ಬೆಂಗಳೂರು: ''ರೋಮ್ ಹೊತ್ತಿ ಉರಿಯುತ್ತಿರುವಾಗ ಅಲ್ಲಿನ ದೊರೆ ಪಿಟೀಲು ಬಾರಿಸುತ್ತಿದ್ದರೆ, ಮಣಿಪುರ ಹೊತ್ತಿ ಉರಿಯುತ್ತಿರುವಾಗ ಇಲ್ಲಿನ ದೊರೆ ವಿದೇಶ ಪ್ರವಾಸ ಮಾಡುತ್ತಿದ್ದಾರೆ'' ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಲೇವಡಿ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ''ಆಂತರಿಕ ಸಂಘರ್ಷದಿಂದ ಮಣಿಪುರ ಅರಾಜಕತೆಯ ರಾಜ್ಯವಾಗಿದೆ. ಉಗ್ರರ ಮುಂದೆ ಸೇನೆಯೂ ಅಸಹಾಯಕವಾಗಿದೆ. ಮಣಿಪುರದಲ್ಲಿ ಯೋಧರಿಗೇ ರಕ್ಷಣೆಯಿಲ್ಲ. ಹೀಗಿರುವಾಗ ನಾಗರಿಕರ ಜೀವಕ್ಕೆ ರಕ್ಷಣೆ ಒದಗಿಸುವವರು ಯಾರು? ಮಣಿಪುರದಲ್ಲಿ ನಾಗರಿಕ ಯುದ್ಧ ತಾರಕಕ್ಕೇರಿದ್ದರೂ ಕೇಂದ್ರ ಸರ್ಕಾರ ಮೌನವಾಗಿರುವುದ್ಯಾಕೆ? ಕೇಂದ್ರಕ್ಕೆ ದಂಗೆ ನಿಯಂತ್ರಿಸದಷ್ಟು ಹೇಡಿತನವೇ?'' ಎಂದು ಪ್ರಶ್ನಿಸಿದ್ದಾರೆ.
''ಮಣಿಪುರ ಹೊತ್ತಿ ಉರಿಯುತ್ತಿದ್ದರೂ ಸೋ ಕಾಲ್ಡ್ ವಿಶ್ವಗುರು ನರೇಂದ್ರ ಮೋದಿ ತುಟಿ ಬಿಚ್ಚುತ್ತಿಲ್ಲ. ಮಣಿಪುರದಲ್ಲಿ ಶಾಂತಿ ಸ್ಥಾಪನೆಗೆ ಮೋದಿ ಅವರಿಂದ ಒಂದು ಸಣ್ಣ ಪ್ರಯತ್ನವೂ ಆಗಿಲ್ಲ. ರಷ್ಯಾ- ಉಕ್ರೇನ್ ಯುದ್ಧ ನಿಲ್ಲಿಸುವ ಶಕ್ತಿಯಿದೆ ಎಂದು ಬಿಂಬಿಸಿಕೊಳ್ಳುವ ಪ್ರಧಾನಿ ಮೋದಿಗೆ, ತನ್ನದೇ ದೇಶದ ಒಂದು ರಾಜ್ಯದಲ್ಲಿ ನಡೆಯುತ್ತಿರುವ ದಂಗೆ ನಿಲ್ಲಿಸಲು ಸಾಧ್ಯವಿಲ್ಲವೇ?'' ಎಂದು ಕೇಳಿದ್ದಾರೆ.
ಮೋದಿ ವಿರುದ್ಧ ದಿನೇಶ್ ಗುಂಡೂರಾವ್ ಟ್ವೀಟಾಸ್ತ್ರ ಪ್ರಯೋಗ: ''ರೋಮ್‌ನಂತೆ ಮಣಿಪುರವೂ ಹೊತ್ತಿ ಉರಿಯುತ್ತಿದೆ. ರೋಮ್ ಹೊತ್ತಿ ಉರಿಯುವಾಗ ಅಲ್ಲಿನ ದೊರೆ ನೀರೋ ಯಾವುದೇ ಚಿಂತೆಯಿಲ್ಲದೆ ಪಿಟೀಲು ಬಾರಿಸುತ್ತಿದ್ದ. ಮಣಿಪುರ ಹೊತ್ತಿ ಉರಿಯುತ್ತಿರುವಾಗ ಇಲ್ಲಿನ ದೊರೆ ಮೋದಿ ಯಾವುದೇ ಚಿಂತೆಯಿಲ್ಲದೆ ವಿದೇಶ ಪ್ರವಾಸ ಮಾಡುತ್ತಾರೆ. ರೋಮ್ ದೊರೆ ನೀರೋಗೂ ಪ್ರಧಾನಿ ನರೇಂದ್ರ ಮೋದಿಗೂ ಏನಾದರೂ ವ್ಯತ್ಯಾಸವಿದೆಯೇ?'' ಎಂದು ಕಿಡಿಕಾರಿದ್ದಾರೆ.
