ಬೆಂಗಳೂರು: ಆಯುಷ್ ವೈದ್ಯರ ಸಮಸ್ಯೆಯನ್ನು ಬಗೆಹರಿಸಲು ಸಮಿತಿ ರಚಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಇಂದು ಕರೆದಿದ್ದ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆಗೂ ಮುನ್ನ ರಾಜ್ಯದಲ್ಲಿ ಆಯುಷ್ ವೈದ್ಯರ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಆಯುಷ್ ವೈದ್ಯರ ಸಮಸ್ಯೆಗಳ ಸಂಬಂಧಪಟ್ಟಂತೆ ಈಗ ಸಭೆ ನಡೆಸುತ್ತೇನೆ. ಆಯುಷ್ ವೈದ್ಯರು ಹಲವು ಬೇಡಿಕೆಗಳನ್ನು ಇಟ್ಟಿದ್ದಾರೆ. ಸಾಕಷ್ಟು ವರ್ಷಗಳಿಂದ ಈ ಸಮಸ್ಯೆಗಳಿವೆ ಎಂದರು.
ಎಂಬಿಬಿಎಸ್ ವೈದ್ಯರ ಸಮನಾಗಿ ಆಯುಷ್ ವೈದ್ಯರು ವೇತನ ಕೇಳಿದ್ದಾರೆ. ಈ ಬಗ್ಗೆ ಒಂದು ಸಮಿತಿ ರಚನೆ ಮಾಡುತ್ತೇವೆ. ಸಮಿತಿ ವರದಿ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಆಯುಷ್ ಚಿಕಿತ್ಸೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಅವರು ಹೇಳಿದಂತೆ ಆಯುಷ್ ಚಿಕಿತ್ಸೆಗೆ ನಾವು ಹೆಚ್ಚು ಆದ್ಯತೆ ಕೊಡುತ್ತೇವೆ ಎಂದು ತಿಳಿಸಿದರು.
ಮಾಗಡಿಯಲ್ಲಿ ಕೆಎಸ್ಆರ್ಟಿಸಿ ಡ್ರೈವರ್ಗೆ ಸೋಂಕು ಧೃಡಪಟ್ಟ ವಿಚಾರವಾಗಿ ಮಾತನಾಡಿ, ಕೆಎಸ್ಆರ್ಟಿಸಿ ನಿಗಮದಿಂದ ಟೆಸ್ಟ್ ಮಾಡುವಂತೆ ಒತ್ತಾಯ ಬಂದಿದೆ. ಬಸ್ ಚಾಲಕನಿಗೆ ಕೊರೊನಾ ಬಂದಿದ್ದರಿಂದ ಅವರ ಜೊತೆ ಪ್ರಯಾಣಿಸಿದವರನ್ನು ಟೆಸ್ಟ್ ಮಾಡಲು ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಸಾರಿಗೆ ಸಿಬ್ಬಂದಿ ಮತ್ತು ಕುಟುಂಬ ವರ್ಗದವರಿಗೂ ಟೆಸ್ಟ್ ಮಾಡುತ್ತೇವೆ. ರೆಡ್ ಮತ್ತು ಕಂಟೇನ್ಮೆಂಟ್ ಝೋನ್ನಿಂದ ಬಂದು ಕೆಲಸ ಮಾಡುತ್ತಿರುವವರು ಹಾಗೂ ಅವರ ಸಂಪರ್ಕದಲ್ಲಿ ಇರುವವರಿಗೂ ಸಹ ಪರೀಕ್ಷೆ ಮಾಡಿಸುತ್ತೇವೆ ಎಂದರು. ಕೊರೊನಾ ನಿಯಂತ್ರಣ ಮಾಡಲು ಅಗತ್ಯ ಕ್ರಮ ಕೈಗೊಂಡಿದ್ದೇವೆ. ಟೆಸ್ಟ್ ಮಾಡಿಸಲು ಇಲಾಖೆ ಎಲ್ಲಾ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದೆ. ಕೆಎಸ್ಆರ್ಟಿಸಿ ಸಿಬ್ಬಂದಿ ಆತಂಕ ಪಡುವ ಅಗತ್ಯವಿಲ್ಲ ಎಂದರು.
ಹಲವು ಸಮುದಾಯಗಳಿಗೆ ಈಗಾಗಲೇ ಸಹಾಯಧನ ಘೋಷಣೆ ಮಾಡಲಾಗಿದೆ. ಸಣ್ಣ ಸಣ್ಣ ಸಮುದಾಯದವರು ಸಹಾಯಧನ ಕೇಳ್ತಿದ್ದಾರೆ. ಹಾಗಾಗಿ ಸಿಎಂ ಬಿಎಸ್ವೈ ಗಮನಕ್ಕೆ ತಂದು ಈ ಬಗ್ಗೆ ಚರ್ಚೆ ಮಾಡುತ್ತೇನೆ ಎಂದರು.