ಬೆಂಗಳೂರು : ಮಂಗಳೂರಿನಲ್ಲಿ ನಡೆದ ಗಲಭೆ, ಗೋಲಿಬಾರ್ ಪ್ರಕರಣದಲ್ಲಿ ಬಿಜೆಪಿ ಸರ್ಕಾರ ನಾಟಕವಾಡಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಮಂಗಳೂರಿನಲ್ಲಿ ನಡೆದ ಅಸಲಿ ಘಟನಾವಳಿಗಳ ಕುರಿತು ಮಾಡಿದ್ದ ಸಿಡಿಯನ್ನು ಬಿಡುಗಡೆ ಮಾಡಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್ಡಿಕೆ, ಸತ್ಯವನ್ನು ಮರೆಮಾಚಿದ ವಿಡಿಯೋವನ್ನು ಬಿಡುಗಡೆ ಮಾಡಲಾಗಿದೆ. ಇದರಿಂದ ಸತ್ಯಾನುಸತ್ಯತೆ ತಿಳಿಯಲಿದೆ ಎಂದರು.
ಪ್ರತಿಭಟನೆ ನಡೆಯುತ್ತಿದ್ದ ವೇಳೆ ಪೊಲೀಸರು ದೌರ್ಜನ್ಯ ನಡೆಸಿರುವುದು ವಿಡಿಯೋದಲ್ಲಿ ಬಹಿರಂಗವಾಗಿದೆ. ಪ್ರತಿಭಟನಾಕಾರರನ್ನು ಹಾಗೂ ಘೋಷಣೆ ಕೂಗಿದವರನ್ನು ಬಿಟ್ಟು ಜನಸಾಮಾನ್ಯರ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ. ಇನ್ನು ಗೂಡ್ಸ್ ಆಟೋದಲ್ಲಿ ಕಲ್ಲು ತಂದಿದ್ದರು ಎಂಬುದನ್ನು ಪೊಲೀಸರು ಕಟ್ಟು ಕಥೆ ಕಟ್ಟಿದ್ದಾರೆ. ಅಮಾಯಕರ ಮೇಲೆ ಹಲ್ಲೆ ನಡೆಸಿರುವುದು ಸ್ಪಷ್ಟವಾಗಿದೆ ಎಂದರು.
ಮಂಗಳೂರಿನಲ್ಲಿ ಅಂದು ನಡೆದ ಘಟನೆಯ ಸುಮಾರು 35 ದೃಶ್ಯಗಳನ್ನು ತೋರಿಸಿದ ಕುಮಾರಸ್ವಾಮಿ, ಈ ಪ್ರಕರಣವನ್ನು ಸರ್ಕಾರ ತಿರುಚಿದೆ ಎಂದು ದೂರಿದರು. ಈ ಪ್ರಕರಣವನ್ನು ಇಲ್ಲಿಗೆ ಬಿಡುವುದಿಲ್ಲ. ವಿಧಾನಸಭೆಯಲ್ಲಿ ಇದನ್ನು ಪ್ರಸ್ತಾಪಿಸಲಾಗುವುದು. ಪ್ರಕರಣದಲ್ಲಿ ಮಂಗಳೂರು ಪೊಲೀಸ್ ಆಯುಕ್ತ ಡಾ. ಹರ್ಷ ನಡೆಯೇ ಅನುಮಾನಾಸ್ಪದವಾಗಿದೆ. ಈ ಘಟನೆ ಕುರಿತು ಮಾಹಿತಿ ಕಲೆ ಹಾಕಿದ್ದು, ಪೊಲೀಸರ ವರ್ತನೆ ಸ್ಪಷ್ಟವಾಗಿದೆ. ಹಿಂಸಾಚಾರಕ್ಕೆ ಪೊಲೀಸರಿಂದಲೇ ಪ್ರಚೋದನೆ ನೀಡಲಾಗಿದೆ. ಹಾಗಾಗಿ, ಪೊಲೀಸ್ ಆಯುಕ್ತ ಹರ್ಷ ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಿ ತನಿಖೆ ನಡೆಸಬೇಕೆಂದು ಸರ್ಕಾರಕ್ಕೆ ಹೆಚ್ಡಿಕೆ ಒತ್ತಾಯಿಸಿದರು.
ಮಂಗಳೂರು ಗಲಭೆಯಲ್ಲಿ ಯಾವುದೇ ಪೊಲೀಸ್ ಗಾಯಗೊಂಡಿಲ್ಲ. ಲಾಠಿ ಚಾರ್ಜ್ ವೇಳೆ, ವಿದ್ಯಾರ್ಥಿಗೆ ಪೊಲೀಸ್ ಒಬ್ಬರು ಹೊಡೆಯೋ ವೇಳೆ ಇನ್ನೊಬ್ಬ ಪೊಲೀಸ್ಗೆ ಹೊಡೆತ ಬಿದ್ದು ಏಟಾಗಿದೆ. ಮತ್ತೊಬ್ಬ ಪೊಲೀಸ್ಗೆ ಮಂಡಿಗೆ ಗಾಯವಾಗಿದೆ. ಇದು ಬಿಟ್ಟು ಬೇರಾವ ಪೊಲೀಸ್ಗೂ ಗಾಯವಾಗಿಲ್ಲ ಎಂದ ಅವರು, ನ್ಯಾಯಾಂಗ ತನಿಖೆ ಬೇಡವೆಂದು ನಾನೇ ಹೇಳಿದ್ದೇನೆ. ಸದನದಲ್ಲಿ ಸಮಿತಿ ರಚಿಸಿ ನಮ್ಮನ್ನೂ ಸೇರಿಸಿ. ಎಲ್ಲ ಸೇರಿ ಹೋಗೋಣ. ಸತ್ಯಾಸತ್ಯತೆ ಗೊತ್ತಾಗುತ್ತದೆ ಎಂದು ಹೇಳಿದರು.
