ಬೆಂಗಳೂರು: ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿ ಕರ್ತವ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ಸಿಬ್ಬಂದಿಗೆ ಏನೆಲ್ಲ ಸೌಲಭ್ಯಗಳನ್ನು ನೀಡಲು ಸಾಧ್ಯವೊ ಅವೆಲ್ಲವನ್ನೂ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ಆಯನೂರು ಮಂಜುನಾಥ್ ಆರೋಪ ಸಂಬಂಧ ಸವಿವರವಾದ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಶ್ರೀನಿವಾಸಚಾರಿ ಸಮಿತಿ ಶಿಫಾರಸುಗಳ ಅನುಷ್ಠಾನ ಸಂಬಂಧ ಸಿಬ್ಬಂದಿ ಸಂಘಟನೆ ಪದಾಧಿಕಾರಿಗಳ (ಕೆಎಸ್‌ಎಚ್‌ಒಸಿಇಎ) ಜತೆ ಅನೇಕ ಸಭೆ ನಡೆಸಿ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಸಂಘಟನೆ ಗೌರವಾಧ್ಯಕ್ಷರಾಗಿರುವ ವಿಧಾನಪರಿಷತ್ ಸದಸ್ಯ ಆಯೂನೂರು ಮಂಜುನಾಥ್ ಮತ್ತು ಹಿರಿಯ ಅಧಿಕಾರಿಗಳು ಕೂಡ ಆ ಸಭೆಗಳಲ್ಲಿ ಪಾಲ್ಗೊಂಡಿದ್ದರು ಎಂದು ಸ್ಪಷ್ಟಪಡಿಸಿದ್ದಾರೆ.
ವಸ್ತುಸ್ಥಿತಿ ಹೀಗಿರುವಾಗ ಶ್ರೀನಿವಾಸಚಾರಿ ಸಮಿತಿ ವರದಿಯನ್ನು ನಿರ್ಲಕ್ಷಿಸಲಾಗಿದೆ. ಒಂದು ವರ್ಷವಾದರೂ ಯಾವ ಕ್ರಮ ಕೈಗೊಂಡಿಲ್ಲ ಎಂದು ಆಯನೂರು ಮಂಜುನಾಥ್ ಏಕೆ ಹೇಳಿಕೆ ನೀಡಿದರೋ ಗೊತ್ತಿಲ್ಲ. ಸಭೆಗಳಲ್ಲಿ ಕೈಗೊಂಡ ನಿರ್ಧಾರ ಮತ್ತು ಅಧಿಕಾರಿಗಳಿಗೆ ನೀಡಲಾದ ಸೂಚನೆಗಳ ಬಗ್ಗೆ ಅವರೇ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ,ಇದ್ದಕ್ಕಿದ್ದಂತೆ ವ್ಯತಿರಿಕ್ತ ಹೇಳಿಕೆ ನೀಡಿರುವುದು ಆಶ್ಚರ್ಯ ಉಂಟು ಮಾಡಿದೆ ಎಂದಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ನವರು ಅವರ ಗುಂಡಿ ಅವರೇ ತೋಡಿಕೊಳ್ಳುತ್ತಿದ್ದಾರೆ: ಸಚಿವ ಅಶ್ವತ್ಥನಾರಾಯಣ ಕಿಡಿ
ಸಂಘಟನೆ, ಹೋರಾಟಗಳ ಮೂಲಕ ಸಾರ್ವಜನಿಕ ಬದುಕಿನಲ್ಲಿರುವ ಆಯನೂರು ಮಂಜುನಾಥ್ ಅವರ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದೇನೆ. ಆದರೆ ವಾಸ್ತವಕ್ಕೆ ವಿರುದ್ಧವಾಗಿ ಅವರು ಹೇಳಿಕೆ ನೀಡಿರುವುದು ಸರಿಯಲ್ಲ. ವರದಿಯ ಬಹುತೇಕ ಶಿಫಾರಸುಗಳ ಈಡೇರಿಕೆಗೆ ನಿರ್ಣಯ ಕೈಗೊಳ್ಳಲಾಗಿದೆ. ಈ ಬಗ್ಗೆ ಇಲಾಖೆಯಲ್ಲಿ ಮಾಹಿತಿ ಪಡೆದುಕೊಳ್ಳಬಹುದು. ಗುತ್ತಿಗೆ ನೌಕರರ ಸೇವೆ ಕಾಯಂಗೊಳಿಸುವ ಬೇಡಿಕೆ ಆರೋಗ್ಯ ಇಲಾಖೆಗೆ ಸೀಮಿತವಾದ ವಿಷಯವಲ್ಲ. ಎನ್‌ಎಚ್‌ಎಂ ಅಡಿ ಸೇವೆ ಸಲ್ಲಿಸುವ ಸಿಬ್ಬಂದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೇ. 60:40 ಅನುಪಾತದಲ್ಲಿ ವೆಚ್ಚ ಭರಿಸುತ್ತಿವೆ. ಹೀಗಾಗಿ ಕೇಂದ್ರ ಸರ್ಕಾರ ಆ ಬಗ್ಗೆ ನಿರ್ಣಯ ಕೈಗೊಳ್ಳಬೇಕು.
ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿ ಮನವಿ: ಬಹುತೇಕ ಎಲ್ಲ ಇಲಾಖೆಗಳಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಗಳು ಸೇವೆ ಸಲ್ಲಿಸುತ್ತಿದ್ದಾರೆ. ಒಟ್ಟಾರೆ ಅವರೆಲ್ಲರಿಗೂ ಅನ್ವಯ ಆಗುವಂತೆ ನಿರ್ಣಯ ಕೈಗೊಳ್ಳಬೇಕಾಗುತ್ತದೆ. ಇದಕ್ಕೆ ದೊಡ್ಡ ಮಟ್ಟದಲ್ಲಿ ಸಂಪನ್ಮೂಲ ಬೇಕಾಗುತ್ತದೆ. ಇಷ್ಟಾದರೂ ಸಿಬ್ಬಂದಿಗಳ ಸೇವೆ ಕಾಯಂಗೊಳಿಸಬೇಕು ಎಂಬ ಬೇಡಿಕೆಯನ್ನು ಸಹಾನುಭೂತಿಯಿಂದ ಪರಿಗಣಿಸವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿ ಮನವಿ ಮಾಡಲಾಗಿದೆ ಎಂದಿದ್ದಾರೆ.
ನನ್ನ ಕಾರ್ಯಕ್ಷಮತೆ ಏನು ಎಂಬುದು ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಮತ್ತು ರಾಜ್ಯದ ಜನಕ್ಕೆ ಅರ್ಥವಾಗಿದೆ. ಸಚಿವನಾಗಿ ಅಧಿಕಾರ ವಹಿಸಿಕೊಂಡ ಮೇಲೆ ಸಿಬ್ಬಂದಿಗೆ ಸೌಲಭ್ಯಗಳನ್ನು ಒದಗಿಸುವ ವಿಷಯದಲ್ಲಿ ನಾನು ಕೈಗೊಂಡಿರುವ ನಿರ್ಧಾರಗಳ ಬಗ್ಗೆ ತೃಪ್ತಿಯಿದೆ. ಸಿಬ್ಬಂದಿ ಸೌಲಭ್ಯಗಳ ಬಗ್ಗೆ ಯಾವುದೇ ಮಾಹಿತಿ ಬೇಕಿದ್ದರೂ ಇಲಾಖೆಯಲ್ಲಿ ಕೇಳಿ ತಿಳಿದುಕೊಳ್ಳಬಹುದು. ಕಾನೂನು ವ್ಯಾಪ್ತಿಗೆ ಸೀಮಿತವವಾದ, ಸರ್ಕಾರಗಳ ನೀತಿ ನಿರೂಪಣೆಗೆ ಸಂಬಂಧಿಸಿದ ವಿಷಯಗಳನ್ನು ಸಂಬಂಧಿಸಿದವರ ಗಮನಕ್ಕೆ ತಂದು ಅಗತ್ಯ ಕ್ರಮಕ್ಕೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಸುಧಾಕರ್ ಕೊಟ್ಟ ಸಾಧನೆಗಳ ವಿವರ ಹೀಗಿದೆ: ವೇತನ ಹೆಚ್ಚಳ: ಎನ್‌ಎಚ್‌ಎಂ ಅಡಿ ಸೇವೆ ಸಲ್ಲಿಸುತ್ತಿರುವ ಗುತ್ತಿಗೆ ಸಿಬ್ಬಂದಿಗೆ ಶೇ.5 ವಾರ್ಷಿಕ ವೇತನ ಹೆಚ್ಚಳ, 3 ವರ್ಷ ಸೇವೆ ಪೂರೈಸಿದವರಿಗೆ ಹೆಚ್ಚುವರಿಯಾಗಿ ಶೇ.10, 5 ವರ್ಷ ಪೂರೈಸಿದವರಿಗೆ ಶೇ.5 ರಷ್ಟು (ಎಕ್ಸ್‌ಪೀರಿಯನ್ಸ್ ಬೋನಸ್) ನೀಡಲಾಗುತ್ತಿದೆ. 