ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧವಾಗಿ ಮಂಗಳೂರು ಹಾಗೂ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಗಳ ವಿಚಾರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ, ನಿನ್ನೆ ಬೆಂಗಳೂರಿನಲ್ಲಿ ಲಕ್ಷಕ್ಕೂ ಹೆಚ್ಚು ಮಂದಿ ಶಾಂತಿಯುತ ಪ್ರತಿಭಟನೆ ನಡೆಸಿದರು. ಬೆಂಗಳೂರಿನಲ್ಲಿ ಲಕ್ಷ ಜನ ಸೇರಿದರೂ ಶಾಂತಿಯುತವಾಗಿ ನಡೆದ ಪ್ರತಿಭಟನೆ, ಮಂಗಳೂರಿನಲ್ಲಿ ವಿಕೋಪಕ್ಕೆ ಹೋಗಲು ಕಾರಣವೇನು? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಮಂಗಳೂರನ್ನು ಕೋಮು ಪ್ರಯೋಗಶಾಲೆ ಮಾಡಿಕೊಂಡಿರುವ ಬಿಜೆಪಿ ಇಬ್ಬರು ಅಮಾಯಕರನ್ನು ಬಲಿ ತೆಗೆದುಕೊಂಡಿದ್ದು ಹೇಗೆ? ಮತ್ತು ಏಕೆ? ಎಂದು ಗುಡುಗಿದ್ದಾರೆ. ದಾಂಧಲೆಕೋರರಿಗೆ ಗುಂಡಿಕ್ಕಿದ್ದೇವೆ ಎನ್ನುವ ರಾಜ್ಯ ಸರ್ಕಾರ, ಮೃತರಿಗೆ ಪರಿಹಾರ ಏಕೆ ಘೋಷಿಸಿತು? ಎಂದಿದ್ದಾರೆ. ಹಿಂಸಾತ್ಮಕ ಪ್ರತಿಭಟನೆಗೆ ನನ್ನ ಬೆಂಬಲ ಖಂಡಿತ ಇಲ್ಲ. ಆದರೆ ವಿರೋಧ ಪಕ್ಷದ ಸದಸ್ಯನಾಗಿ ರಾಜ್ಯದ ಕಾನೂನು-ಸುವ್ಯವಸ್ಥೆಗೆ ಭಂಗ ತರುವ ನಿಟ್ಟಿನಲ್ಲಿ ಸರ್ಕಾರ ಪೊಲೀಸರೇ ಪಿತೂರಿ ನಡೆಸಿದರೆ ಸುಮ್ಮನೆ ಕೂರಲಾಗುವುದಿಲ್ಲ ಎಂದಿದ್ದಾರೆ.
ಇದಕ್ಕೆ ಸಂಬಂಧಿಸಿದವರು ಉತ್ತರ ಕೊಡುವರೇ?. ಮಂಗಳೂರಿನ ಪ್ರತಿಭಟನೆ ವೇಳೆ ಸೈಜುಗಲ್ಲುಗಳನ್ನು ತಂದ ವಿಡಿಯೋಗಳನ್ನು ಇಷ್ಟೊಂದು ತಡವಾಗಿ ಬಿಡುಗಡೆಗೊಳಿಸುತ್ತಿರುವ ಸರ್ಕಾರ ಅದಕ್ಕೆ ಸಂಬಂಧಿಸಿದಂತೆ ಯಾರನ್ನು ಬಂಧಿಸಿದೆ? ಎಷ್ಟು ವಾಹನಗಳನ್ನು ವಶಕ್ಕೆ ತೆಗೆದುಕೊಂಡಿದೆ?. ಕಲ್ಲು ತೂರಾಟಕ್ಕೆ ತಂದ ವಾಹನಗಳ ವಿಡಿಯೋ ಮಂಗಳೂರಿನ ಗಲಭೆಯದೋ? ಅಥವಾ ಬೇರೆಡೆಯದೋ? ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಅಂಗ ಪಕ್ಷಗಳೇ ಸಿಎಎ ವಿರೋಧಿಸುತ್ತಿದ್ದಾರೆ, ಸಿಎಎ ಮತ್ತು ಎನ್ ಆರ್ ಸಿ ಬಗ್ಗೆ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗಳು ವಿಭಿನ್ನವಾಗಿವೆ. ಕಲ್ಲು ಹೊಡೆದರೂ ತಪ್ಪು, ಗುಂಡು ಹೊಡೆದರೂ ತಪ್ಪು ಎಂದು ಕುಮಾರಸ್ವಾಮಿ ಅವರು ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.