ಬೆಂಗಳೂರು: ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ವಿಶ್ವಾಸಮತಯಾಚನೆ ಮೇಲೆ ಚರ್ಚೆಗೆ ಸ್ಪೀಕರ್ ಅವಕಾಶ ನೀಡಿದ್ರು. ಈ ವೇಳೆ ಒಂದೇ ದಿನದಲ್ಲಿ ವಿಶ್ವಾಸ ಮತಯಾಚನೆ ಮುಗಿಸುವಂತೆ ಬಿಎಸ್ವೈ ಒತ್ತಾಯ ಮಾಡಿದರು. ವಿಶ್ವಾಸ ನಿರ್ಣಯ ಮಂಡನೆ ಮಾಡಿದ ಸಿಎಂ ಕುಮಾರಸ್ವಾಮಿ ರಾಜೀನಾಮೆ ನೀಡಿರೋ 13 ಅತೃಪ್ತ ಶಾಸಕರು ಸದನಕ್ಕೆ ಗೈರಾಗಿದ್ದಾರೆ. ಮೈತ್ರಿ ಸರ್ಕಾರದ ಮುಂದೆ ಹಲವಾರು ಸವಾಲುಗಳಿವೆ. ಬರಗಾಲ, ಅತಿವೃಷ್ಟಿ ಸೇರಿದಂತೆ ಹಲವಾರು ಸಮಸ್ಯೆಗಳನ್ನು ನಾವು ಯಶಸ್ವಿಯಾಗಿ ಎದುರಿಸಿದ್ದೇವೆ. ಇದು ಲೂಟಿ ಸರ್ಕಾರ ಅಲ್ಲ ಎಂಬುದನ್ನು ಮತ್ತು ನಾವು ಎದುರಿಸುವ ಸಮಸ್ಯೆಗಳನ್ನು ಇಲ್ಲಿ ಚರ್ಚಿಸಬೇಕಿದೆ. ಅದಕ್ಕಾಗಿ ನಮಗೆ ಸಮಯಾವಕಾಶ ಬೇಕಿದೆ ಎಂದು ಸ್ಪೀಕರ್ಗೆ ಮನವಿ ಮಾಡಿದರು.
ಈ ವೇಳೆ ನನ್ನದೇನು ಅಭ್ಯಂತರವಿಲ್ಲ ನೀವಿಬ್ಬರೂ ಒಪ್ಪಿಕೊಂಡರೆ ಒಂದೇ ನಿಮಿಷದಲ್ಲಿ ಮುಗಿಸುತ್ತೇನೆ ಎಂದು ಸ್ಪೀಕರ್ ಹೇಳಿದ್ರು. ಆದರೆ ಸಿಎಂ ಚರ್ಚೆಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ರು. ಇದಕ್ಕೆ ಯಡಿಯೂರಪ್ಪಮವರು ತುಂಬಾ ಆತುರದಲ್ಲಿದ್ದಾರೆ. ನಾವು ಯಾವ ಕಾರಣಕ್ಕಾಗಿ ವಿಶ್ವಾತ ಮತ ಮಂಡನೆ ಮಾಡಬೇಕಾಯ್ತು. ಇವತ್ತೇ ಮತಕ್ಕೆ ಹಾಕಿ ಅಂದ್ರೆ ಹೇಗೆ. ರಾಜ್ಯದ ಜನರಿಗೆ ಎಲ್ಲ ಮನವರಿಕೆಯಾಗಬೇಕು ಇವತ್ತಿನ ಬೆಳವಣಿಗೆ ಬಗ್ಗೆ ಜನರ ಮುಂದೆ ಇಡಬೇಕು. ಕಳೆದ ಏಳೆಂಟು ದಿನಗಳ ಘಟನೆ ನೋಡಿದ್ದೇವೆ ಎಂದು ಸಿಎಂ ಹೇಳಿದ್ದಾರೆ.
ಶಾಸಕರಿಗೆ ಸ್ಪೀಕರ್ ಮೇಲೆ ನಂಬಿಕೆಯಿಲ್ಲ ಹೀಗಾಗಿ ಸುಪ್ರೀಂಕೋರ್ಟ್ಗೆ ಹೋಗಿದ್ದಾರೆ. ಸುಪ್ರೀಂಕೋರ್ಟ್ ಮುಂದೆ ಬೇರೆ ತಿಳಿಸಿದ್ದಾರೆ. ಕೆಲವರಿಗೆ ಮಾನಮರ್ಯಾದೆ ಇಲ್ಲ. ನಮಗೆ ಮಾನಮರ್ಯಾದೆ ಇದೆ. ಇಲ್ಲಿರುವ ನಮ್ಮ ಶಾಸಕರಿಗೂ ಮಾನ ಮರ್ಯಾದೆಯಿದೆ. ಸುಪ್ರೀಂಕೋರ್ಟ್ ಮುಂದೆ ಏನೆಲ್ಲಾ ವಾದ ಮಾಡಿದ್ದಾರೆ. ವಾದದ ಹಿಂದೆ ಯಾರುಯಾರಿದ್ದಾರೆ. ಭದ್ರವಾದ ಸರ್ಕಾರ ಅಸ್ಥಿರಗೊಳಿಸುವ ಕೆಲಸ ನಡೆದಿದೆ. ಜನಸಾಮಾನ್ಯರಿಗೂ ಅಸಹ್ಯ ಉಂಟಾಗಿದೆ. ಈ ಎಲ್ಲದರ ಬಗ್ಗೆ ಜನರಿಗೆ ನಾವು ತಿಳಿಸಬೇಕಿದೆ ಎಂದು ಸಿಎಂ ಚರ್ಚೆಗೆ ಅವಕಾಶ ಕೇಳಿದ್ರು.