2021-22 ನೇ ಸಾಲಿನಲ್ಲಿ 15 ಸಾವಿರಕ್ಕಿಂತ ಕಡಿಮೆ ಮಾಸಿಕ ವೇತನ ಪಡೆಯುತ್ತಿದ್ದ 3308 ಸಿಬ್ಬಂದಿಗಳಿಗೆ ಶೇ.15 ಹೆಚ್ಚುವರಿ ಮೊತ್ತ 4.5 ಕೋಟಿ ರೂ. ಅನುಮೋದನೆಯಾಗಿದೆ.
ವಿಮಾ ಯೋಜನೆ: ಗುತ್ತಿಗೆ ನೌಕರರಿಗೆ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ ಅಡಿ ಆರೋಗ್ಯ ವಿಮೆಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಡಿ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ.
ವರ್ಗಾವಣೆ: ಕಾನೂನು ಇಲಾಖೆ ಅಭಿಪ್ರಾಯದಂತೆ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿರುವ ಸಿಬ್ಬಂದಿಗೆ ಅಂತರ ಜಿಲ್ಲಾ ವರ್ಗಾವಣೆಗೆ ಅವಕಾಶ ಇರುವುದಿಲ್ಲ. ಆದಾಗ್ಯೂ ಜಿಲ್ಲಾ ವ್ಯಾಪ್ತಿಯಲ್ಲಿ ಒಂದು ಭಾರಿ ಪರಸ್ಪರ ಒಪ್ಪಿಗೆ ಮೇರೆಗೆ ವರ್ಗಾವಣೆಗೆ ಅವಕಾಶ ನೀಡಲಾಗಿದೆ.
ಕ್ಷೇಮ ನಿಧಿ: ಮರಣ ಅಥವಾ ಶಾಶ್ವತ ಅಂಗವೈಕಲ್ಯ ಮತ್ತು ಭಾಗಶಃ ಅಂಗ ವೈಕಲ್ಯ ಸಂದರ್ಭದಲ್ಲಿ ಪರಿಹಾರ ನೀಡಲು ಪ್ರತ್ಯೇಕ ಖಾತೆ ತೆರೆಯಲು ಹಣಕಾಸು ಇಲಾಖೆ ಅನುಮತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಲ್ಲದೇ, ಕುಂದುಕೊರತೆ ಆಲಿಸಲು ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ವ್ಯವಸ್ಥೆ ಮಾಡಲಾಗಿದೆ. ಪ್ರತಿ ತಿಂಗಳ 5ರೊಳಗೆ ವೇತನ ಪಾವತಿಗೆ ಸೂಚನೆ ನೀಡಿ ಸುತ್ತೋಲೆ ಹೊರಡಿಸಲಾಗಿದೆ. ಕೋವಿಡ್ ಸಂದರ್ಭದಲ್ಲಿ ತಾತ್ಕಾಲಿಕವಾಗಿ ನೇಮಕ ಮಾಡಿಕೊಂಡಿದ್ದ ಸಿಬ್ಬಂದಿಗೆ ಎನ್‌ಎಚ್‌ಎಂ ಅಡಿ ಖಾಲಿ ಹುದ್ದೆ ಭರ್ತಿ ಮಾಡುವಾಗ ಆದ್ಯತೆ ನೀಡಲು ಸುತ್ತೋಲೆ ಹೊರಡಿಸಲಾಗಿದೆ.