ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚಾಗುತ್ತಿದ್ದರೂ 15 ಜಿಲ್ಲೆಗಳಲ್ಲಿ ಮಾತ್ರ ಸೋಂಕು ಕಾಣಿಸಿಕೊಂಡಿದ್ದು, ಉಳಿದ ಜಿಲ್ಲೆಗಳು ಸದ್ಯದ ಮಟ್ಟಿಗೆ ಕೋವಿಡ್-19 ಸುಳಿಗೆ ಸಿಲುಕಿಲ್ಲ. ಅಷ್ಟರ ಮಟ್ಟಿಗೆ ಆರೋಗ್ಯ ಇಲಾಖೆ ಪರಿಣಾಮಕಾರಿ ಮುಂಜಾಗ್ರತಾ ಕ್ರಮ ಕೈಗೊಂಡಿದೆ.
ಎಂದಿನಂತೆ ಇಂದು ಕೂಡ ಆರೋಗ್ಯ ಇಲಾಖೆ ಕೊರೊನಾ ಬುಲೆಟಿನ್ ಬಿಡುಗಡೆ ಮಾಡಿದ್ದು, ವಿದೇಶದಿಂದ ಬಂದಿರುವ ಪ್ರಯಾಣಿಕರ ಮೇಲೆ ನಿಗಾ ಇರಿಸಲಾಗಿದೆ. 2,790 ಜನರನ್ನು ಹೋಂ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ. 1,290 ಪ್ರಾಥಮಿಕ ಸಂಪರ್ಕಿತರು, 4,194 ದ್ವಿತೀಯ ಸಂಪರ್ಕಿತರನ್ನು ನಿಗಾದಲ್ಲಿ ಇರಿಸಲಾಗಿದೆ.
ಒಟ್ಟು ಈವರೆಗೆ 3,7,358 ಜನರನ್ನು ನಿಗಾದರಲ್ಲಿರಿಸಲಾಗಿದೆ. ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ ಇಂದು 57 ಜನರನ್ನು ಇರಿಸಿದ್ದು, ಒಟ್ಟು 440 ಜನರನ್ನು ಐಸೋಲೇಷನ್ ನಲ್ಲಿ ಇರಿಸಿದಂತಾಗಿದೆ. ಇಂದು ಪರೀಕ್ಷೆಗೆ 344 ಜನರ ಗಂಟಲು ದ್ರವ ಸಂಗ್ರಹ ಮಾಡಿದ್ದು, ಈವರೆಗೆ 4,587 ಮಾದರಿ ಸಂಗ್ರಹ ಮಾಡಿದಂತಾಗಿದೆ.
ಇಂದು 4 ವರದಿ ಕೊರೊನಾ ಪಾಸಿಟಿವ್ ಬಂದಿದ್ದು ಸೋಂಕಿತರ ಸಂಖ್ಯೆ 128 ಕ್ಕೆ ತಲುಪಿದೆ ಎಂದು ಮಾಹಿತಿ ನೀಡಿದೆ.
ಯಾವ ಆಸ್ಪತ್ರೆಯಲ್ಲಿ ಎಷ್ಟು ಸೋಂಕಿತರು:
ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ 8 ,ಬೆಂಗಳೂರಿನ ಇತರೆ ಆಸ್ಪತ್ರೆಯಲ್ಲಿ 59, ತುಮಕೂರು 49, ಕಲಬುರಗಿ 37,ದಕ್ಷಿಣ ಕನ್ನಡ 43,ಬಳ್ಳಾರಿ 31,ಬೀದರ್ 34,ಉಡುಪಿ 27,ಕೋಲಾರ 24,ಮೈಸೂರು 21,ಧಾರವಾಡ 19,ಉತ್ತರ ಕನ್ನಡ15, ಚಿಕ್ಕಬಳ್ಳಾಪುರ 18, ಗದಗ 17, ಶಿವಮೊಗ್ಗ 11, ಕೊಡಗು 6, ದಾವಣಗೆರೆ 5, ಯಾದಗಿರಿ 4,ಹಾಸನ 2, ವಿಜಯಪುರ 2, ರಾಮನಗರ 2, ಚಿತ್ರದುರ್ಗ 2, ಬಾಗಲಕೋಟೆ 2, ಹಾವೇರಿ 1, ಚಿಕ್ಕಮಗಳೂರು 1 ಸೇರಿ ಒಟ್ಟು 440 ಜನರನ್ನ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡುತ್ತಿದ್ದು, ಇಂದು 43 ಜನರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ . 57 ಜನರನ್ನು ಹೊಸದಾಗಿ ದಾಖಲಿಸಿಕೊಳ್ಳಲಾಗಿದೆ ಎನ್ನುವ ಮಾಹಿತಿಯನ್ನು ಆರೋಗ್ಯ ಇಲಾಖೆ ನೀಡಿದೆ.
