ಬೆಂಗಳೂರು: ಬಿಜೆಪಿಗೆ ಅಧಿಕಾರದ ದಾಹ ಹೆಚ್ಚಾಗಿದೆ. ಬೇರೆಯವರು ಅಧಿಕಾರದಲ್ಲಿ ಇರುವುದನ್ನು ಬಿಜೆಪಿಗೆ ಸಹಿಸಲು ಆಗುತ್ತಿಲ್ಲ ಎಂದು ಹೆಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ. ಪಕ್ಷದ ಕಚೇರಿ ಜೆಪಿ ಭವನದಲ್ಲಿಂದು ಮಹಾರಾಷ್ಟ್ರ ರಾಜಕೀಯ ಕುರಿತು ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಸ್ಪಷ್ಟ ಬಹುಮತ ಬಂದ ಸರ್ಕಾರವೂ ಉಳಿಯುವುದು ಡೌಟ್. ಈ ಬಿಜೆಪಿ ಪಕ್ಷ ಪೂರ್ಣ ಬಹುಮತ ಪಡೆದ ಸರ್ಕಾರದ ಅವಧಿ ಮುಗಿಸುವುದಕ್ಕೂ ಬಿಡುವುದಿಲ್ಲ. ಮೇಲ್ನೋಟಕ್ಕೆ ಉದ್ದವ್ ಠಾಕ್ರೆ ಅವರು ಶಾಸಕರ ವಿಶ್ವಾಸ ಗಳಿಸಿಲ್ಲವೆಂದು ಹೇಳುತ್ತಿದ್ದಾರೆ. ಆದರೆ ಅದರ ಹಿಂದೆ ಇರುವುದು ಬಿಜೆಪಿಯೇ ಎಂದು ಆರೋಪ ಮಾಡಿದರು.
ಕರ್ನಾಟಕದಲ್ಲಿ ನನಗೂ ಇದರ ಅನುಭವವಾಗಿದೆ. ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲವೆಂದು ನನ್ನ ಮೇಲೂ ಆರೋಪ ಮಾಡಿದ್ರು. ನಾನು ಕಾಂಗ್ರೆಸ್ ಶಾಸಕರ ಕ್ಷೇತ್ರದ ಅಭಿವೃದ್ಧಿಗೆ 19 ಸಾವಿರ ಕೋಟಿ ಕೊಟ್ಟೆ ಎಂದು ಮೈತ್ರಿ ಸರ್ಕಾರದ ಘಟನೆಯನ್ನು ನೆನಪಿಸಿಕೊಂಡರು. ಮಹಾರಾಷ್ಟ್ರದ ಬಿಜೆಪಿ ನಡವಳಿಕೆ ಸಂವಿಧಾನ ರಚನೆಗೆ ಮಾಡಿದ ಅಪಚಾರ. ಸಂವಿಧಾನ ರಕ್ಷಣೆ ವಿಚಾರ ಇವತ್ತು ಉಳಿದಿಲ್ಲ. ಎಷ್ಟೇ ಒಳ್ಳೆ ರೀತಿಯ ಸರ್ಕಾರ ಮಾಡಿದರೂ ಬೆಲೆ ಇಲ್ಲದಂತೆ ಆಗಿದೆ ಎಂದರು.
ಪಠ್ಯ ಪುಸ್ತಕ ವಿವಾದ ವಿಚಾರಕ್ಕೆ ಪ್ರತಿಕ್ರಿಯಿಸಿ, ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಪಠ್ಯದ ವಿರುದ್ಧ ಮಾತನಾಡುತ್ತಿದೆ. ಈಗ ಬಿಜೆಪಿ ಸಚಿವರು ಸಿದ್ದರಾಮಯ್ಯ ಸರ್ಕಾರ ರಚನೆ ಮಾಡಿದ್ದ ಪಠ್ಯದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಎರಡು ಸರ್ಕಾರದ ಅವಧಿಯಲ್ಲಿ ಪಠ್ಯಪುಸ್ತಕದಲ್ಲಿ ಏನಾಗಿದೆಯೆಂದು ನಾನು ನೋಡಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಚಿರತೆ ದತ್ತು ಸ್ವೀಕಾರ ಮತ್ತೊಂದು ವರ್ಷಕ್ಕೆ ನವೀಕರಿಸಿದ ಕ್ರಿಕೆಟರ್ ವೇದಾ
ಶಾಸಕರ ಉಚ್ಛಾಟನೆ ಕೋರ್ ಕಮಿಟಿ ನಿರ್ಧಾರ: ಶಾಸಕರಾದ ಗುಬ್ಬಿ ಶ್ರೀನಿವಾಸ್ ಮತ್ತು ಶ್ರೀನಿವಾಸಗೌಡರನ್ನು ಉಚ್ಛಾಟನೆ ಮಾಡಿರುವುದು ಕೋರ್ ಕಮಿಟಿ ನಿರ್ಧಾರ. ಪಕ್ಷದ ವಿರುದ್ಧ ಅಡ್ಡ ಮತದಾನ ಮಾಡಿದ್ದಕ್ಕೆ ಉಚ್ಛಾಟನೆ ಮಾಡಿದ್ದೇವೆ. ಆದರೆ ಈ ಸಂಬಂಧ ಕೋರ್ಟ್ಗೆ ಹೋಗುವುದು ಅಥವಾ ವಿಧಾನಸಭೆ ಸ್ಪೀಕರ್ಗೆ ದೂರು ನೀಡುವುದರಿಂದ ಏನೂ ಆಗದು. ಈಗ ಇರುವ ಪಕ್ಷಾಂತರ ನಿಷೇಧ ಕಾಯ್ದೆ ಯಶಸ್ವಿಯಾಗುವುದಿಲ್ಲ. ಮೊದಲು ಈ ವ್ಯವಸ್ಥೆ ಬದಲಾವಣೆ ಆಗಬೇಕು. ನಮ್ಮ ಸರ್ಕಾರ ಬಂದರೆ ಈ ಕಾನೂನುಗಳಿಗೆ ಬಲ ಕೊಡುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.