ಬೆಂಗಳೂರು: ಇಷ್ಟು ದಿನ ಚಳಿಯಿಂದ ನಡುಗುತ್ತಿದ್ದ ಬೆಂಗಳೂರಲ್ಲಿ ಇಂದು ಬೆಳಗ್ಗೆಯೇ ಧಾರಾಕಾರ ಮಳೆಯಾಗಿದೆ. ರಾತ್ರಿಯಿಡೀ ಸೋನೆ ಮಳೆ ಬೀಳುತ್ತಿತ್ತು. ಬೆಳಗಾಗುತ್ತಿದ್ದಂತೆ ಮಳೆ ಜೋರಾಯಿತು. ಬೆಳಗ್ಗೆಯಿಂದಲೇ ಮಳೆಯಾಗುತ್ತಿದ್ದರಿಂದ ಕೆಲಸಕ್ಕೆ ತೆರಳುವವರು, ವಾಹನ ಸವಾರರಿಗೆ ಕಿರಿಕಿರಿಯಾಯಿತು. ನಗರದಲ್ಲಿ ಟ್ರಾಫಿಕ್ ದಟ್ಟಣೆಯೂ ಹೆಚ್ಚಾಯಿತು.
ರಾಜಾಜಿನಗರ, ಹನುಮಂತನಗರ, ಮೆಜೆಸ್ಟಿಕ್, ಗಿರಿನಗರ, ಜಯನಗರ ಹಾಗು ಎಂಜಿ ರಸ್ತೆ ಸೇರಿದಂತೆ ನಗರದಾದ್ಯಂತ ಮಳೆ ಸುರಿಯುತ್ತಿದೆ. ನಿನ್ನೆ ಇಡೀ ದಿನ ಮೋಡ ಕವಿದ ವಾತಾವರಣದ ಜೊತೆಗೆ ತುಂತುರು ಮಳೆಯಿತ್ತು. ಇನ್ನೂ ಎರಡು ದಿನ ಇದೇ ರೀತಿಯ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ನಾಳೆಯೂ ಮಳೆ ಮುನ್ಸೂಚನೆ ಇದೆ. ಕರಾವಳಿ ಹಾಗೂ ಉತ್ತರ ಒಳನಾಡಿನ ಒಂದೆರಡು ಕಡೆ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಲ್ಲಿ ಗರಿಷ್ಠ 26 ಡಿಗ್ರಿ ಹಾಗೂ ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರುವ ಸಂಭವವಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು ರಾಜ್ಯದಲ್ಲಿ ವಾರಾಂತ್ಯದವರೆಗೂ ಮಳೆ, ಮೋಡ ಕವಿದ ವಾತಾವರಣ ಹಾಗೂ ಅಲ್ಲಲ್ಲಿ ತುಂತುರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಕೊರೆಯುವ ಚಳಿ ಜೊತೆ ತುಂತುರು ಮಳೆ