ರಾಜ್ಯದ ಎಲ್ಲಾ ವಿಮಾನ ನಿಲ್ದಾಣಗಳನ್ನ ಮುಚ್ಚಲಾಗಿದ್ದು, ಈವರೆಗೂ ಒಟ್ಟು 1,28,368 ಜನರನ್ನು ಸ್ಕ್ರೀನಿಂಗ್ ಮಾಡಲಾಗಿದೆ. ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಹಾಗಾಗಿ ಯಾವುದೇ ಆತಂಕಕ್ಕೆ ಒಳಗಾಗದೇ ಮುನ್ನೆಚ್ಚರಿಕೆ ವಹಿಸಿ ಆರೋಗ್ಯ ಇಲಾಖೆಗೆ ಸಹಕಾರ ನೀಡಿ ಎಂದು ಮನವಿ ಮಾಡಿದೆ.
ಜನರು ನೀಡುವ ದೂರುಗಳನ್ನು ಆಧರಿಸಿ ಹೋಂ ಕ್ವಾರಂಟೈನ್ ಜಾರಿ ಪಡೆ ಹೋಂ ಕ್ವಾರಂಟೈನ್ ಉಲ್ಲಂಘನೆ ಮಾಡಿದವರನ್ನು ನಿಗದಿತ ಸಂಸ್ಥೆಗಳಲ್ಲಿನ ಕ್ವಾರಂಟೈನ್ಗೆ ಸ್ಥಳಾಂತರ ಮಾಡುವ ಕಾರ್ಯ ನಡೆಸುತ್ತಿದ್ದು, ಹೊಸದಾಗಿ 48 ಜನರನ್ನು ಸ್ಥಳಾಂತರ ಮಾಡಲಾಗಿದೆ. ಈವರೆಗೂ 341 ಜನರನ್ನು ಈ ರೀತಿ ಸ್ಥಳಾಂತರ ಮಾಡಿದಂತಾಗಿದೆ. ಇನ್ನು ಕ್ವಾರಂಟೈನ್ ನಂತಹ ಪ್ರತ್ಯೇಕ ವ್ಯವಸ್ಥೆಯಲ್ಲಿ ಸುದೀರ್ಘ ಕಾಲ ಸಂಯಮದಿಂದ ಇರಲು ಮಾನಸಿಕ ಸ್ಥೈರ್ಯದ ಅಗತ್ಯವಿದ್ದು, ಅಂತಹ 1893 ರೋಗಿಗಳಿಗೆ ಮತ್ತು ಸಂಪರ್ಕಿತರಿಗೆ ಹೊಸದಾಗಿ ಮಾನಸಿಕ ಆರೋಗ್ಯದ ಆಪ್ತ ಸಮಾಲೋಚನೆ ನಡೆಸಿದ್ದು, ಇಲ್ಲಿಯವರೆಗೆ ಒಟ್ಟು 20,344 ಜನರಿಗೆ ಕೌನ್ಸೆಲಿಂಗ್ ನಡೆಸಲಾಗಿದೆ.