ಮಣಿಪುರದಲ್ಲಿ ಏನಾಗಿದೆ?: ''ಈಶಾನ್ಯ ರಾಜ್ಯ ಮಣಿಪುರ ಸುಮಾರು ಎರಡು ತಿಂಗಳ ಕಾಲ ಜನಾಂಗೀಯ ಹಿಂಸಾಚಾರದಿಂದ ತತ್ತರಿಸಿ ಹೋಗಿದೆ. ರಾಜ್ಯದಲ್ಲಿನ ಸದ್ಯದ ಪರಿಸ್ಥಿತಿ ಸುಧಾರಿಸುತ್ತಿದೆ ಎಂಬ ಮಾಹಿತಿ ಇದೆ. ರಾಜ್ಯದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ. ಕೆಲವು ಜಿಲ್ಲೆಗಳಲ್ಲಿ ಕೆಲವು ಅಪರೂಪದ ಘಟನೆಗಳೊಂದಿಗೆ ನಿಯಂತ್ರಣದಲ್ಲಿದೆ. ಆದರೆ, ಹೆಚ್ಚಿನ ಜಿಲ್ಲೆಗಳಲ್ಲಿ ಸಾಮಾನ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
''ಇನ್ನೊಂದೆಡೆ ಮಣಿಪುರ ಹಿಂಸಾಚಾರ ಕುರಿತು ಪ್ರಧಾನಿ ಜೊತೆ ಚರ್ಚಿಸಲು ಸರ್ವ ಪಕ್ಷ ಸಭೆ ಕರೆಯುವಂತೆ ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ. ಇದಕ್ಕೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಲಭಿಸಿಲ್ಲ. ಇನ್ನೂ ಹಿಂಸಾಚಾರವು ನಮ್ಮ ದೇಶದ ಆತ್ಮಸಾಕ್ಷಿಯ ಮೇಲೆ ಆಳವಾದ ಗಾಯವನ್ನು ಉಂಟುಮಾಡಿದ್ದು, ಗಲಭೆ ಪೀಡಿತ ರಾಜ್ಯದಲ್ಲಿ ಶಾಂತಿ ಸ್ಥಾಪನೆಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮನವಿ ಮಾಡಿದ್ದಾರೆ''
''ಸುಮಾರು 50 ದಿನಗಳ ಕಾಲ ಮಣಿಪುರದಲ್ಲಿ ಬಹುದೊಡ್ಡ ಹಿಂಸಾಚಾರವನ್ನು ನೋಡಿದ್ದೇವೆ. ಈ ಹಿಂಸಾಚಾರವು ರಾಜ್ಯದಲ್ಲಿ ಸಾವಿರಾರು ಜನರ ಜೀವನವನ್ನು ನಾಶ ಮಾಡಿದೆ ಮತ್ತು ಅನೇಕ ಜನರನ್ನು ನಿರಾಶ್ರಿತರನ್ನಾಗಿ ಮಾಡಿದೆ. ಈ ಹಿಂಸಾಚಾರದಲ್ಲಿ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡ ಎಲ್ಲರಿಗೂ ನಾನು ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ” ಎಂದು ತಿಳಿಸಿದ್ದಾರೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Guarantee Scheme: ಮೋದಿ ಅಕ್ಕಿ ಅಲ್ಲ, ಯುಪಿಎ ಸರ್ಕಾರದ ಅಕ್ಕಿ: ಸಚಿವ ಸಂತೋಷ ಲಾಡ್ ಗರಂ