ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ನಡೆದ ಹಾಸನ ಜಿಲ್ಲಾ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರ ಸಭೆ ಒಮ್ಮತಕ್ಕೆ ಬರುವಲ್ಲಿ ಯಶಸ್ವಿಯಾಗಿದೆ.
ಸಿದ್ದರಾಮಯ್ಯ ನಿವಾಸ ಕಾವೇರಿಯಲ್ಲಿ ನಡೆದ ಸಭೆಯಲ್ಲಿ ಸಚಿವ ಹೆಚ್ ಡಿ ರೇವಣ್ಣ ಕೂಡ ಭಾಗವಹಿಸಿದ್ದರು. ಕಾಂಗ್ರೆಸ್ ಪಕ್ಷದಿಂದ ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ ಹಾಗೂ ಇತರೆ ಮುಖಂಡರು ಪಾಲ್ಗೊಂಡಿದ್ದರು. ಸಭೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಪಕ್ಷಗಳ ಒಮ್ಮತದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲು ಎರಡು ಪಕ್ಷಗಳು ಪೂರ್ಣ ಸಹಮತ ವ್ಯಕ್ತಪಡಿಸಿದ್ದು, ಈ ಹಿಂದೆ ಇದ್ದ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಿದೆ.
ಸಭೆ ಮುಗಿಸಿ ಸಿದ್ದರಾಮಯ್ಯ ನಿವಾಸದ ಬಳಿ ಹೆಚ್ ಡಿ ರೇವಣ್ಣ ಮಾತನಾಡಿ, ಹಾಸನದ ಎಲ್ಲಾ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು. ಕೋಮುವಾದಿ ಬಿಜೆಪಿ ಪಕ್ಷವನ್ನು ದೂರ ಇಡಬೇಕು ಅಂತ ಸಭೆಯಲ್ಲಿ ತೀರ್ಮಾನಿಸಿದ್ದೇವೆ. ರಾಷ್ಟ್ರ ಮಟ್ಟದಲ್ಲಿ ಮಹಾಘಟಬಂಧನ್ಅನ್ನು ಬಲ ಪಡಿಸುವುದು ನಮ್ಮ ಉದ್ದೇಶವಾಗಿದೆ. ಕ್ಷೇತ್ರದಲ್ಲಿ ಯಾವುದೇ ಸಮಸ್ಯೆ ಇಲ್ಲ. ಎಲ್ಲರೂ ಕೆಲಸ ಮಾಡಿ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ನಾವು ಎಲ್ಲರನ್ನು ಗೌರವದಿಂದ ನಡೆಸಿಕೊಂಡಿದ್ದೇವೆ. ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ, ಎಲ್ಲಾ ಒಟ್ಟಿಗೆ ಟೀ ಕುಡಿದು ಮಾತನಾಡಿಕೊಂಡು ಬಂದಿದ್ದೇವೆ ಎಂದರು.
ಸಮಸ್ಯೆ ಇಲ್ಲ...
ನನ್ನ ಮತ್ತು ಕಾಂಗ್ರೆಸ್ ಮುಖಂಡರ ನಡುವೆ ಯಾವುದೇ ಸಮಸ್ಯೆ ಇಲ್ಲ. ಸಿದ್ದರಾಮಯ್ಯ ಜೊತೆ ಸುದೀರ್ಘ ಚರ್ಚೆ ಆಗಿದೆ. ಎರಡು ಪಕ್ಷದ ನಾಯಕರು ಒಟ್ಟಿಗೆ ಸೇರಿ ಕೆಲಸ ಮಾಡಲು ಸೂಚನೆ ನೀಡಿದ್ದಾರೆ. ನಾನು ಕಾಂಗ್ರೆಸ್ ನಾಯಕರನ್ನ ಸರಿಯಾಗಿ ನಡೆಸಿಕೊಂಡಿಲ್ಲ. ಕೇಸ್ ಹಾಕಿಸಿದ್ದೇನೆ ಅನ್ನೋದು ಸುಳ್ಳು. ಯಾವುದೇ ಸಮಸ್ಯೆ ಕ್ಷೇತ್ರದಲ್ಲಿ ಇಲ್ಲ ಎಂದರು. ಎ.ಮಂಜು ಬಿಜೆಪಿ ಅಭ್ಯರ್ಥಿ ಆದ್ರೂ ಮುಂದೆ 8 ಕ್ಕೆ 8 ಕ್ಷೇತ್ರ ಕಾಂಗ್ರೆಸ್ ಗೆಲ್ಲಿಸುತ್ತೇವೆಂದು ಹೇಳಿದ್ದಾರೆ. ನಮಗೆ ಇಷ್ಟು ಸಾಕಲ್ಲವೇ ಎಂದರು.
ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ ಮಾತನಾಡಿ, ಕ್ಷೇತ್ರದಲ್ಲಿ ಯಾವುದೇ ಸಮಸ್ಯೆ ಮಾಡಿಕೊಳ್ಳಬಾರದು. ಮೈತ್ರಿ ಅಭ್ಯರ್ಥಿ ಪರವಾಗಿ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ. ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ತಾಕೀತು ಮಾಡಿದ್ದಾರೆ. ಪ್ರಜ್ವಲ್ ರೇವಣ್ಣ ಅವರನ್ನ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಿ ದೇಶಕ್ಕೆ ಒಂದು ಸಂದೇಶ ರವಾನಿಸುತ್ತೇವೆ. ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡುವ ಭರವಸೆ ನೀಡಿದ್ದಾರೆ. ಪ್ರಜ್ವಲ್ ಬರೀ ಜೆಡಿಎಸ್ ಅಭ್ಯರ್ಥಿ ಅಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಂದು ರೇವಣ್ಣ ಹೇಳಿದ್ರು.