ಬೆಂಗಳೂರು: ರಾಜ್ಯದಲ್ಲಿ ಕಳೆದ ಎರಡು ತಿಂಗಳಲ್ಲಿ 42 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿಚಾರವಾಗಿ ಗಮನಹರಿಸುವುದು ಬಿಟ್ಟು ಕಾಂಗ್ರೆಸ್ ಮಹಾಘಟಬಂಧನ್ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದರು. ಜೆ.ಪಿ.ನಗರದ ತಮ್ಮ ನಿವಾಸದ ಬಳಿ ಇಂದು ಬೆಳಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಅವರು ನಮ್ಮ ಪಕ್ಷವನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಇವತ್ತಿನ ಮಹಾಘಟಬಂಧನ್ನ ವ್ಯವಸ್ಥಾಪಕರು ಜೆಡಿಎಸ್ ಸಂತತಿ ಮುಗಿದಿದೆ ಎಂಬ ಭ್ರಮೆಯಲ್ಲಿದ್ದಾರೆ ಎಂದರು.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ವಿಚಾರಕ್ಕೆ ಪ್ರತಿಕಿಯಿಸಿದ ಹೆಚ್ಡಿಕೆ, ನಮಗೇನೂ ಆಹ್ವಾನ ಬಂದಿಲ್ಲ, ನೋಡೋಣ ಇನ್ನೂ ಸಮಯವಿದೆ. ನನ್ನ ಗಮನವೇನಿದ್ದರೂ ನಾಡಿನ ಸಮಸ್ಯೆಗಳ ಬಗ್ಗೆ ಎಂದು ಹೇಳಿದರು.
ಏನೋ ಮಹಾಘಟಬಂಧನ್ ಅಂತ ಯಾರೂ ಸಾಧನೆ ಮಾಡದ್ದನ್ನು ನಾವು ಮಾಡಿದ್ದೇವೆಂದು ರಸ್ತೆಯುದ್ದಕ್ಕೂ ನೂರಾರು ಕೋಟಿ ರೂ. ಖರ್ಚು ಮಾಡಿ ಬ್ಯಾನರ್ ಹಾಕಿಕೊಂಡು ಕುಳಿತಿದ್ದಾರೆ. ಆದರೆ, ರೈತರು ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಇವರಿಗೆ ಬೇಕಿಲ್ಲ. ರೈತರು ಆತ್ಮಹತ್ಯೆ ಮಾಡಕೊಳ್ಳಬೇಡಿ ಎಂಬ ಒಂದು ಸಂದೇಶ ಕೊಟ್ಟರಾ?, ಇದೇ ರಾಜ್ಯದ ಪರಿಸ್ಥಿತಿ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಮ್ಮ ಪಕ್ಷಕ್ಕೆ ಕಾರ್ಯಕರ್ತರಿದ್ದಾರೆ. ನಾಡಿನ ಜನತೆ ಕೆಲವು ತೀರ್ಮಾನ ತೆಗೆದುಕೊಂಡಿದ್ದಾರೆ. ಪ್ರತಿ ಚುನಾವಣೆಗೆ ಕೆಲವೊಂದು ತೀರ್ಮಾನ ಆಗುತ್ತದೆ. ನಮ್ಮದು ಹೋರಾಟ ಮಾಡಿಕೊಂಡು ಬಂದಿರುವ ಪಕ್ಷ. ಈಗ ಏನೇ ಮಾತನಾಡಿದರೂ ನಗಣ್ಯ. ಲೋಕಸಭೆ ಚುನಾವಣೆಗೆ ಇನ್ನೂ ಎಂಟು, ಒಂಬತ್ತು ತಿಂಗಳಿದೆ ಎಂದು ಮಾರ್ಮಿಕವಾಗಿ ನುಡಿದರು.
ಇಂದಿನಿಂದ ಎರಡು ದಿನಗಳ ಕಾಲ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ನಲ್ಲಿ ಪ್ರತಿಪಕ್ಷಗಳ ಸಭೆ ನಡೆಯಲಿದೆ. 2024ರ ಲೋಕಸಭೆ ಚುನಾವಣೆಗೆ ರಣತಂತ್ರ ರೂಪಿಸುವುದು ಸಭೆಯ ಉದ್ದೇಶವಾಗಿದೆ.
24 ಪಕ್ಷಗಳಿಗೆ ಆಹ್ವಾನ: ಕಾಂಗ್ರೆಸ್, ಟಿಎಂಸಿ, ಎಎಪಿ, ಜೆಡಿಯು, ಡಿಎಂಕೆ, ಕೇರಳ ಕಾಂಗ್ರೆಸ್( ಎಂ), ಎನ್ ಸಿಪಿ, ಕೇರಳ ಕಾಂಗ್ರೆಸ್( ಜೆ), ಆರ್ ಎಸ್ ಪಿ, ವಿಸಿಕೆ, ಎಂಡಿಎಂಕೆ, ಫಾರ್ವರ್ಡ್ ಬ್ಲಾಕ್, ಅಕಾಲಿದಳ, ಎಸ್ ಪಿ ಸೇರಿದಂತೆ 24 ಪಕ್ಷಗಳಿಗೆ ಸಭೆಗೆ ಆಹ್ವಾನ ನೀಡಲಾಗಿದೆ.
ಸಭೆಯಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಮುಖ್ಯಮಂತ್ರಿಗಳಾದ ಅಶೋಕ್ ಗೆಹ್ಲೋಟ್, ನಿತೀಶ್ ಕುಮಾರ್, ಎಂ.ಕೆ.ಸ್ಟಾಲಿನ್, ತೇಜಸ್ವಿ ಯಾದವ್ ಹಾಗೂ ಅರವಿಂದ ಕೇಜ್ರೀವಾಲ್ ಅಖಿಲೇಶ್ ಸಿಂಗ್ ಯಾದವ್, ಪಾಲ್ಗೊಳ್ಳು ಸಾಧ್ಯತೆ ಇದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಇಂದಿನಿಂದ ಪ್ರತಿಪಕ್ಷಗಳ ಸಭೆ: ಪಾಲ್ಗೊಳ್ಳುವ ಪಕ್ಷಗಳು, ನಾಯಕರ ಪಟ್ಟಿ ಇಲ್ಲಿದೆ..