ಬೆಂಗಳೂರು : ಮುಂದಿನ ಎರಡು ದಿನ ರಾಜ್ಯದಲ್ಲಿ ಮಳೆ ಪ್ರಮಾಣ ಹೆಚ್ಚಾಗಲಿದೆ. ಪೂರ್ವ ಅರಬ್ಬೀ ಸಮುದ್ರದಲ್ಲಿ, ಕರ್ನಾಟಕ, ಕೇರಳ, ಮಹಾರಾಷ್ಟ್ರ ಕರಾವಳಿ ಭಾಗಗಳಲ್ಲಿ ದಟ್ಟನೆಯ ಮೋಡ ಕವಿದ ಕಾರಣ ಹಾಗೂ ಕರ್ನಾಟಕದ ಉತ್ತರ ಒಳನಾಡಿನಲ್ಲಿ ಮಳೆ ವಾತಾವರಣ ಇರುವುದರಿಂದ ಜುಲೈ 14 ಹಾಗೂ 15 ರಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮಳೆಯಾಗುವ ಹೆಚ್ಚಿನ ಸಾಧ್ಯತೆ ಇದೆ.
ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಮಳೆ ಮುಂದುವರಿಯಲಿದೆ. ಉತ್ತರಕನ್ನಡ, ದ.ಕನ್ನಡ, ಉಡುಪಿ ಜಿಲ್ಲೆಗಳಲ್ಲಿ 14 ರಿಂದ 17ರವರೆಗೆ ಭಾರೀ ಮಳೆಯಾಗಲಿದೆ. ಹೀಗಾಗಿ ಯೆಲ್ಲೋ ಅಲರ್ಟ್ ನೀಡಲಾಗಿದೆ. ಜುಲೈ ಹದಿನೈದರಿಂದ ಮಳೆ ಪ್ರಮಾಣ ಏರಿಕೆಯಾಗಲಿದ್ದು, ಆರೇಂಜ್ ಅಲರ್ಟ್ ನೀಡಲಾಗಿದೆ. ಕರ್ನಾಟಕದ ಒಳನಾಡಿನಲ್ಲಿ ಉತ್ತರ ಒಳನಾಡಿನಲ್ಲಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಜುಲೈ 16ರಿಂದ 18ರವರೆಗೆ ಮಳೆ ಪ್ರಮಾಣ ತಗ್ಗಿದರೂ, ಹಗುರದಿಂದ ಸಾಧಾರಣವಾಗಿ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಮಳೆಯಾಗಲಿದೆ.
ಬೀದರ್, ಗುಲ್ಬರ್ಗಾ, ಯಾದಗಿರಿ, ವಿಜಯಪುರ, ಧಾರವಾಡ, ಬಾಗಲಕೋಟೆ, ಹಾವೇರಿ, ಗದಗ, ಕೊಪ್ಪಳ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗಿನಲ್ಲಿ ಅಲ್ಲಲ್ಲಿ ಭಾರೀ ಮಳೆಯಾಗಲಿರುವುದರಿಂದ ಜುಲೈ 14-15ರಂದು ಎಲ್ಲೋ ಅಲರ್ಟ್ ಘೋಷಿಸಿಲಾಗಿದೆ. ಬೆಂಗಳೂರಿನಲ್ಲೂ ಜುಲೈ 14, 15ರಂದು ಮಳೆ ನಿರೀಕ್ಷಿಸಬಹುದು ಎಂದು ಹವಾಮಾನ ಇಲಾಖಾ ತಜ್ಞ ಸಿ ಎಸ್ ಪಾಟೀಲ್ ತಿಳಿಸಿದ್ದಾರೆ.