ಬೆಂಗಳೂರು: ನಾಳೆ ಅಥವಾ ಗುರುವಾರ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಆಗಬಹುದು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಸಂಜೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇಂದು ಮಂಗಳವಾರ ಆಗಿರುವುದರಿಂದ ಪಟ್ಟಿ ಬಿಡುಗಡೆಯಾಗಿಲ್ಲ ಎಂದರು.
ನನಗಿಂತ ಹೆಚ್ಚು ಮಾಧ್ಯಮಗಳಿಗೆ ಹಾಸನ ಟಿಕೆಟ್ ಘೋಷಣೆ ಬಗ್ಗೆ ಕುತೂಹಲವಿದೆ. ಅದನ್ನು ಬಿಟ್ಟು ಟಿಕೆಟ್ ಘೋಷಣೆ ಮಾಡಿದರೆ ಇನ್ಯಾವುದೋ ಕಥೆ ಹುಟ್ಟಿಕೊಳ್ಳುತ್ತದೆ. ಹಾಗಾಗಿ ಆ ಪಟ್ಟಿಯಲ್ಲಿ ಹಾಸನದ್ದೂ ಒಳಗೊಂಡಂತೆ ತೀರ್ಮಾನ ಮಾಡಬೇಕು ಎಂಬ ಲೆಕ್ಕಾಚಾರವಿದೆ. ಜೆಡಿಎಸ್ ವರಿಷ್ಠರಾದ ಹೆಚ್.ಡಿ.ದೇವೇಗೌಡರು ನಾಳೆ ಸಂಜೆ ದೆಹಲಿಯಿಂದ ವಾಪಸ್ ಆಗುತ್ತಾರೆ. ನಂತರ ಚರ್ಚಿಸಿ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದರು.
ಮೊದಲ ಪಟ್ಟಿ ಬಿಡುಗಡೆಯಾದಗಲೂ ಯಾವುದೇ ಸಮಸ್ಯೆ ಇರಲಿಲ್ಲ. ಎರಡನೇ ಪಟ್ಟಿ ವೇಳೆ ಹಾಸನದ್ದು ಹೆಚ್ಚು ಪ್ರಚಾರವಾಗಿದೆ. ಹಾಸನ ವಿಚಾರದಿಂದ ಜನತಾದಳಕ್ಕೂ ಹೆಚ್ಚು ಪ್ರಚಾರ ಸಿಕ್ಕಿದೆ. ಇದರಿಂದಾಗಿ ರಾಜ್ಯದಲ್ಲಿ ಶೇ. 2-3 ರಷ್ಟು ನಮ್ಮ ಮತ ಪ್ರಮಾಣ ಹೆಚ್ಚಾಗಲಿದೆ. ನಮ್ಮ ಗುರಿ ಮುಟ್ಟಲು ಯಾವುದೇ ದುಡುಕಿ ತೀರ್ಮಾನ ಮಾಡಲ್ಲ. ಕಾರ್ಯಕರ್ತರ ಅಪೇಕ್ಷೆ, ಗೆಲ್ಲುವ ಮಾನದಂಡದಲ್ಲೇ ಟಿಕೆಟ್ ಕೊಡಲಾಗುವುದು ಎಂದು ತಿಳಿಸಿದರು.
ಕಾಂಗ್ರೆಸ್ ಪಟ್ಟಿ ಬಿಡುಗಡೆ ಆಗದ ಹಿನ್ನೆಲೆಯಲ್ಲಿ ಜೆಡಿಎಸ್ ಪಟ್ಟಿ ವಿಳಂಬವಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಹೆಚ್‌ಡಿಕೆ, ಅದರ ಬಗ್ಗೆ ನಾನು ಚಿಂತಿಸಿಲ್ಲ. ಕೆಲವು ಭಾಗಗಳಲ್ಲಿ ನಾವು ವೀಕ್ ಇದ್ದೇವೆ. ಉತ್ತರ ಕರ್ನಾಟಕದಲ್ಲಿ ಮತ ಹಾಕಲು ಜನ ಸಿದ್ದರಿದ್ದಾರೆ. ಆದರೆ ಮತಗಳಾಗಿ ಪರಿವರ್ತನೆ ಮಾಡುವ ಅಭ್ಯರ್ಥಿಗಳ ಕೊರತೆ ಇದೆ. ಮತವಾಗಿ ಪರಿವರ್ತನೆ ಮಾಡುವ ನಾಯಕರು ಬಂದಾಗ ಆ ಬಗ್ಗೆ ಚಿಂತನೆ ಮಾಡುತ್ತೇವೆ.