ಆ ಘಟನೆ ಕುರಿತು ಸಿಟಿಜನ್ ಫೋರಂನಿಂದ ಜನತಾ ಆಂದೋಲನ ಮಾಡಲು ತೀರ್ಮಾನ ಮಾಡಲಾಗಿತ್ತು. ನಿವೃತ್ತ ನ್ಯಾ. ಗೋಪಾಲಗೌಡ, ಪತ್ರಕರ್ತ ಸುಗತ ಶ್ರೀನಿವಾಸರಾಜು ಸೇರಿದಂತೆ ಮೂರು ಜನರ ತಂಡ ರಚನೆ ಮಾಡಿ ಜನತಾ ಅದಾಲತ್ ಮಾಡಲಾಗಿತ್ತು. ಆಗ ಅಲ್ಲಿನ ಎಸ್ಐ ಅದಕ್ಕೆ ಅವಕಾಶ ಕೊಟ್ಟಿಲ್ಲ. ಈ ಅಧಿಕಾರ ಅವರಿಗೆ ಕೊಟ್ಟವರು ಯಾರು ? ಎಂದು ಕಿಡಿಕಾರಿದರು. ಗಲಭೆ ಕುರಿತು ಸರ್ಕಾರ ಬಿಡುಗಡೆ ಮಾಡಿದ್ದ ವಿಡಿಯೋ ಎಷ್ಟು ನಿಜ ಎಂಬುದು ಬಹಿರಂಗವಾಗಬೇಕೆಂದು ಕಿಡಿ ಕಾರಿದರು.
ರಾಜ್ಯದ 30 ಜಿಲ್ಲೆಗಳಲ್ಲೂ ಸಿಎಎ ವಿರುದ್ಧ ಶಾಂತಯುತ ಪ್ರತಿಭಟನೆಯಾಗಿದೆ, ಆದರೆ ಮಂಗಳೂರಲ್ಲಿ ಮಾತ್ರ ಏಕೆ ಗಲಭೆಯಾಗಿದೆ ಎಂದು ಇದೇ ವೇಳೆ ಪ್ರಶ್ನಿಸಿದರು. ಜನತೆಯನ್ನು ಭಯಬೀಳಿಸಿ ಎಷ್ಟು ದಿನ ಸರ್ಕಾರ ನಡೆಸುತ್ತೀರಾ? ಜಗದೀಶ್ ಶೆಟ್ಟರ್ರನ್ನು ಮಂತ್ರಿ ಮಾಡಲಿಲ್ಲವೆಂದು ಹುಬ್ಬಳ್ಳಿಯಲ್ಲಿ ಬಸ್ಗೆ ಬೆಂಕಿ ಇಟ್ಟವರು ನೀವು, ಆಗಲೂ ಯಡಿಯೂರಪ್ಪ ಸಿಎಂ ಆಗಿದ್ದರು. ಆಗ ಇಲ್ಲದ ಕಾಳಜಿ ಪಾಪ ಈಗ ಏಕಾಏಕಿ ಬಂದಿದೆ. ಈಗ ದಾವೋಸ್ಗೆ ಹೋಗಲ್ವಂತೆ, ದೆಹಲಿಗೆ ಹೋಗುತ್ತಾರಂತೆ ಎಂದು ವ್ಯಂಗ್ಯವಾಡಿದರು.
ಇಂದು ತೋಳ ಚಂದ್ರಗ್ರಹಣ ಕುರಿತು ಮಾಧ್ಯಮಗಳಲ್ಲಿ ತೋರಿಸ್ತಾ ಇದ್ದೀರಿ, ಈ ತೋಳದಿಂದ ಏನಾಗಿತ್ತೋ ದೇಶಕ್ಕೆ ನೋಡಬೇಕು. ಆ ಮೇಲೆ ಸಂಪುಟ ವಿಸ್ತರಣೆ, ಅವಾಗ ಏನೇನ್ ಆಗುತ್ತೆ ನೋಡಬೇಕೆಂದು ಎಂದು ಹೇಳಿದರು. ಈ ಸರ್ಕಾರ ಮಾತೆತ್ತಿದರೆ ಸೆಕ್ಷನ್ 144 ಜಾರಿ ಮಾಡುತ್ತದೆ. ಬ್ರಿಟಿಷರ ಆಳ್ವಿಕೆಯಲ್ಲೂ ಇಷ್ಟೊಂದು ದಬ್ಬಾಳಿಕೆ ನಡೆದಿರಲಿಲ್ಲ, ಅಷ್ಟೊಂದು ದಬ್ಬಾಳಿಕೆ ಈಗ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.