ಬೆಂಗಳೂರು: ಯಶವಂತಪುರ ಉಪಸಮರದ ಪ್ರಚಾರದ ವೇಳೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಚಿವ ಶ್ರೀರಾಮುಲು ವಿರುದ್ಧ ಏಕವಚನ ಪ್ರಯೋಗ ಮಾಡಿದ್ದಾರೆ.
ಈ ದೇಶದ ಮಣ್ಣನ್ನು ವಿದೇಶಗಳಿಗೆ ಮಾರಿಕೊಂಡು ಹೋಗುತ್ತಿದ್ದವರು ನೀವು, ನಿಮಗೆ ನನ್ನ ಬಗ್ಗೆ ಮಾತನಾಡುವ ನೈತಿಕತೆ ಏನಿದೆ. ಕಾವಿ ಬಟ್ಟೆ ಹಾಕಿಕೊಂಡು ಗಡ್ಡ ಬಿಟ್ಟುಕೊಂಡು ಶೋಕಿ ಮಾಡೋದಲ್ಲ ರಾಜಕೀಯ. ನಿನ್ನ ಸಮುದಾಯದ ಮಹಿಳೆಯರಿಗೆ ಅನ್ಯಾಯವಾದಾಗ ನೀನು ಮತ್ತು ನಿಮ್ಮ ಸಿಎಂ ಎಲ್ಲಿ ಹೋಗಿದ್ರಿ. ನಮ್ಮ ಕುಟುಂಬ ಭಾವನಾತ್ಮಕ ಕುಟುಂಬ. ಬಡವರ ಕಷ್ಟ ನೋಡಿದ್ರೆ ನಮಗೆ ಕಣ್ಣೀರು ಬರುತ್ತದೆ. ನಿಮ್ಮಂತಲ್ಲ ನಾವು. ಡಿಸೆಂಬರ್ 9ರ ನಂತರ ಈ ರಾಜ್ಯದಲ್ಲಿ ರಾಜಕೀಯ ಧೃವೀಕರಣ ಮಾತ್ರವಲ್ಲ ರಾಜಕೀಯ ಶುದ್ದೀಕರಣವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಎಸ್ ಟಿ ಸೋಮಶೇಖರ್ ವಿರುದ್ಧವೂ ವಾಗ್ದಾಳಿ ನಡೆಸಿದ ಹೆಚ್ಡಿಕೆ, ನಿಗಮ ಮಂಡಳಿಗಳ ಅಧಿಕಾರ ಕೇವಲ ಅಧಿಕಾರಿಗಳಿಗೆ ಇರುತ್ತದೆ. ಅಧ್ಯಕ್ಷನಾದವನಿಗೆ ಕೇವಲ ಬೋರ್ಡ್ ಮೀಟಿಂಗ್ ನಡೆಸುವುದಷ್ಟೇ ಅಧಿಕಾರ. ಫೈಲ್ಗಳನ್ನೆಲ್ಲ ನನ್ನ ಬಳಿ ತರಬೇಕು. ಇಟ್ಟುಕೊಂಡು ವಸೂಲಿ ಮಾಡಬೇಕೆಂದು ಬಯಸಿದ್ರೆ ಅಧಿಕಾರಿಗಳು ಯಾಕಿರಬೇಕು ಎಂದು ಕಿಡಿ ಕಾರಿದ್ದಾರೆ.
ನನಗೇನು ಶಾಸಕರನ್ನು ಖರೀದಿ ಮಾಡುವ ತಾಕತ್ತು ಇರಲಿಲ್ಲವೇ.. ಆದರೆ, ನಾನು ಆ ಪಾಪದ ಕೆಲಸ ಮಾಡಲು ಹೋಗಲಿಲ್ಲ. ಶಾಸಕರನ್ನು ಖರೀದಿ ಮಾಡುವುದು ಯಡಿಯೂರಪ್ಪನ ಚಾಳಿ. ಈಗ ಹದಿನೈದು ಅನರ್ಹ ಶಾಸಕರನ್ನು ಜನ ಸೋಲಿಸಿದ್ರೆ ಬಿಜೆಪಿ ಸರ್ಕಾರ ರಾಜೀನಾಮೆ ಕೊಟ್ಟು ಹೋಗಬೇಕಾಗುತ್ತದೆ. ಮಹಾರಾಷ್ಟ್ರದಲ್ಲಿ ಮುಖಕ್ಕೆ ಮಂಗಳಾರತಿ ಮಾಡಿಸಿಕೊಂಡ್ರಲ್ಲಾ, ಹಾಗೇ ಆಗುತ್ತೆ.
2ನೇ ಹಂತದ ಶಾಸಕರ ರಾಜೀನಾಮೆ ಕೊಡಿಸಲು ಸಿದ್ದರಾಗಿದ್ದಾರೆ. ಆದರೆ, ಈ ಬಾರಿ ಶಾಸಕರೂ ಕೂಡ ರಾಜೀನಾಮೆ ಕೊಡುವ ಮೊದಲು ಯೋಚನೆ ಮಾಡುತ್ತಾರೆ. ಬಿ ಸಿ ಪಾಟೀಲ್, ಯಡಿಯೂರಪ್ಪನವರನ್ನು ಕಾಮಧೇನು ಎನ್ನುತ್ತಾರೆ. ಯಾರಿಗೆ ಯಡಿಯೂರಪ್ಪ ಕಾಮಧೇನು? ಜನರಿಗಂತೂ ಅಲ್ಲ, ಜನರನ್ನು ಲೂಟಿ ಮಾಡುವ ಹದಿನೇಳು ಜನ ಲೂಟಿಕೋರರಿದ್ದಾರಲ್ಲ ಅವರ ಪಾಲಿಗೆ ಕಾಮಧೇನು ಎಂದು ಟೀಕಿಸಿದ್ದಾರೆ.