ಕೆಲವೊಂದು ಕ್ಷೇತ್ರದಲ್ಲಿ ಮತವಾಗಿ ಪರಿವರ್ತನೆ ಮಾಡುವ ಶಕ್ತಿಯ ಕೊರತೆ ಇದೆ ಅನ್ನುವುದನ್ನು ಒಪ್ಪುತ್ತೇನೆ. ಕಾಂಗ್ರೆಸ್, ಬಿಜೆಪಿಯವರು ಒಪ್ಪುತ್ತಾರೋ ಇಲ್ಲವೋ ಗೊತ್ತಿಲ್ಲ, ನಾನು ಒಪ್ಪುತ್ತೇನೆ. ಬಿಜೆಪಿ, ಕಾಂಗ್ರೆಸ್ ಬೇರೆ ಬೇರೆ ಪಕ್ಷಗಳಿಂದ ಕರೆದುಕೊಂಡು ಬಂದು ಅಭ್ಯರ್ಥಿ ಮಾಡಿದ್ದಾರಲ್ಲಾ?. ನಮಗೂ ಅಭ್ಯರ್ಥಿಗಳಿದ್ದಾರೆ, ಘೋಷಣೆ ಮಾಡುತ್ತೇವೆ. ನಮಗೆ ಕೊರತೆ ಇರುವ ಕಡೆ ಬೇರೆ ಪಕ್ಷದ ನಾಯಕರನ್ನು ತೆಗೆದುಕೊಳ್ಳುತ್ತೇವೆ ಎಂದರು.
ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುವುದಿಲ್ಲ ಎನ್ನುವ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಅದು ಅವರ ಪಕ್ಷಕ್ಕೆ ಸೇರಿದ ವಿಚಾರ. ಚುನಾವಣೆಯಲ್ಲಿ ಜನ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಕೊಡುತ್ತಾರೋ ಅದು ಮುಖ್ಯ. ಎಷ್ಟು ಸ್ಥಾನ ಬರುತ್ತದೆ ಎಂಬುದರ ಆಧಾರದ ಮೇಲೆ ಈ ವಿಚಾರ ಬರುತ್ತದೆ. ಕೂಸು ಹುಟ್ಟೋಕೂ ಮುನ್ನ ಕುಲಾವಿ ಹೊಲಿಸಿದ್ರೆ ಆಗುತ್ತಾ?. ಮುಗು ಹುಟ್ಟಿದರೆ ಕುಲಾವಿ ಹೊಲಿಸಬಹುದು, ಅದಕ್ಕೂ ಮುನ್ನ ಕುಲಾವಿ ಹಾಕೊತೀನಿ ಅಂದ್ರೆ ಯಾಕೆ ಬೇಡ ಅನ್ನಲಿ ಎಂದು ವ್ಯಂಗ್ಯವಾಡಿದರು.
ಜೆಡಿಎಸ್‌ಗೆ 100 ಸ್ಥಾನ ಬಂದರೆ ರಾಜೀನಾಮೆ ಕೊಡುತ್ತೇನೆ ಎಂಬ ಸಚಿವ ಡಾ.ಕೆ.ಸುಧಾಕರ್ ಹೇಳಿಕೆ ವಿಚಾರಕ್ಕೆ ತಿರುಗೇಟು ನೀಡಿದ ಹೆಚ್‌ಡಿಕೆ, ಹೆಚ್ಚೂ ಕಡಿಮೆ ಆಗಿ ರಾಜೀನಾಮೆ ಕೊಡಬೇಕಾದ ಸಂದರ್ಭ ಬಂದು ಬಿಟ್ಟಾತು. ಆಮೇಲೆ ಎಂಎಲ್ಎ ಆಗೋಕೆ ಆಗಲ್ಲ. ಅವರ ಹಣದ ದಾಹ ಜನರಿಗೆ ಗೊತ್ತಿದೆ. ರೆಫ್ರಿಜಿರೇಟರ್, ಸ್ಟೌವ್ ಎಲ್ಲಾ ಕೊಡ್ತಾ ಇದ್ದಾರೆ. ಎಚ್ಚರಿಕೆಯಿಂದ ಇರಬೇಕು ಎಂದರು.
ಇದನ್ನೂ ಓದಿ: ಮುಸ್ಲಿಂ ಸಮಾಜವನ್ನು ತುಳಿಯಲು ಬಿಜೆಪಿ ಸರ್ಕಾರ ಪ್ರಯತ್ನಿಸುತ್ತಿದೆ: ಹೆಚ್ ಡಿ ರೇವಣ್ಣ