ಬೆಂಗಳೂರು: ಸಾರ್ವಜನಿಕರಿಗೆ ಶುಲ್ಕ ರಹಿತ ಸಾರ್ವತ್ರಿಕ ಸಮಗ್ರ ಆರೋಗ್ಯ ಸೇವೆಯನ್ನು ಒದಗಿಸಲು ಆರೋಗ್ಯ ಇಲಾಖೆಯು ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಕಾರ್ಡ್ ವಿತರಿಸುತ್ತಿದೆ. 2019, 2020ರಲ್ಲಿ ಇದ್ದ ಕಾರ್ಡ್ ವಿತರಣೆ ಪ್ರಕ್ರಿಯು ಈ ವರ್ಷ ಕಡಿಮೆ ಆಗಿದ್ದು, ಹೀಗಾಗಿ ಈ ಕುರಿತು ಸುತ್ತೋಲೆ ಹೊರಡಿಸಿರುವ ಆರೋಗ್ಯ ಇಲಾಖೆ, ಕೂಡಲೇ ಕಾರ್ಡ್ ವಿತರಣೆ ಕಾರ್ಯ ಚುರುಕುಗೊಳಿಸುವಂತೆ ಸೂಚಿಸಿದೆ.
ಪ್ರಾಥಮಿಕ ಹಂತದ ಆರೋಗ್ಯ ಸೇವೆಗಳಿಂದ ದ್ವಿತೀಯ, ತೃತೀಯ ಹಾಗೂ ತುರ್ತು ಚಿಕಿತ್ಸಾ ವಿಧಾನಗಳನ್ನು ಇದು ಒಳಗೊಂಡಿದೆ. ಈ ಎಲ್ಲಾ ಸೇವೆಗಳು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಯಕ್ರಮದಲ್ಲಿ ಲಭ್ಯವಾಗಬೇಕಾದರೆ ಎಲ್ಲಾ ಕುಟುಂಬ ಮತ್ತು ಕುಟುಂಬದ ಎಲ್ಲಾ ಸದಸ್ಯರು ಆರೋಗ್ಯ ಕಾರ್ಡ್ ಹೊಂದುವುದು ಅವಶ್ಯಕವಾಗಿದೆ.
ಕಾರ್ಡ್ ವಿತರಣೆ ಮಾಹಿತಿ:
2019 ವರ್ಷ
- ಜುಲೈ- 12.00 ಲಕ್ಷ
- ಆಗಸ್ಟ್-8.00 ಲಕ್ಷ
- ಅಕ್ಟೋಬರ್-9.7 ಲಕ್ಷ
2020 ವರ್ಷ
- ಫೆಬ್ರವರಿಯಲ್ಲಿ 11.4 ಲಕ್ಷ
- ಮಾರ್ಚ್ - 7.00 ಲಕ್ಷ
- ಆಗಸ್ಟ್ - 6.40 ಲಕ್ಷ
2021ರಲ್ಲಿ ಜನವರಿಯಲ್ಲಿ 67,000 ದಿಂದ ಪ್ರಾರಂಭಿಸಿ ಮೇ- 2021 ರಲ್ಲಿ ಕೇವಲ 530 ಕಾರ್ಡ್ಗಳನ್ನು ರಾಜ್ಯಾದ್ಯಂತ ವಿತರಿಸಲಾಗಿದೆ. ಇಷ್ಟು ಕಡಿಮೆ ಸಂಖ್ಯೆ ವಿತರಣೆ ಯಾವುದೇ ಕಾರಣಕ್ಕೂ ಒಪ್ಪಲಾಗುವುದಿಲ್ಲ ಎಂದು ಆಯುಕ್ತರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ. 2020ನೇ ಸಾಲಿನಲ್ಲಿ ಕೋವಿಡ್ ಸಂದರ್ಭದಲ್ಲೂ ಕಾರ್ಡ್ಗಳ ವಿತರಣೆಯ ವೇಗ ಈ ಮಟ್ಟಕ್ಕೆ ಕುಸಿದಿರಲಿಲ್ಲ.
2021 ನೇ ಸಾಲಿನಲ್ಲಿ ಕೋವಿಡ್ ಎರಡನೇ ಅಲೆಯ ಕಾರಣದಿಂದ ಕಾರ್ಡ್ಗಳ ವಿತರಣಾ ಪ್ರಗತಿ ದಿನೇ ದಿನೇ ಕುಸಿದಿರುವುದು ಮೇಲ್ಕಂಡ ಅಂಕಿ ಅಂಶಗಳಿಂದ ಧೃಡಪಟ್ಟಿದೆ. ಹೀಗಾಗಿ ಈ ಕೂಡಲೇ ಎಲ್ಲಾ ಆರೋಗ್ಯ ಸಂಸ್ಥೆಗಳಿಂದ, ನಾಗರಿಕ ಸೇವಾ ಕೇಂದ್ರಗಳಿಂದ, ಐಟಿಐ ಮತ್ತು ಬಾಪೂಜಿ ಸೇವಾ ಕೇಂದ್ರಗಳ ಸೌಲಭ್ಯಗಳನ್ನು ಬಳಸಿಕೊಂಡು ಜಿಲ್ಲೆಗಳಲ್ಲಿ ವಿತರಣಾ ವೇಗವನ್ನು ಹೆಚ್ಚಿಸುವಂತೆ ಜಿಲ್ಲಾ ಅಧಿಕಾರಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಓದಿ: ಸಿಎಂ ಯಡಿಯೂರಪ್ಪ ಬದಲಾವಣೆ ಸ್ಪಷ್ಟ; ಯಾರಾಗ್ತಾರೆ ಮುಂದಿನ ಸಿಎಂ ಅನ್ನೋದು ಅಸ್ಪಷ್ಟ!