ಬೆಂಗಳೂರು: ಬಿಜೆಪಿಯವರು ಬೆಲೆ ಏರಿಕೆ ವಿಷಯದಿಂದ ಜನರ ಮನಸ್ಸನ್ನು ಬೇರೆಡೆ ತಿರುಗಿಸಲು ಧರ್ಮದ ವಿಷಯ ಕೈಗೆತ್ತಿಕೊಂಡಿದ್ದಾರೆ. ಇದರ ಪರಿಣಾಮ, ಕುವೆಂಪುರವರ ಸರ್ವ ಜನಾಂಗದ ಶಾಂತಿಯ ತೋಟ ಇಂದು ಹೊತ್ತಿ ಉರಿಯುತ್ತಿದೆ. ಬಸವರಾಜ ಬೊಮ್ಮಾಯಿ ಮೌನಿ ಬಾಬಾ ಆಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ನಗರದ ಫ್ರೀಡಂ ಪಾರ್ಕ್ನಲ್ಲಿ ಇಂದು ಜೆಡಿಎಸ್ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಹಿಜಾಬ್ ವಿಷಯದಲ್ಲಿ ಅಲ್ ಖೈದಾ ಸಂಘಟನೆಯ ಯಾರೋ ಏನೋ ಹೇಳಿದ್ರು ಅಂತಾ ಸಿಎಂ ತನಿಖೆಗೆ ಆದೇಶಿಸಿದ್ದಾರೆ. ಆದರೆ, ಪ್ರಾರಂಭದಲ್ಲೇ ಹಿಜಾಬ್ ವಿಷಯವನ್ನು ಸರಿಪಡಿಸಿದ್ದರೆ ಇವತ್ತು ಅಲ್ ಖೈದಾ ಸಂಘಟನೆಯ ಪ್ರವೇಶವಾಗುವ ಪರಿಸ್ಥಿತಿ ಬರುತ್ತಿತ್ತಾ? ಎಂದರು.
ಐದು ರಾಜ್ಯಗಳ ಚುನಾವಣೆ ಫಲಿತಾಂಶದ ನಂತರ ಇಂಧನ ದರಗಳು ಷೇರು ಮಾರುಕಟ್ಟೆ ದರಗಳಂತೆ ಏರುತ್ತಿವೆ. ಬೆಂಗಳೂರಿನಲ್ಲಿ ಪೆಟ್ರೋಲ್ 112ರೂ, ಡೀಸೆಲ್ 95ರೂ.ಗೆ ಮುಟ್ಟಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉಜ್ವಲ ಯೋಜನೆಯಡಿ ಗ್ಯಾಸ್ ಸಿಲಿಂಡರ್ ಮತ್ತು ಸ್ಟೌ ಉಚಿತವಾಗಿ ಕೊಟ್ಟರು. ಆದರೆ, ಈಗ ಗ್ಯಾಸ್ ಸಿಲಿಂಡರ್ ಬೆಲೆ 1000ರೂ.ಗೆ ಮುಟ್ಟಿದೆ. ನಮ್ಮ ಗ್ರಾಮೀಣ ಪ್ರದೇಶದಲ್ಲಿ ಕಟ್ಟಿಗೆಯನ್ನೂ ಬಳಸಲು ಆಗುತ್ತಿಲ್ಲ ಎಂದು ಹೆಚ್‌ಡಿಕೆ ಟೀಕಿಸಿದರು.
ಇದನ್ನೂ ಓದಿ:ಊಟದ ಬಿಲ್ ಕೇಳಿದ್ದಕ್ಕೆ ಡಾಬಾ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