ಬೆಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದ್ದು, ರಾಜ್ಯದ ಒಳನಾಡಿನಲ್ಲಿಯೂ ಬಹುತೇಕ ಎಲ್ಲ ಸ್ಥಳಗಳಲ್ಲಿ ಮಳೆಯಾಗಿದೆ. ಬಂಗಾಳ ಉಪಸಾಗರದ ಉತ್ತರ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇದು ಇನ್ನಷ್ಟು ತೀವ್ರಗೊಂಡು ಎರಡು ಮೂರು ದಿನದಲ್ಲಿ ಒಡಿಶಾ, ಝಾರ್ಖಂಡ್, ಛತ್ತೀಸಗಢ ಕಡೆ ಚಲಿಸುವ ಸಾಧ್ಯತೆ ಇದೆ.
ಇನ್ನೊಂದು ಟ್ರಫ್ (ದಟ್ಟ ಮೋಡ) ಪೂರ್ವ ಅರಬ್ಬೀ ಸಮುದ್ರದ ಕರ್ನಾಟಕದ ಕರಾವಳಿಯಲ್ಲಿ ಇದೆ. ಇದರ ಪರಿಣಾಮದಿಂದ ಕರ್ನಾಟಕ ಕರಾವಳಿ ಜಿಲ್ಲೆಗಳಲ್ಲಿ ಜೂನ್ 12 ರಿಂದ 16 ರವರೆಗೆ ಭಾರಿ ಮಳೆಯಾಗುವ ಹಿನ್ನೆಲೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿಯೂ ಈ ಅವಧಿಯಲ್ಲಿ ಬಹುತೇಕ ಎಲ್ಲ ಸ್ಥಳಗಳಲ್ಲಿ ಮಳೆಯಾಗಲಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಜೂ.12 ರಿಂದ 16 ರವರೆಗೆ ಭಾರಿ ಮಳೆ ಆಗಲಿರುವುದರಿಂದ ಆರೆಂಜ್ ಅಲರ್ಟ್ ಕೊಡಲಾಗಿದೆ.
ಬೆಳಗಾವಿ, ಧಾರವಾಡ, ಹಾವೇರಿ, ಬಿಜಾಪುರ,ಬಾಗಲಕೋಟೆ, ಗದಗಕ್ಕೆ ಯೆಲ್ಲೋ ಅಲರ್ಟ್ ಕೊಡಲಾಗಿದೆ. ಬೆಂಗಳೂರಿನಲ್ಲಿ ಮುಂದಿನ ಎರಡು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ.
ಓದಿ: ರಾಜ್ಯದ ಹಲವು ಜಿಲ್ಲೆಗಳಿಗೆ ನಾಲ್ಕು ದಿನದಲ್ಲಿ ಅಪಾಯಕಾರಿ ಮಳೆ: ರೆಡ್ ಅಲರ್ಟ್ ಘೋಷಣೆ