ಬೆಂಗಳೂರು: ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಸೋಲು-ಗೆಲುವಿನ ಲೆಕ್ಕಾಚಾರದ ಕುತೂಹಲ ಹೆಚ್ಚಾಗುತ್ತಿದೆ. ಇನ್ನು ಮಂಡ್ಯ ವಿಚಾರಕ್ಕೆ ಸಂಬಧಪಟ್ಟಂತೆ ಸ್ವಲ್ಪ ಜಾಸ್ತಿನೇ ಇದೆ ಎನ್ನಲಾಗುತ್ತಿದೆ. ಹುಮ್ಮಸ್ಸಿನಲ್ಲಿರುವ ಕೆಲವರು ಹಣಕ್ಕೆ ಬೆಟ್ಟಿಂಗ್ ಮಾಡಿದ್ರೆ, ಕೆಲವರು ಕೋಳಿ, ಕುರಿ, ಜಮೀನು, ಜಾನುವಾರುಗಳನ್ನಿಟ್ಟು ಬೆಟ್ಟಿಂಗ್ ದಂಧೆಗಿಳಿದಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಈಟಿವಿ ಭಾರತ್ ಜೊತೆ ಮಾತನಾಡಿದ ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ ) ಕಮಲ್ ಪಂತ್, ಬೆಟ್ಟಿಂಗ್ ದಂಧೆ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಇಂತಹ ಕೇಸ್ಗಳ ಬಗ್ಗೆ ಗಮನ ಹರಸಿ ದಂಧೆಕೋರರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಆದೇಶ ಮಾಡಿದ್ದಾರೆ.
ಹೀಗಾಗಿ ಕಮಿಷನರ್, ಜಿಲ್ಲಾ ಎಸ್ಪಿ, ಡಿಸಿಪಿ, ಹಿರಿಯ ಅಧಿಕಾರಿಗಳಿಗೆ ಸೂಚನೆ ಕೂಡ ಕೊಡಲಾಗಿದೆ. ಒಂದು ವೇಳೆ ಬೆಟ್ಟಿಂಗ್ ದಂಧೆ ಕಂಡುಬಂದರೆ ಅಲ್ಲದೆ ದಂಧೆಯಲ್ಲಿ ತೊಡಗಿರುವ ವಿಚಾರ ತಿಳಿದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಲಾಗಿದೆ ಎಂದು ಕಮಲ್ ಪಂತ್ ಮಾಹಿತಿ ನೀಡಿದ್ದಾರೆ.
ಮಂಡ್ಯ ಕ್ಷೇತ್ರದಲ್ಲಿ ಹೆಚ್ಚಿದೆ ಭದ್ರತೆ:
ಮಂಡ್ಯ ಬಹಳಷ್ಟು ಸೂಕ್ಷ್ಮ ಕ್ಷೇತ್ರವೆಂದು ಗುರುತಿಲಾಗಿದೆ. ಅಂದು ಇಲ್ಲಿ ಗಲಾಟೆ ನಡೆಯುವ ಸಾಧ್ಯತೆ ಇದೆ. ಹಾಗಾಗಿ ಇಲ್ಲಿ ಹೆಚ್ಚಿನ ಭದ್ರತೆ ಒದಗಿಸಿಲಾಗಿದೆ ಎಂದು ತಿಳಿದು ಬಂದಿದೆ.
ರಾಜ್ಯದ 8 ಕ್ಷೇತ್ರಗಳು ಸೂಕ್ಷ್ಮ ಪ್ರದೇಶ:
ಮಾಹಿತಿ ಪ್ರಕಾರ ರಾಜ್ಯದ 28 ಕ್ಷೇತ್ರದಲ್ಲಿ ಮಂಡ್ಯ, ಕಲಬುರಗಿ, ಸಿಲಿಕಾನ್ ಸಿಟಿ, ಮಂಗಳೂರು ಸೇರಿದಂತೆ 8 ಕ್ಷೇತ್ರಗಳನ್ನು ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿದೆ. ಇನ್ನು ಈ ಕ್ಷೇತ್ರಗಳಿಗೆ ಭೇಟಿ ನೀಡಿದ ಹಿರಿಯ ಅಧಿಕಾರಿಗಳು ಈ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ. ಅಲ್ಲದೆ ನಾಳೆ ಮತ್ತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಅಲ್ಲಿಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಅಂದು ರಾಜ್ಯದಲ್ಲಿ ಐಪಿಸಿ 144 ಸೆಕ್ಷನ್ ಕೂಡ ಜಾರಿಯಲ್ಲಿರಲಿದೆ. ಅಹಿತಕರ ಘಟನೆಗಳು ಸಂಭವಿಸದಂತೆ ತಡೆಯಲು ಗೆದ್ದ ಹಾಗೂ ಸೋತ ಅಭ್ಯರ್ಥಿಗಳ ಪರ-ವಿರೋಧ ಪ್ರತಿಭಟನೆ ಮತ್ತಿತರ ಗಲಭೆಗಳು ನಡೆಯಬಹುದಾದ ಸಾಧ್ಯತೆ ಇದೆ. ಈ ಹಿನ್ನೆಲೆ ಫಲಿತಾಂಶದ ದಿನವಾದ 23ರಂದು ಬೆಳಿಗ್ಗೆ 6 ರಿಂದ ಮಧ್ಯರಾತ್ರಿ 12ರವರೆಗೂ ಪ್ರತಿಬಂಧಕಾಜ್ಞೆ ಅಂದ್ರೆ 5 ಅಥವಾ 5ಕ್ಕಿಂತ ಹೆಚ್ಚು ಜನರ ಗುಂಪು ಸೇರುವಂತಿಲ್ಲ. ಮೆರವಣಿಗೆ ಹಾಗೂ ಸಭೆಗಳನ್ನ (ಮದುವೆ, ಶವಸಂಸ್ಕಾರದ ಮೆರವಣಿಗೆ ಹೊರತುಪಡಿಸಿ) ಸೇರುವಂತಿಲ್ಲ. ದೈಹಿಕ ಹಿಂಸೆ ಮಾಡುವಂತಹ ಕತ್ತಿ, ಚಾಕು, ದೊಣ್ಣೆ ಮುಂತಾದ ಯಾವುದೇ ಮಾರಕಾಸ್ತ್ರಗಳನ್ನ ಒಯ್ಯುವಂತಿಲ್ಲ. ಯಾವುದೇ ಸ್ಫೋಟಕಗಳ ಸಂಗ್ರಹ ಅಥವಾ ಸಿಡಿಸುವಿಕೆ, ಒಯ್ಯುವಿಕೆ ನಿಷಿದ್ಧ. ಪ್ರಚೋದನಕಾರಿ ಘೋಷಣೆ ಕೂಗುವುದು, ಪ್ರತಿಕೃತಿ ಪ್ರದರ್ಶನ, ಭಿತ್ತಿ ಪತ್ರಗಳ ಪ್ರದರ್ಶನ ಮಾಡುವಂತಿಲ್ಲ ಎಂದು ಆದೇಶ ಹೊರಡಿಸಲಾಗಿದೆ.