ಬೆಂಗಳೂರು: ಸೋಮವಾರ ರಾತ್ರಿಯಿಂದ ನಗರದಲ್ಲಿ ಧಾರಾಕಾರವಾಗಿ ಹಿಂಗಾರು ಮಳೆ ಸುರಿಯುತ್ತಿದೆ. ಕೆಲವೆಡೆ ರಸ್ತೆಗಳಲ್ಲಿ ನೀರು ನಿಂತು ಕೆರೆಯಂತಾದವು. ಹಲವು ಅಂಡರ್ಪಾಸ್ಗಳಲ್ಲಿ ಮೊಣಕಾಲುದ್ದ ನೀರು ತುಂಬಿ ವಾಹನ ಸವಾರರು ಪರದಾಡಿದರು. ಮಲ್ಲೇಶ್ವರಂ, ಶಾಂತಿನಗರ, ಮೈಸೂರು ಬ್ಯಾಂಕ್, ಟೌನ್ ಹಾಲ್, ಯಲಹಂಕ ಸೇರಿ ಹಲವೆಡೆ ಮಳೆ ಸುರಿಯುತ್ತಿದೆ.
ಸಂಜೆ ಸಾಧಾರಣವಾಗಿ ಆರಂಭವಾದ ಮಳೆ ನಂತರ ಕೊಂಚ ಬಿಡುವು ನೀಡಿತು. ರಾತ್ರಿಯಾಗುತ್ತಿದ್ದಂತೆ ಮತ್ತೆ ಬಿರುಸಾಯಿತು. ನಗರದ ಹಲವೆಡೆ ಬಿಟ್ಟೂಬಿಡದೆ ಮಳೆಯಾಗುತ್ತಿದೆ.
ಯಲಹಂಕದಲ್ಲಿ ಮಳೆ-ಕೋಗಿಲು ಕ್ರಾಸ್ ಜಲಾವೃತ: ಯಲಹಂಕ ಭಾಗದಲ್ಲಿ ಭಾರಿ ಮಳೆಯಾಗಿದ್ದು, ಕೋಗಿಲು ಕ್ರಾಸ್ ಜಲಾವೃತಗೊಂಡಿದೆ. ವಾಹನ ಸವಾರರು ಪರದಾಡುವಂತಾಗಿದೆ. ಸೋಮವಾರ ಯಲಹಂಕದಲ್ಲಿ 14.7 ಸೆಂಟಿ ಮೀಟರ್ ಮಳೆಯಾಗಿದೆ. ಭಾರಿ ಮಳೆಯಿಂದಾಗಿ ಕೋಗಿಲು ಕ್ರಾಸ್ನ ರೈಲ್ವೇ ಸ್ಟೇಷನ್ ರಸ್ತೆಯಲ್ಲಿ ಸುಮಾರು ಒಂದು ಅಡಿ ನೀರು ನಿಂತಿದೆ. ಇದರಿಂದ ವಾಹನ ಸಂಚಾರ ವ್ಯತ್ಯಯವಾಗಿದೆ.
ಕಳೆದ ಮೂರು ದಿನಗಳಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ನವೆಂಬರ್ ತಿಂಗಳ ಮೊದಲ ವಾರದಲ್ಲಿ ಉತ್ತಮ ಮಳೆ ಸುರಿಯುತ್ತಿದೆ. ಸೋಮವಾರ ಮಧ್ಯಾಹ್ನ ಪ್ರಾರಂಭವಾಗಿರುವ ಮಳೆ ರಾತ್ರಿವರೆಗೂ ಮುಂದುವರೆದಿತ್ತು. ಸೋಮವಾರ ದೇವನಹಳ್ಳಿಯಲ್ಲಿ 11.1 ಮಿ.ಮೀ, ದೊಡ್ಡಬಳ್ಳಾಪುರದಲ್ಲಿ 4.8 ಮಿ.ಮೀ, ಹೊಸಕೋಟೆಯಲ್ಲಿ 26.0 ಮಿ.ಮೀ ಮಳೆಯಾಗಿದೆ. ಇನ್ನೆರಡು ದಿನಗಳ ಕಾಲ ಮಳೆ ಮುಂದುವರೆಯುವ ಸಾಧ್ಯತೆ ಇದೆ ಹವಾಮಾನ ಇಲಾಖೆ ತಿಳಿಸಿದೆ.
