ಬೆಂಗಳೂರು: ಮಹಾನಗರ ಕೆಳಗಡೆ ಬಾರಿ ಮಳೆಯಾಗುತ್ತಿರುವ ಹಿನ್ನೆಲೆ ಬೆಂಗಳೂರು ದಕ್ಷಿಣ ಜಿಲ್ಲೆಯ ವಿವಿಧ ಶಾಲೆ - ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ನಗರದಲ್ಲಿನ ವರುಣನ ಆರ್ಭಟ ಜೋರಾಗಿರುವುದು ಹಬ್ಬದ ತಯಾರಿಯ ಸಂಭ್ರಮಕ್ಕೆ ಬ್ರೇಕ್ ಹಾಕಿದೆ. ಸಂಜೆಯಿಂದ ಮಳೆ ಎಡಬಿಡದೇ ಸುರಿದಿದ್ದು. ನಗರದಾದ್ಯಂತ ಹಲವಾರು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಬೆಂಗಳೂರು ನಗರದ ಮೆಜೆಸ್ಟಿಕ್, ಕಾರ್ಪೊರೇಷನ್, ಬಸವನಗುಡಿ, ಶೇಷಾಪುರಂ, ಜಯನಗರ, ಎಂಜಿ ರೋಡ್, ಕೆ.ಆರ್.ಮಾರುಕಟ್ಟೆ, ರಾಜಾಜಿನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ಮಳೆಯಾಗಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ ಭಾಗದ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಬೆಂಗಳೂರು ನಗರ ಜಿಲ್ಲಾಡಳಿತ, ಬೆಂಗಳೂರು ನಗರ ಜಿಲ್ಲೆಯ ಶಾಲಾ - ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ.
ಭಾರಿ ಮಳೆಯಾಗುತ್ತಿರುವ ಕಾರಣ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾಧಿಕಾರಿಗಳ ಅನುಮತಿಯ ಮೇರೆಗೆ ಇಂದು ಬೆಂಗಳೂರು ನಗರ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ ಮಾಡಿರುವುದಾಗಿ ಬೆಂಗಳೂರು ದಕ್ಷಿಣ ವಿಭಾಗದ ಡಿಡಿಪಿಐ ಬೈಲಾಂಜನಪ್ಪ ಮಾಹಿತಿ ನೀಡಿದ್ದಾರೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ರಾಜ್ಯದಲ್ಲಿ ಆ.30ರಿಂದ ಸೆ.1ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಭಾರಿ ಮಳೆಗೆ ಸಿಲಿಕಾನ್ ಸಿಟಿಯಲ್ಲಿ ಅವಾಂತರ ಸೃಷ್ಟಿ: ನಗರದ ಹಲವೆಡೆ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ಟ್ರಾಫಿಕ್ ಜಾಮ್ ಉಂಟಾಗಿದೆ. ಆಟೋ, ದ್ವಿಚಕ್ರ ವಾಹನ ಸವಾರರ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಮೆಜೆಸ್ಟಿಕ್, ರಾಜಾಜಿನಗರ, ಬಸವೇಶ್ವರ ನಗರ, ಶೇಷಾದ್ರಿಪುರಂ, ವಿಜಯನಗರ, ಶಾಂತಿನಗರ, ವಸಂತ ನಗರ, ಕೆ.ಆರ್ ಮಾರ್ಕೆಟ್, ಕಾರ್ಪೋರೇಷನ್, ಲಾಲ್ ಬಾಗ್, ಸುದಾಮ್ ನಗರ, ಜಯನಗರ, ಜೆ.ಪಿ ನಗರ, ಚಾಮರಾಜಪೇಟೆ, ಬಸವನಗುಡಿ, ಶಾಂತಿನಗರ, ಕೋರಮಂಗಲ, ಪ್ಯಾಲೇಸ್ ರಸ್ತೆ, ಮಲ್ಲೇಶ್ವರಂ, ಹೆಬ್ಬಾಳ ಸೇರಿದಂತೆ ಹಲವಾರು ಕಡೆಗಳಲ್ಲಿ ಭಾರಿ ಮಳೆ ಸುರಿದಿದೆ.
ಬೃಹತ್ ಮರದ ಕೊಂಬೆ ಧರೆಗೆ: ಮಳೆಯಿಂದಾಗಿ ಬೃಹತ್ ಮರದ ಕೊಂಬೆ ಧರೆಗುರುಳಿದ್ದು, ಘಟನೆ ಮಲ್ಲೇಶ್ವರಂ 8ನೇ ಕ್ರಾಸ್ ನಲ್ಲಿ ನಡೆದಿದೆ. ಪರಿಣಾಮ ರಸ್ತೆ ಬದಿ ನಿಲ್ಲಿಸಿದ್ದ ಕಾರ್ ಜಖಂ ಗೊಂಡಿದೆ. ಕಾರಿನಲ್ಲಿ ಯಾರೂ ಇರದಿದ್ದರಿಂದ ಅನಾಹುತ ತಪ್ಪಿದೆ. ಬಾಣಸವಾಡಿಯ ಐಟಿಸಿ ಫ್ಯಾಕ್ಟರಿ ಬಳಿ ಧರೆಗುರುಳಿದ ಮರದ ಕೊಂಬೆ ಬಿದ್ದು ಅವಾಂತರ ಸೃಷ್ಟಿಯಾಗಿದೆ.
ಇದನ್ನೂ ಓದಿ : ರಾಜ್ಯದಲ್ಲಿ ಸೆಪ್ಟೆಂಬರ್ 2ರವರೆಗೆ ಮಳೆ.. ಹವಾಮಾನ ಇಲಾಖೆ ಮುನ್ಸೂಚನೆ