ಬೆಂಗಳೂರು: ಕೇಂದ್ರ ಸರ್ಕಾರ ರಾಜ್ಯದಲ್ಲಿ ಸಂಭವಿಸಿದ ನೆರೆ ಹಾವಳಿಗೆ ಇದುವರೆಗೂ ಯಾವುದೇ ಪರಿಹಾರ ನೀಡಿಲ್ಲದಿರುವುದು ತೀವ್ರ ಅಸಮಾಧಾನ ತಂದಿದೆ ಎಂದು ಜೆಡಿಎಸ್ ಪಕ್ಷದ ವರಿಷ್ಠ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ
ಸೆಪ್ಟೆಂಬರ್ 3ರಂದು ರಾಜ್ಯದ ಸಂಸದರು, ಆರ್ಎಸ್ಎಸ್ನ ಪ್ರಮುಖರೊಂದಿಗೆ ಸಭೆ ನಡೆಸಿದ್ದಾರೆ. ಕೇಂದ್ರದಿಂದ ಸಚಿವರು ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ನಾನು ಕೂಡಲೇ ಹಣ ಬಿಡುಗಡೆಗೊಳಿಸುವಂತೆ ಪತ್ರ ಬರೆದಿದ್ದೇನೆ. ಇದುವರೆಗೂ ಅದಕ್ಕೆ ಉತ್ತರಿಸಿಲ್ಲ ಎಂದು ಪಕ್ಷದ ಕಚೇರಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ನಷ್ಟದ ಅಂದಾಜನ್ನು ಒಪ್ಪಲಿಕ್ಕೆ ಆಗಲ್ಲ, ಮತ್ತೆ ವರದಿ ಸಂಗ್ರಹಿಸಿ ಕಳುಹಿಸಿ ಎಂದು ಕೇಂದ್ರ ಹೇಳಿದೆ. ಪ್ರತಿಯೊಂದು ರಾಜ್ಯದಲ್ಲೂ ಬಿಹಾರದಿಂದ ಕೇರಳದವರೆಗೆ ಎಲ್ಲಾ ರಾಜ್ಯಗಳಲ್ಲೂ ಭೀಕರವಾದ ನೆರೆ ಆಗಿದೆ. ಒಂದೊಂದು ರಾಜ್ಯದ ಡ್ಯಾಮೇಜ್ ಕೂಡ ನಿರೀಕ್ಷೆಗೆ ಮೀರಿದ್ದು. ಇಲ್ಲಿವರೆಗೂ ರಾಜ್ಯದ ಸರ್ಕಾರದ ನಡವಳಿಕೆ ಮೇಲೆ ಆಕ್ರೋಶದ ಮಾತು ಆಡಲಿಲ್ಲ. ನನ್ನ ಮನಸ್ಸಿಗೆ ತೀವ್ರ ನೋವುಂಟಾಗಿದೆ ಎಂದರು.
ಕೋಯ್ನಾ ಡ್ಯಾನಿಂದ ಐದು ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ಬಿಟ್ಟಿದ್ದಾರೆ. ಇದರಿಂದ ಆಗಿರುವ ಅನಾಹುತವನ್ನು ಎಲ್ಲಾ ಪಕ್ಷದ ಮುಖಂಡರು ನೋಡಿದ್ದಾರೆ. ಯಡಿಯೂರಪ್ಪನವರು ಕ್ಯಾಬಿನೆಟ್ ರಚನೆಗೆ ಮುಂಚೆ ಒಬ್ಬರೇ ಪ್ರವಾಹ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಅವರ ಆಡಳಿತ ಅಥವಾ ಭ್ರಷ್ಟಾಚಾರದ ಬಗ್ಗೆ ನಾನು ಮಾತನಾಡುವುದಿಲ್ಲ, ಅದರ ಅವಶ್ಯಕತೆಯೂ ನನಗಿಲ್ಲ ಎಂದು ಹೇಳಿದರು.‘
ಪ್ರವಾಹದ ವರದಿಯನ್ನು ನಿಮ್ಮದೇ ಕೇಂದ್ರ ಸರ್ಕಾರ ವಾಪಾಸ್ ಕಳುಹಿಸಿದೆ. ಈ ಪರಿಸ್ಥಿತಿಗೆ ಯಾರು ಹೊಣೆ ಎಂದು ರಾಜ್ಯ ಸಂಸದರನ್ನು ಟೀಕಿಸಿದ್ದಾರೆ.