ಬೆಂಗಳೂರು: ರಾಜ್ಯದಲ್ಲಿ ಇಂದು ಓರ್ವ ವ್ಯಕ್ತಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದ್ದು, ಸೋಂಕಿತರ ಸಂಖ್ಯೆ 15ಕ್ಕೆ ತಲುಪಿದೆ. 46 ಜನರ ಕೊರೊನಾ ಪರೀಕ್ಷಾ ವರದಿಗಳು ನೆಗೆಟಿವ್ ಬಂದಿದ್ದು, ಸೋಂಕಿತರ ಆರೋಗ್ಯ ಸ್ಥಿರವಾಗಿದೆ ಎಂದು ಆರೋಗ್ಯ ಇಲಾಖೆ ಕೊರೊನಾ ಬುಲೆಟಿನ್ ಬಿಡುಗಡೆಗೊಳಿಸಿದೆ.
ಇಂದು ಒಂದು ವರದಿ ಮಾತ್ರ ಕೊರೊನಾ ಪಾಸಿಟಿವ್ ಬಂದಿದೆ. 35 ವರ್ಷ ವಯಸ್ಸಿನ ಕೊಡಗಿನ ವ್ಯಕ್ತಿಗೆ ಕೋವಿಡ್-19 ಇರುವುದು ದೃಢಪಟ್ಟಿದೆ. ಅವರು ದುಬೈನಿಂದ ಮಾ. 15ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಅಂದೇ ಬಸ್ ಮೂಲಕ ಕೊಡಗಿಗೆ ಪ್ರಯಾಣಿಸಿದ್ದಾರೆ. ಮಾ. 17ರಂದು ಕೊಡಗಿನ ನಿಗದಿತ ಪ್ರತ್ಯೇಕತಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಅಂದೇ ಮಾದರಿ ಪರೀಕ್ಷೆಗೆ ಕಳಿಸಲಾಗಿತ್ತು. ಇಂದು ಅವರ ವರದಿ ಕೊರೊನಾ ಪಾಸಿಟಿವ್ ಬಂದಿದ್ದು, ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದವರ ಪತ್ತೆ ಕಾರ್ಯ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದೆ.
ಕಲಬುರಗಿಯಲ್ಲಿ ಮೃತಪಟ್ಟ ವ್ಯಕ್ತಿ ಸೇರಿದಂತೆ 15 ವರದಿಗಳು ಮಾತ್ರ ಕೊರೊನಾ ಪಾಸಿಟಿವ್ ಬಂದಿದ್ದು, ಮೃತ ವ್ಯಕ್ತಿ ಹೊರತುಪಡಿಸಿ ಉಳಿದ 14 ಜನರಿಗೆ ಚಿಕಿತ್ಸೆ ಮುಂದುವರೆಸಲಾಗಿದೆ. ಕೊರೊನಾ ಶಂಕೆ ಹಿನ್ನೆಲೆಯಲ್ಲಿ ಇಂದು ಹೊಸದಾಗಿ 114 ಜನರನ್ನು ತಪಾಸಣೆಗಾಗಿ ಪಟ್ಟಿ ಮಾಡಿದ್ದು, ಈವರೆಗೆ ತಪಾಸಣೆಗೆ ಒಳಪಟ್ಟವರ ಸಂಖ್ಯೆ 3049 ತಲುಪಿದೆ. ಇಂದು 74 ಜನರನ್ನು ಮನೆಯಲ್ಲಿ ಪ್ರತ್ಯೇಕವಾಗಿರಿಸಿದ್ದು, ಇಲ್ಲಿಯವರೆಗೆ ಮನೆಯಲ್ಲಿ ಪ್ರತ್ಯೇಕವಾಗಿ ಇರಿಸಿದವರ ಸಂಖ್ಯೆ 2280ಕ್ಕೆ ತಲುಪಿದೆ. ಆಸ್ಪತ್ರೆಗಳಲ್ಲಿ ಐಸೋಲೇಷನ್ನಲ್ಲಿ ಇಂದು 26 ಜನರನ್ನು ಇರಿಸಿದ್ದು, ಇಲ್ಲಿಯವರೆಗೆ 97 ಜನರನ್ನು ಐಸೋಲೇಷನ್ನಲ್ಲಿ ಇರಿಸಿದಂತಾಗಿದೆ. ಇಂದು 75 ಜನರ ಮಾದರಿ ಸಂಗ್ರಹ ಮಾಡಿದ್ದು, ಈವರೆಗೆ 1143 ಮಾದರಿ ಸಂಗ್ರಹ ಮಾಡಿದಂತಾಗಿದೆ. 28 ದಿನದ ನಿಗಾ ಅವಧಿಯನ್ನು ಇಂದು 98 ಜನ ಮುಗಿಸಿದ್ದು, ಈವರೆಗೆ ಒಟ್ಟು 668 ಜನ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. ಇಂದು 46 ವರದಿಗಳು ಕೊರೊನಾ ನೆಗಟಿವ್ ಬಂದಿದ್ದು, ಈವರೆಗೆ 915 ವರದಿ ನೆಗಟಿವ್ ಬಂದಿವೆ. ಇಂದು ಒಂದು ವರದಿ ಕೊರೊನಾ ಪಾಸಿಟಿವ್ ಬಂದಿದ್ದು, ಈವರೆಗೆ ಒಟ್ಟು 15 ವರದಿ ಪಾಸಿಟಿವ್ ಬಂದಿವೆ ಎಂದು ಆರೋಗ್ಯ ಇಲಾಖೆ ಕೊರೊನಾ ಬುಲೆಟಿನ್ ರಿಲೀಸ್ ಮಾಡಿದೆ.
ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ 7, ಬೆಂಗಳೂರಿನ ಇತರೆ ಆಸ್ಪತ್ರೆಯಲ್ಲಿ 42, ಹಾಸನದಲ್ಲಿ 2, ದಕ್ಷಿಣ ಕನ್ನಡದಲ್ಲಿ 14, ಬಳ್ಳಾರಿ 2, ಚಿಕ್ಕಮಗಳೂರು 1, ಕಲಬುರಗಿ 11, ಕೊಡಗು 4, ಉಡುಪಿಯಲ್ಲಿ 6, ಬೀದರ್ 2, ವಿಜಯಪುರ 0, ಗದಗ 2, ಧಾರವಾಡದಲ್ಲಿ 3, ಉತ್ತರ ಕನ್ನಡ 2 ಸೇರಿ ಒಟ್ಟು 97 ಜನರಿಗೆ ಐಸೋಲೇಷನ್ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಂದು 18 ಜನರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದ್ದು, 26 ಜನರನ್ನು ಹೊಸದಾಗಿ ದಾಖಲಿಸಿಕೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಈವರೆಗೆ ಬೆಂಗಳೂರು, ಮಂಗಳೂರು ವಿಮಾನ ನಿಲ್ದಾಣ, ಬಂದರುಗಳಲ್ಲಿ ಒಟ್ಟು 1,22,532 ಜನರನ್ನು ಸ್ಕ್ರೀನಿಂಗ್ ಮಾಡಲಾಗಿದ್ದು, ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಹಾಗಾಗಿ ಯಾವುದೇ ಆತಂಕಕ್ಕೆ ಒಳಗಾಗದೇ ಮುನ್ನೆಚ್ಚರಿಕೆ ವಹಿಸಿ ಸಹಕಾರ ನೀಡಿ ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.