ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸೊಳ್ಳೆಗಳಲ್ಲಿ ಝೀಕಾ ವೈರಸ್ ದೃಢಪಟ್ಟಿರುವ ಹಿನ್ನೆಲೆ, ಈ ಕುರಿತು ಆತಂಕಪಡುವ ಅಗತ್ಯವಿಲ್ಲ. ಆದರೆ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಆರೋಗ್ಯ ಇಲಾಖೆ ತಿಳಿಸಿದೆ. ವೈರಸ್ ಕುರಿತು ಭಯಪಡುವ ಅಗತ್ಯವಿಲ್ಲ. ಜ್ವರ ಪೀಡಿತರಲ್ಲಿ ಕಣ್ಣು ಕೆಂಪಾಗುವಿಕೆ, ಕೀಲುಗಳಲ್ಲಿ ನೋವು, ತಲೆನೋವು, ದದ್ದುಗಳು, ಸ್ನಾಯುಗಳಲ್ಲಿ ನೋವು ಮತ್ತಿತರ ರೋಗ ಲಕ್ಷಣ ಕಂಡುಬಂದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆ ವೈದ್ಯರನ್ನು ಸಂಪರ್ಕಿಸುವಂತೆ ಸೂಚನೆ ನೀಡಿ ಆರೋಗ್ಯ ಇಲಾಖೆ ಆಯುಕ್ತ ಡಿ.ರಂದೀಪ್ ಸುತ್ತೋಲೆ ಹೊರಡಿಸಿದ್ದಾರೆ.
ಈ ಜ್ವರ 2 ದಿನಗಳಿಂದ 7 ದಿನಗಳವರೆಗೆ ಇರುತ್ತದೆ. ರೋಗಲಕ್ಷಣ ಅನುಸಾರ ಚಿಕಿತ್ಸೆ ನೀಡಲಾಗುತ್ತದೆ. ಗರ್ಭಿಣಿ, ಬಾಣಂತಿಯರು ಈ ವೈರಾಣುವಿನ ಬಗ್ಗೆ ಹೆಚ್ಚಿನ ಎಚ್ಚರ ವಹಿಸಬೇಕು ಎಂದು ತಿಳಿಸಿದ್ದಾರೆ. ಝೀಕಾ ವೈರಸ್ ತಡೆಗಟ್ಟಲು ನೀರು ಶೇಖರಣಾ ಪರಿಕರಗಳನ್ನು ಮುಚ್ಚಳದಿಂದ ಮುಚ್ಚಿಡಬೇಕು ಮತ್ತು ವಾರಕ್ಕೊಮ್ಮೆ ಸ್ವಚ್ಛಗೊಳಿಸಿ, ಮನೆಯ ಸುತ್ತ - ಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಬೇಕು. ಘನತ್ಯಾಜ್ಯ ವಸ್ತುಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವ ಮೂಲಕ ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸಿ, ಮಕ್ಕಳು, ವಯೋವೃದ್ಧರು ವಿಶ್ರಾಂತಿ ಪಡೆಯುವಾಗ ಸೊಳ್ಳೆ ಪರದೆ, ಸೊಳ್ಳೆ ನಿರೋಧಕಗಳನ್ನು ಬಳಸಬೇಕು ಎಂದು ಸಲಹೆ ನೀಡಲಾಗಿದೆ.
ಸೊಳ್ಳೆಗಳು ಸಾಮಾನ್ಯವಾಗಿ ಸಂತಾನೋತ್ಪತ್ತಿ ಮಾಡುವುದು ನಿಂತ ನೀರಲ್ಲಿ. ಹೀಗಾಗಿ ಮನೆಯ ಸುತ್ತಲೂ ನೀರು ನಿಲ್ಲದಂತೆ ಮುಂಜಾಗ್ರತೆ ವಹಿಸಬೇಕು. ಪ್ರತಿಯೊಬ್ಬ ವ್ಯಕ್ತಿಯೂ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ, ವೈರಸ್ ಹರಡದಂತೆ ನೋಡಿಕೊಳ್ಳಬಹುದು. ಯಾವುದೇ ರೋಗ ಲಕ್ಷಣಗಳು ಕಂಡು ಬಂದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆ ವೈದ್ಯರನ್ನು ಸಂಪರ್ಕ ಮಾಡಲು ಆರೋಗ್ಯ ಇಲಾಖೆ ಮನವಿ ಮಾಡಿದೆ.