ಆಗ ಪ್ರತಿಪಕ್ಷದ ನಾಯಕ ಬಿ.ಎಸ್ .ಯಡಿಯೂರಪ್ಪನವರು ಬಹುಮತ ಸಾಬೀತುಪಡಿಸಲು ಪಟ್ಟು ಹಿಡಿದರು. ಈ ವೇಳೆ ಸ್ಪೀಕರ್ ರಮೇಶ್ ಕುಮಾರ್ ಮಧ್ಯೆ ಪ್ರವೇಶಿಸಿ, ಈ ಸಮಸ್ಯೆ ಸುಪ್ರೀಂ ಕೋರ್ಟ್ಗೂ ಹೋಗಿದೆ. ಚರ್ಚೆ ಮಾಡಲಿ ಎಂದರು. ಈ ವೇಳೆ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷದ ಸದಸ್ಯರ ಸಂಖ್ಯಾಬಲವನ್ನು ನಾಯಕರು ಎಣಿಸುತ್ತಿರುವುದು ಕಂಡು ಬಂತು. ಬಿಜೆಪಿ 105 ಹಾಗೂ ಪಕ್ಷೇತರರಿಬ್ಬರು ಸೇರಿ 107 ಮಂದಿ ಇದ್ದರೆ, ಆಡಳಿತ ಪಕ್ಷ ಮೈತ್ರಿ ಸರ್ಕಾರದಿಂದ 99 ಮಂದಿ ಶಾಸಕರು ಇರುವುದು ಕಂಡುಬಂದಿದೆ.
ವಿಧಾನ ಸಬೆಯಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಮತ್ತು ವಿಪ್ ಬಗ್ಗೆ ಪ್ರಸ್ತಾಪವಾಯಿತು. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ವಿಪ್ ನೀಡುವ ಅಧಿಕಾರ ನನಗಿದೆ. ವಿಪ್ ನೀಡುವುದು, ವಿಪ್ ಪಾಲಿಸುವುದು ನಮ್ಮ ಪಕ್ಷದ ಅಡಿಯಲ್ಲಿ ಬರುತ್ತೆ. ನಮ್ಮ ಅಧಿಕಾರಕ್ಕೆ ಧಕ್ಕೆ ಬರುವ ರೀತಿಯಲ್ಲಿ ಸುಪ್ರೀಂ ಕೋರ್ಟ್ ಆದೇಶ ಬಂದಿದೆ. ಇವತ್ತು ಪಕ್ಷಾಂತರ ರಾಜಕಾರಣ ದೇಶದ ರಾಜಕೀಯ ವ್ಯವಸ್ಥೆ ಕಲುಷಿತಗೊಂಡಿದೆ. ಎಂದು ಸಿದ್ದರಾಮಯ್ಯ ಹೇಳಿದ್ರು. ಸಿದ್ದರಾಮಯ್ಯ ಕ್ರಿಯಾಲೋಪಕ್ಕೆ ಅವಕಾಶ ಮಾಡಿಕೊಡಬೇಕು ಎಂದರು. ಇದಕ್ಕೆ ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ ಆಕ್ಷೇಪ ವ್ಯಕ್ತಪಡಿಸಿದ್ರು.
ಪಕ್ಷಾಂತರ ಶಾಸಕರನ್ನು ಅನರ್ಹಗೊಳಿಸಿದ್ದ ಅಂದಿನ ಸಭಾಧ್ಯಕ್ಷ ಬೋಪಯ್ಯಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿತ್ತು. ಈಗ ಯಾವ ನೈತಿಕತೆ ಇಟ್ಟು ಮಾತನಾಡುತ್ತೀರಿ ಎಂದು ಸಚಿವ ಡಿ.ಕೆ.ಶಿವಕುಮಾರ್ ಛೇಡಿಸಿದ್ರು. ಇದಕ್ಕೆ ದನಿಗೂಡಿಸಿ ಸಚಿವ ವೆಂಕಟರಮಪ್ಪ, ನನ್ನನ್ನೂ ಅನರ್ಹ ಮಾಡಿದ್ದೀರಿ. ಈಗ ಹೇಗೆ ಮಾತನಾಡುತ್ತೀರಿ ಎಂದು ಕುಟುಕಿದರು. ಈ ವೇಳೆ ಸದನದಲ್ಲಿ ಕೆಲಕಾಲ ಗೊಂದಲ ಸೃಷ್ಟಿಯಾಯಿತು.