ಬಿಬಿಎಂಪಿ ವಾರ್ ರೂಂಗೆ ಡಿಕೆಶಿ ಭೇಟಿ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹಡ್ಸನ್ ವೃತ್ತದ ಬಿಬಿಎಂಪಿ ಕೇಂದ್ರ ಕಚೇರಿಯ ವಾರ್ ರೂಂಗೆ ಕಳೆದ ರಾತ್ರಿ ಭೇಟಿ ನೀಡಿದರು. ನಗರದ ಪರಿಸ್ಥಿತಿ, ಅನಾಹುತ, ಪರಿಹಾರ ಕಾರ್ಯಗಳನ್ನು ಪರಿಶೀಲಿಸಿದರು. ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ರಾಜ್ಯದ ಹಲವೆಡೆ ಹಿಂಗಾರು ಮಳೆ: ಸೋಮವಾರ ರಾಜ್ಯದ ಹಲವೆಡೆ ಭಾರಿ ಮಳೆಯಾಯಿತು. ದಾವಣಗೆರೆ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತು. ನಗರದ ರೈಲ್ವೇ ಅಂಡರ್ ಬ್ರಿಡ್ಜ್ ಕೆಳಗೆ ನೀರು ನಿಂತಿದ್ದರಿಂದ ವಾಹನ ಸಂಚಾರ ವ್ಯತ್ಯಯವಾಯಿತು. ದಾವಣಗೆರೆ ನಗರದ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಳೆ ಅಬ್ಬರ ಜೋರಾಗಿತ್ತು.
ತುಮಕೂರು, ಹಾವೇರಿಯಲ್ಲೂ ಭಾರಿ ಮಳೆ ಬಿದ್ದಿದೆ. ಸೋಮವಾರ ಸಂಜೆ ಸುರಿದ ಮಳೆಗೆ ಜನರು ಪರದಾಡಿದರು. ಹಾವೇರಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯಾಗಿದೆ. ಚರಂಡಿಗಳು ತುಂಬಿ ತ್ಯಾಜ್ಯಗಳು ರಸ್ತೆ ಮೇಲೆ ಬಂದಿದ್ದವು. ಹಾವೇರಿಯ ರೈಲ್ವೇ ಅಂಡರ್ ಬ್ರಿಡ್ಜ್ ಕೆಳಗೆ ನೀರು ನಿಂತು ಕೆಲಕಾಲ ಸಂಚಾರ ಸ್ಥಗಿತಗೊಂಡಿತು.
ತುಮಕೂರು ನಗರದಲ್ಲೂ ಸುಮಾರು ಎರಡು ಗಂಡೆಗಳ ಕಾಲ ಮಳೆಯಾಗಿದೆ. ಪಾದಚಾರಿಗಳು, ವಾಹನ ಸವಾರರು ತೊಂದರೆ ಅನುಭವಿಸಿದರು. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದರಿಂದ ಜನರು ಸಂಕಷ್ಟಕ್ಕೀಡಾದರು. ನಗರದ ಸಮೀಪವಿರುವ ರಾಷ್ಟ್ರೀಯ ಹೆದ್ದಾರಿಯ ಅಂಡರ್ಪಾಸ್ಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಯಿತು. ಟ್ರಾಫಿಕ್ ಜಾಮ್‌ನಿಂದಾಗಿ ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಯಿತು.
ಇದನ್ನೂ ಓದಿ: ತುಮಕೂರು, ಹಾವೇರಿ ಸೇರಿದಂತೆ ರಾಜ್ಯದ ವಿವಿಧೆಡೆ ಧಾರಾಕಾರ ಮಳೆ... ಜನರ ಪರದಾಟ