ಝೀಕಾ ವೈರಸ್ನ ಸೋಂಕಿತ ಅಥವಾ ಶಂಕಿತ ಇಲ್ಲವೇ ದೃಢಪಡಿಸಲ್ಪಟ್ಟ ವ್ಯಕ್ತಿ ಪ್ರತ್ಯೇಕವಾಗಿರಬೇಕು. ಹೆಚ್ಚಿನ ವಿಶ್ರಾಂತಿ ಪಡೆದುಕೊಳ್ಳಬೇಕು. ಘನ ಆಹಾರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ದ್ರವ ಪದಾರ್ಥಗಳನ್ನೇ ಸೇವಿಸಬೇಕು. ಮಲಗುವಾಗ ಸೊಳ್ಳೆ ಪರದೆ ಬಳಸಬೇಕು. ಅತ್ಯಂತ ಮುಖ್ಯವಾಗಿ ಗರ್ಭಿಣಿಯರು ಹೆಚ್ಚು ಮುನ್ನೆಚ್ಚರಿಕೆ ವಹಿಸಬೇಕು. ವೈದ್ಯರ ಸೂಚನೆಯಂತೆ ಸೋನೋಗ್ರಫಿ ವರದಿ, ಝೀಕಾ ವೈರಸ್ ಪ್ರತಿಕಾಯ ಮತ್ತು ಅಲ್ಟ್ರಾ ಪರೀಕ್ಷೆಗಾಗಿ ಗರ್ಭಿಣಿಯರು, ತಮ್ಮ ಸೀರಮ್ ಮತ್ತು ಮೂತ್ರದ ಮಾದರಿಗಳನ್ನು ಪರೀಕ್ಷಿಸಿಕೊಳ್ಳಬೇಕು. ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ನೀಡುವ ಸಲಹೆಗಳನ್ನು ತಪ್ಪದೇ ಪಾಲಿಸಬೇಕು ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ.
ಇದನ್ನೂ ಓದಿ:ಝೀಕಾ ವೈರಸ್ : ರೋಗ ಹರಡಲು ಕಾರಣ, ತಡೆಗಟ್ಟುವ ಕ್ರಮಗಳೇನು?
ಕೋಲಾರದಲ್ಲಿ ಝೀಕಾ ವೈರಸ್ ಪರೀಕ್ಷೆ: ಕೋಲಾರದಲ್ಲೂ ಝೀಕಾ ವೈರಸ್ ಕುರಿತು ಜಿಲ್ಲಾ ಆರೋಗ್ಯ ಇಲಾಖೆ ಕಟ್ಟೆಚ್ಚರವಹಿಸಿದೆ. ಕೋಲಾರ ಜಿಲ್ಲೆಯಲ್ಲಿ ಸದ್ಯಕ್ಕೆ ಝೀಕಾ ವೈರಸ್ ಪತ್ತೆಯಾಗಿಲ್ಲ. ಆದರೂ ಮುನ್ನೆಚ್ಚರಿಕೆಯಾಗಿ ಕೋಲಾರ ಜಿಲ್ಲೆಯಿಂದ ಎರಡು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಪರೀಕ್ಷೆ ನಡೆಸಲಾಗಿದೆ. ಎರಡು ಆರೋಗ್ಯ ಕೇಂದ್ರದ ವ್ಯಾಪ್ತಿಯಿಂದ ಸೊಳ್ಳೆಗಳನ್ನು ಹಿಡಿದು ಲ್ಯಾಬೋರೇಟರಿಗೆ ಕಳುಹಿಸಲಾಗಿದೆ.