ಬೆಂಗಳೂರು: ರಾಜ್ಯದಲ್ಲಿ ಜನವರಿ 19ರಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ತಿಳಿಸಿದರು.
ವಿಕಾಸಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೋಲಿಯೋ ಲಸಿಕೆ ಸಂಪೂರ್ಣ ಸುರಕ್ಷಿತವಾಗಿದೆ. ಯಾವುದೇ ಸುಳ್ಳು ವದಂತಿಗಳಿಗೆ ಕಿವಿಗೊಡದೆ ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಬೇಕೆಂದು ಮನವಿ ಮಾಡಿದ್ದಾರೆ. ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮ ರಾಜ್ಯಾದ್ಯಂತ ಜ.19ರಂದು ನಡೆಯಲಿದೆ. ಈ ಬಾರಿ 64,65,561 ಮಕ್ಕಳಿಗೆ ಪೋಲಿಯೋ ಹಾಕುವ ಗುರಿ ಹೊಂದಿದ್ದೇವೆ. ಇದಕ್ಕಾಗಿ 33,021 ಪೋಲಿಯೋ ಬೂತ್‌ಗಳನ್ನು ಸ್ಥಾಪನೆ ಮಾಡಲಾಗಿದೆ. ಇದಕ್ಕೆ 46,620 ತಂಡಗಳನ್ನು ರಚಿಸಲಾಗಿದೆ. 1,09,554 ಲಸಿಕಾ ಕಾರ್ಯಕರ್ತರು ಕೆಲಸ ನಿರ್ವಹಿಸಲಿದ್ದು, 977 ಸಂಚಾರಿ ತಂಡಗಳು, 7,105 ಮೇಲ್ವಿಚಾರಕರು, 2,111 ಟ್ರಾನ್ಸಿಟ್ ತಂಡಗಳು ಸಜ್ಜಾಗಿವೆ ಎಂದು ಮಾಹಿತಿ ನೀಡಿದರು.
ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ರಾಜ್ಯ, ಜಿಲ್ಲಾ, ತಾಲೂಕು ಮಟ್ಟದಲ್ಲಿ ಎಲ್ಲ ಇಲಾಖೆಗಳ ಸಮನ್ವಯದೊಂದಿಗೆ ಕಾರ್ಯಕ್ರಮ ನಡೆಸಲಾಗುತ್ತಿದೆ. ಅಲ್ಲದೆ ಇತರೆ ಸಹಕಾರ ಸಂಸ್ಥೆಗಳಾದ ವಿಶ್ವ ಆರೋಗ್ಯ ಸಂಸ್ಥೆ, ಯುನಿಸೆಫ್, ಯುಎನ್‌ಡಿಪಿ, ರೋಟರಿ ಐಎಪಿ ಮತ್ತು ಐಎಂಎಗಳ ಸಹಕಾರವೂ ಇದೆ ಎಂದರು.
ಈ ಹಿಂದೆ ಎಷ್ಟು ಬಾರಿ ಪೋಲಿಯೋ ಲಸಿಕೆ ಪಡೆದಿದ್ದರೂ ಸಹ ಈ ಅಭಿಯಾನದಲ್ಲಿ ಮತ್ತೆ ಲಸಿಕೆ ಹಾಕಿಸುವುದು ಅವಶ್ಯಕ. ಹೆಚ್ಚಿನ ಮಾಹಿತಿ ಪಡೆದುಕೊಳ್ಳಬೇಕಾದರೆ, ಕಿರಿಯ ಆರೋಗ್ಯ ಸಹಾಯಕರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ಸಂಪರ್ಕಿಸಬಹುದು ಅಥವಾ ಉಚಿತ ಆರೋಗ್ಯ ಸಹಾಯವಾಣಿ 104ಕ್ಕೆ ಕರೆ ಮಾಡಬಹುದಾಗಿದೆ. ಇದಲ್ಲದೆ ನಿಮ್ಮ ಮೊಬೈಲ್ನಲ್ಲಿ ಅಂಡ್ರಾಯ್ಡ್ ಆ್ಯಪ್‌ನ ಡೌನ್‌ಲೋಡ್ ಮಾಡಿ ಮನೆಯ ಹತ್ತಿರ ಲಸಿಕಾ ಕೇಂದ್ರಗಳನ್ನು ಗುರುತಿಸುವ ವ್ಯವಸ್ಥೆ ಸಹ ಮಾಡಲಾಗಿದೆ ಎಂದರು.
ಮಂಗನ ಕಾಯಿಲೆ ವಿಚಾರ : ಇದೇ ವೇಳೆ ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಶ್ರೀರಾಮುಲು, ಕಳೆದ ವರ್ಷಕ್ಕೆ ಹೋಲಿಸಿದರೆ ಕಾಯಿಲೆಯ ಪ್ರಮಾಣ ಈಗ ಕಡಿಮೆ ಆಗಿದೆ. ಈಗಾಗಲೇ ಡಿಎಚ್‌ಒಗಳಿಗೆ ಸೂಚನೆ ಕೊಟ್ಟಿದ್ದೇನೆ. ಮಂಗನ ಕಾಯಿಲೆ ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದರು. ಲ್ಯಾಬ್ ಸ್ಥಾಪನೆ ಬಗ್ಗೆ ಕ್ಯಾಬಿನೆಟ್‌ನಲ್ಲಿ ಅಪ್ರೂವಲ್ ಆಗಿದೆ. ಆದಷ್ಟು ಬೇಗ ಡಿಪಿಆರ್ ತಯಾರಾಗುತ್ತದೆ. ಕೆಲಸ ಆರಂಭಿಸುತ್ತೇವೆ. ಸಾಗರದ ಬದಲು ಶಿವಮೊಗ್ಗದಲ್ಲೇ ಲ್ಯಾಬ್ ಸ್ಥಾಪನೆ ಮಾಡಲಾಗುವುದು. ಯಾವುದೇ ರಾಜಕೀಯ ಒತ್ತಡ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ವಾಸ್ತವ್ಯ: ಸರ್ಕಾರಿ ಆಸ್ಪತ್ರೆಗಳಲ್ಲಿ ವಾಸ್ತವ್ಯ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮಾರ್ಚ್ ನಂತರ ಮತ್ತೆ ಆರಂಭವಾಗಲಿದೆ. ಬಜೆಟ್ ಇರುವುದರಿಂದ ಕೆಲಸ ಹೆಚ್ಚಿದೆ. ಹಾಗಾಗಿ, ಆ ಕಡೆ ಗಮನಹರಿಸಿಲ್ಲ. ಬಡವರಿಗೆ ಎಲ್ಲಾ ರೀತಿಯ ಸವಲತ್ತುಗಳು ಸಿಗಬೇಕು. ವೈದ್ಯರು, ನರ್ಸ್‌ಗಳಿಗೆ ಕೆಲ ಸೌಲಭ್ಯಗಳನ್ನು ಒದಗಿಸಬೇಕಿದೆ. 2008ರಲ್ಲಿ 108 ಯೋಜನೆ ತಂದಿದ್ದೆ. ಆರೋಗ್ಯ ಇಲಾಖೆಯಲ್ಲಿ ಪಿಂಕ್ ಬಸ್ ಸೇವೆ ಒದಗಿಸುವ ಯೋಚನೆ ಇದೆ. ಅದಕ್ಕೆ ಬೇಕಾದ ತಯಾರಿ ಮಾಡಿಕೊಳ್ಳುತ್ತಿದ್ದೇವೆ ಎಂದು ಮಾಹಿತಿ ನೀಡಿದರು.