ಬೆಂಗಳೂರು: ನಗರದಲ್ಲಿ ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಸುಬ್ರಮಣ್ಯ ನಗರದ 14ನೇ ಕ್ರಾಸ್ ಬಳಿಯಿರುವ ಕಟ್ಟಡವೊಂದು ಕುಸಿಯುವ ಆತಂಕ ಎದುರಾಗಿದೆ. ಮನೆಗೆ ಅಂಟಿಕೊಡಂತೆ ಇರುವ ಕಟ್ಟಡವೊಂದರ ಪಕ್ಕದಲ್ಲಿ ನಿರ್ಮಾಣ ಹಂತದ ಕಟ್ಟಡಕ್ಕೆ ಪಾಯ ಹಾಕುವಾಗ ಮಳೆ ನೀರಿನಿಂದಾಗಿ ತೇವಾಂಶವಿದ್ದ ಮಣ್ಣು ಸಡಿಲಗೊಂಡಿದೆ.
ಹೀಗಾಗಿ ಸುಮಾರು ಶೇ.20 ರಷ್ಟು ಭಾಗದಷ್ಟು ಮಣ್ಣು ಕುಸಿತಗೊಂಡಿದ್ದು ಮನೆಯವರು ಆತಂಕದಲ್ಲಿದ್ದಾರೆ.ಅಷ್ಟಕ್ಕೂ ಅಲ್ಲಾಗಿದ್ದೇನು ಅನ್ನೋದನ್ನ ನೋಡೋದಾದ್ರೆ, ಕೃಷ್ಣಮೂರ್ತಿ ಹಾಗೂ ಮಹಲಿಂಗಪ್ಪ ಎಂಬುವರ ಎರಡು ಮನೆಯ ಹಿಂಭಾಗದಲ್ಲಿ ಸುನಿತಾ ಎಂಬುವರು ಹೊಸ ಕಟ್ಟಡವನ್ನು ನಿರ್ಮಿಸುತ್ತಿದ್ದರು. ಕೃಷ್ಣಮೂರ್ತಿ ಹಾಗೂ ಮಹಲಿಂಗಪ್ಪ ಮನೆಯವ್ರು ಹೀಗೆ ಆದರೆ ನಮ್ಮ ಮನೆಗೆ ಡ್ಯಾಮೇಜ್ ಆಗತ್ತೆ ಅಂತಾ ಹೇಳಿದ್ರು ಕ್ಯಾರೆ ಅನ್ನದೇ ಕಟ್ಟಡ ನಿರ್ಮಾಣ ಮಾಡಲಾರಂಭಿಸಿದ್ದಾರೆ.
ಅಲ್ಲದೇ ಗೋಡೆ ನಿರ್ಮಾಣ ಮಾಡಿ ಅಂತಾ ಇವರೇ ಹಣ ಕೊಟ್ಟಿದ್ದಾರೆ. ಆದರೆ ಕಾಟಾಚಾರಕ್ಕೆ ಗೋಡೆ ನಿರ್ಮಿಸಿ ಮತ್ತೆ ಕಟ್ಟಡ ಕಾರ್ಯ ಆರಂಭಿಸಿದ್ದಾರೆ. ಹೀಗಿರುವಾಗ ಇಂದು ಮಧ್ಯಾಹ್ನ 3.45 ರ ಸುಮಾರಿಗೆ ಎರಡು ಕಟ್ಟಡದ ಹಿಂಭಾಗದ ಮಣ್ಣು ಕುಸಿದಿದೆ. ಇದರಿಂದ ಆತಂಕಗೊಂಡ ಮನೆಯವರು ಹೊರ ಓಡಿ ಬಂದಿದ್ದಾರೆ. ಸದ್ಯ ಮನೆಯವರನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಲಾಗ್ತಿದ್ದು, ಕುಸಿದ ಜಾಗದಲ್ಲಿ ಗೋಡೆ ಕಟ್ಟಲು ಮುಂದಾಗಿದ್ದಾರೆ.
ಇನ್ನೂ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಸುಬ್ರಮಣ್ಯ ನಗರ ಕಾರ್ಪೋರೇಟರ್ ಹೆಚ್.ಮಂಜುನಾಥ್, ಈ ವಿಚಾರ ಮೊದಲೇ ನಮ್ಮ ಗಮನಕ್ಕೆ ಬಂದಿತ್ತು. ಹಿಂಬದಿಯ ಮನೆ ಮಾಲೀಕರು ಹಾಗೂ ಸುನಿತಾರನ್ನು ಕೂರಿಸಿ ಮಾತುಕತೆ ನಡೆಸಿದ್ದೆವು. ಗೋಡೆ ಕಟ್ಟಿ ಕಟ್ಟಡ ನಿರ್ಮಿಸುವಂತೆ ತಿಳಿಸಿದ್ದೆವು. ಇದಕ್ಕೆ ಅವರು ಕೂಡ ಒಪ್ಪಿಕೊಂಡಿದ್ದರು. ಅದಾದ ನಂತರ ಮೂರು ಮನೆಯವರ ನಡುವೆ ಮಾತುಕತೆ ನಡೆದಿದರೂ ಈ ಘಟನೆ ನಡೆದಿದೆ. ಸದ್ಯ ಮೂರೂ ಮನೆಯ ಮಾಲೀಕರು ಸ್ಥಳದಲ್ಲೇ ಇದ್ದಾರೆ. ಪರ್ಯಾಯ ವ್ಯವಸ್ಥೆ ಬಗ್ಗೆ ಬಿಬಿಎಂಪಿ ಇಂಜಿನಿಯರ್ಸ್ ಗಳು ಪರಿಶೀಲಿಸುತ್ತಿದ್ದಾರೆ ಎಂದರು.