷಿಣದಲ್ಲಿ 11.50 ರಿಂದ 80 ಮಿ.ಮೀ, ಆರ್ಆರ್ನಗರದಲ್ಲಿ 105.5 ಮಿ.ಮೀ, ಯಲಹಂಕ 7-21 ಮಿ.ಮೀ, ಪೂರ್ವದಲ್ಲಿ 3.50 ಯಿಂದ 42.50 ಮಿ.ಮೀ, ದಾಸರಹಳ್ಳಿ 12 ರಿಂದ 22 ಮಿ.ಮೀ ಮಳೆಯಾಗಿದೆ.