ಬೆಂಗಳೂರು: ರಾಜಧಾನಿಯಲ್ಲಿ ವರುಣನ ಅಬ್ಬರ ಹೆಚ್ಚಾಗಿದೆ. ಕಳೆದ ನಾಲ್ಕು ದಿನಗಳಿಂದ ಬಿಡದೇ ಮಳೆಯಾಗುತ್ತಿದ್ದು, ಭಾರಿ ಅವಾಂತರಗಳು ಉಂಟಾಗಿವೆ. ನಿನ್ನೆ ರಾತ್ರಿ ಪಾಳ್ಯ ಮುಖ್ಯರಸ್ತೆಯ ನಡು ರಸ್ತೆಯೇ ಕುಸಿಯಿತು. ರಸ್ತೆ ಕುಸಿದಿರುವ ಜಾಗದಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ಶೇಷಾದ್ರಿಪುರಂ ಪೊಲೀಸ್ ಠಾಣೆ ಎದುರಿನ ರಸ್ತೆಯಲ್ಲಿ ಗುಂಡಿ ಬಿದ್ದಿದೆ. ಆನಂದ್ ರಾವ್ ಸರ್ಕಲ್ಗೆ ಸಂಪರ್ಕ ಕಲ್ಪಿಸುವ ರಸ್ತೆ ಧಾರಾಕಾರ ಮಳೆಗೆ ಕಿತ್ತು ಬಂದಿದೆ.
ರಾತ್ರಿ ಸುರಿದ ಮಳೆಯಿಂದಾಗಿ ಶಿವಾನಂದ ರೈಲ್ವೆ ಅಂಡರ್ ಪಾಸ್ ಬಳಿ ನೂರು ಮೀಟರ್ನಷ್ಟು ರಸ್ತೆ ಕೊಚ್ಚಿ ಹೋಗಿದೆ. ರಸ್ತೆಯಲ್ಲಿ ಸಂಚರಿಸಲು ವಾಹನ ಸವಾರರು ಪರದಾಡುತ್ತಿದ್ದರು.
ಮಳೆಯಿಂದ ಬೇಸತ್ತು ಬ್ಯಾಂಕ್ ಶಿಫ್ಟ್‌ಗೆ ನಿರ್ಧಾರ?: ರೈನ್ ಬೋ ಡ್ರೈವ್ ಲೇಔಟ್ನಲ್ಲಿ ಮಳೆ ನೀರು ನಿಂತಿದೆ. ಪದೇ ಪದೇ ಲೇಔಟ್ ಒಳಗೆ ಮಳೆ ನೀರು ನುಗ್ಗುತ್ತಿದ್ದು ಲೇಔಟ್ ಒಳಗಿನ ಬ್ಯಾಂಕ್ ಶಿಫ್ಟ್ ಮಾಡಲು ನಿರ್ಧರಿಸಲಾಗಿದೆ ಎನ್ನಲಾಗುತ್ತಿದೆ.
ತಂದೆ, ಮಗಳಿಗೆ ಗಾಯ: ರಸ್ತೆ ಕಿತ್ತುಹೋಗಿದ್ದರಿಂದ ಬೈಕ್ನಿಂದ ಬಿದ್ದು ಸವಾರನಿಗೆ ಗಾಯಗಳಾದ ಘಟನೆಯೂ ನಡೆದಿದೆ. ಶಾಲೆಗೆ ಮಗಳನ್ನು ತಂದೆ ಕರೆದುಕೊಂಡು ಹೋಗುತ್ತಿದ್ದಾಗ ಸಮತೋಲನ ತಪ್ಪಿ ಬೈಕ್ ಸ್ಕಿಡ್ ಆಗಿದೆ. ಇದರಿಂದ ತಂದೆ ಹಾಗು ಮಗಳಿಗೆ ತೀವ್ರ ಗಾಯಗಳಾಗಿವೆ.
ಹೆಚ್‌ಎಸ್ಆರ್ ಲೇಔಟ್ನಲ್ಲಿ ಮನೆಗಳ ಬೇಸ್‌ಮೆಂಟ್‌ನಲ್ಲಿ ಐದಾರು ಅಡಿಗಳಷ್ಟು ನೀರು ನಿಂತಿದೆ. ಮಳೆ ಬಂದಾಗಲೆಲ್ಲಾ 5-6 ಅಡಿಗಳಷ್ಟು ನೀರು ನಿಲ್ಲುತ್ತದೆ. ಅವೈಜ್ಞಾನಿಕ ಚರಂಡಿ ಕಾಮಗಾರಿಯಿಂದ ಹೀಗಾಗುತ್ತಿದೆ. ಬೇಸ್‌ಮೆಂಟ್‌ನಲ್ಲಿ ಯಾವ ವಸ್ತುಗಳನ್ನೂ ಇಡಲಾಗುವುದಿಲ್ಲ ಎಂದು ಅಧಿಕಾರಿಗಳ ವಿರುದ್ಧ ನಿವಾಸಿಗಳು ಆಕ್ರೋಶ ಹೊರಹಾಕಿದರು.
ರಾತ್ರಿ ಸುರಿದ ಮಳೆಗೆ ಫ್ರೇಜರ್ ಟೌನ್ನಲ್ಲಿ ತಡೆಗೋಡೆ ಕುಸಿದಿದೆ. ಖಾಲಿ ಮೈದಾನದ ಬಳಿ ಗೋಡೆ ಕುಸಿದಿದೆ. ಮತ್ತೆ ಮಳೆಗೆ ಪಕ್ಕದಲ್ಲೇ ಇದ್ದ ಕಟ್ಟಡಕ್ಕೆ ಹಾನಿಯಾಗುವ ಭೀತಿ ಎದುರಾಗಿದೆ.
ಇದನ್ನೂ ಓದಿ: ಬೆಣ್ಣೆ ನಗರಿಯಲ್ಲಿ ಮುಂದುವರೆದ ಮಳೆ ಅವಾಂತರ.. ಅಡಕೆ ತೋಟಗಳು ಜಲಾವೃತ, ಹೈರಾಣಾದ ರೈತ