ಬೆಂಗಳೂರು : ಹೇಗೋ ಶ್ರಮಪಟ್ಟು ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೀರಾ. ಜನರ ಬದ್ಧತೆಗೆ ಅನುಗುಣವಾಗಿ ಕೆಲಸ ಮಾಡಿ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಸಿಎಂ ಯಡಿಯೂರಪ್ಪ ಅವರಿಗೆ ಸಲಹೆ ನೀಡಿದ್ದಾರೆ.
ವಿಧಾನಸಭೆಯಲ್ಲಿ ಇಂದು ಪ್ರವಾಹ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಹೇಗೋ ಶ್ರಮಪಟ್ಟು ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೀರಾ. ಜನರ ಬದ್ಧತೆಗೆ ಅನುಗುಣವಾಗಿ ಕೆಲಸ ಮಾಡಿ. ನಮ್ಮ ನಿಮ್ಮ ಕೆಸರೆರಚಾಟದಿಂದ ಸಂತ್ರಸ್ತರು ನಲುಗುತ್ತಿದ್ದಾರೆ. ಅವರಿಗೆ ಪರಿಹಾರ ನೀಡುವ ಕಾರ್ಯ ಆಗಬೇಕಿದೆ ಎಂದು ಕಿವಿಮಾತು ಹೇಳಿದರು.
ಮಂಡ್ಯ ಜಿಲ್ಲೆಯಲ್ಲಿ ಬೆಳೆದಿರುವ ಕಬ್ಬು ಮಾರಾಟ ಮಾಡುವುದು ಕಷ್ಟವಾಗಿದೆ. ಕಬ್ಬು ಮಾರಾಟ ಮಾಡದ ರೈತರಿಗೆ ಮೈತ್ರಿ ಸರ್ಕಾರದಲ್ಲಿ ಪರಿಹಾರ ನೀಡಿದ್ದೆವು. ಹಾಗಾಗಿ, ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿಸಿ. ಮೈತ್ರಿ ಸರ್ಕಾರದಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ, ನಾನು ಯಾವುದೇ ಟಿಎ, ಡಿಎ ಕ್ಲೇಮ್ ಮಾಡಿರಲಿಲ್ಲ. ಶಾಸಕನಾಗಿ ಪಡೆದ ಸಂಬಳವನ್ನು ಚಿಕ್ಕಮಗಳೂರಿನ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ನೀಡಿದೆ.
ಗೋಕಾಕ್ನಲ್ಲಿ ನಿರಾಶ್ರಿತರಿಗೆ ಕೊಟ್ಟಿರುವ ಶೆಡ್ಗಳಿಗೆ ಜನರು ಹೋಗುತ್ತಿಲ್ಲ. ಕಾರಣ ಅವರು ಹೋದರೆ ಪರಿಹಾರ ಸಿಗುವುದಿಲ್ಲ ಎಂಬ ಭಯ ಸಂತ್ರಸ್ತರನ್ನು ಕಾಡುತ್ತಿದೆ. ಈ ಬಗ್ಗೆ ಅವರಿಗೆ ಅರಿವು ಮೂಡಿಸಬೇಕು. ನಮ್ಮ ಸರ್ಕಾರದಲ್ಲಿ ಜನರ ತೆರಿಗೆಯ ಹಣವನ್ನು ಕಡಿತಗೊಳಿಸದೆ ಅಭಿವೃದ್ಧಿ ಕೆಲಸ ಮಾಡಿದ್ದೆವು. ಆ ರೀತಿಯ ಪರಿಸ್ಥಿತಿಯಲ್ಲಿ ಸರ್ಕಾರ ನಡೆಸಿದ್ದೇವೆ. ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಹಣವನ್ನು ಸಂತ್ರಸ್ತರಿಗೆ ನೀಡಿ ಎಂದು ಒತ್ತಾಯಿಸಿದರು.
ಅಂದು ಕೊಡಗಿನ ಪರಿಹಾರದ ಜೊತೆಗೆ ರೈತರ ಸಾಲಮನ್ನಾ ಆಗಿಲ್ಲ ಎಂದು ವಿಪಕ್ಷಗಳು ಟೀಕಿಸಿದ್ದವು. ಅಧಿಕಾರಕ್ಕಾಗಿ ತಲೆಯೊಡೆಯುವ ಸರ್ಕಾರ ಬೇಕಾ? ಎಂದು ಪ್ರಧಾನಿಗಳು ಕೇಳಿದ್ದರು ಎಂದು ಹಿಂದಿನ ಘಟನೆಯನ್ನು ಮೆಲುಕು ಹಾಕಿದರು.
ಅಥಣಿಯಲ್ಲಿ 36 ಸಾವಿರ ರೈತರ ಸಾಲಮನ್ನಾ ಮಾಡಿದ್ದೇವೆ. ಅಂದು 16 ಸಾವಿರ ಕೋಟಿ ನಷ್ಟವಾಗಿದ್ದನ್ನು ಪ್ರಧಾನಿ, ಗೃಹ ಸಚಿವರನ್ನು ಭೇಟಿ ಮಾಡಿ ಪರಿಹಾರ ಕೇಳಿದ್ದೆವು. ಮುಂಗಾರಿನ ನಷ್ಟಕ್ಕೆ ಕೇಂದ್ರ 900 ಕೋಟಿ ರೂ. ಪರಿಹಾರ ನೀಡಿತ್ತು. ಆದರೆ, ಈ ಬಾರಿ ದೊಡ್ಡಮಟ್ಟದ ಅನಾಹುತ ರಾಜ್ಯದಲ್ಲಿ ನಡೆದಿದೆ. ಇಂತಹ ಸಂದರ್ಭದಲ್ಲಿ ಒಂದು ರಾತ್ರಿಯಲ್ಲಿ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ. ಎನ್ ಡಿಆರ್ಎಫ್ ನಿಯಮಾವಳಿ ತೆಗೆದುಹಾಕಿ ಕೊಡಗಿನಲ್ಲಿ ಪರಿಹಾರ ನೀಡಿದ್ದೆವು. ಅದೇ ರೀತಿ ಸ್ಪಂದನೆಯನ್ನು ನಿಮ್ಮಿಂದಲೂ ನಿರೀಕ್ಷಿಸುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರು.
ನೆರೆ ಸಂತ್ರಸ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ಬಳಿಕ ಅಧಿಕಾರಿಗಳಿಗೆ ಸೂಚನೆ ನೀಡಿ. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಎಂದು ಸಲಹೆ ನೀಡಿದರು.