ಬೆಂಗಳೂರು: ರಾಜ್ಯದಲ್ಲಿ ಬರ ಅಧ್ಯಯನಕ್ಕಾಗಿ ಬಿಜೆಪಿ ಮಾದರಿಯಲ್ಲಿಯೇ ತಂಡ ರಚಿಸಿಕೊಂಡು ಜೆಡಿಎಸ್ ಸಹ ಅಧ್ಯಯನ ನಡೆಸಲು ತೀರ್ಮಾನಿಸಿದ್ದು, ಈ ಸಂಬಂಧ ಇಂದು ಸಭೆ ನಡೆಸಲಿದೆ. ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾಜಿ ಸಿಎಂ, ಪಕ್ಷದ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಇಂದು ಜಿಲ್ಲಾವಾರು, ವಿಭಾಗವಾರು ಸಭೆ ನಡೆಯಲಿದೆ.
ರಾಜ್ಯದಲ್ಲಿನ ಬರ ಅಧ್ಯಯನಕ್ಕೆ ಬಿಜೆಪಿ ನಿರ್ಧರಿಸಿ ತಂಡ ರಚಿಸಿದೆ. ಈ ಬೆನ್ನಲ್ಲೇ ಜೆಡಿಎಸ್ ಸಹ ಬರ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯ ಖಂಡಿಸಿ ಹೋರಾಟ ರೂಪಿಸುವ ಕುರಿತು ಇಂದು ಮಹತ್ವದ ಸಭೆ ಕರೆದಿದೆ.
ಮಳೆ ಬೆಳೆ ಸ್ಥಿತಿಗತಿ, ಕುಡಿಯುವ ನೀರಿನ ಸಮಸ್ಯೆ, ಬೆಳೆ ನಷ್ಟ ಪರಿಹಾರ ನೀಡುವಲ್ಲಿ ಸರ್ಕಾರದ ನಿರ್ಲಕ್ಷ್ಯ ಕುರಿತು ದಳ ನಾಯಕರು ಚರ್ಚಿಸಲಿದ್ದಾರೆ. ಜೊತೆಗೆ ಬರ ಅಧ್ಯಯನಕ್ಕಾಗಿ ತಂಡ ರಚನೆ ಮಾಡಿ ಸರ್ಕಾರದ ವಿರುದ್ಧ ಯಾವ ರೀತಿ ಹೋರಾಟ ರೂಪಿಸಬಹುದು ಎಂಬುದರ ಬಗ್ಗೆಯೂ ಚರ್ಚೆ ನಡೆಯಲಿದೆ. ಕೋರ್ ಕಮಿಟಿ ಅಧ್ಯಕ್ಷ ಜಿ ಟಿ ದೇವೇಗೌಡ, ಶಾಸಕರು ಮಾಜಿ ಸಚಿವರು, ಮಾಜಿ ಶಾಸಕರು, ಜಿಲ್ಲಾಧ್ಯಕ್ಷರು ಸೇರಿದಂತೆ ವಿವಿಧ ಘಟಕಗಳ ಮುಖಂಡರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಅವರು ಅನಾರೋಗ್ಯದ ನಡುವೆಯೂ ಪಕ್ಷವನ್ನು ಸಂಘಟಿಸುವಲ್ಲಿ ನಿರತರಾಗಿದ್ದಾರೆ. ಹೀಗಾಗಿ ಸಭೆಯಲ್ಲಿ ಪಾಲ್ಗೊಂಡು ಹಲವು ಸಲಹೆ-ಸೂಚನೆಗಳನ್ನು ನೀಡುವ ಸಾಧ್ಯತೆಯೂ ಇದೆ ಎಂದು ಪಕ್ಷದ ಮೂಲಗಳು ಹೇಳಿವೆ.
ಶಾಸಕರು, ಮಾಜಿ ಶಾಸಕರು ಸೇರಿದಂತೆ ಇತರೆ ಪ್ರಮುಖ ಮುಖಂಡರ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗುವುದು. ಪ್ರತಿಯೊಬ್ಬರಿಗೂ ಇಂತಿಷ್ಟು ತಾಲೂಕುಗಳ ಹೊಣೆಯನ್ನು ವಹಿಸಿ ಬರ ಅಧ್ಯಯನ ನಡೆಸಲಾಗುವುದು. ತಂಡಗಳು ಬರ ಅಧ್ಯಯನ ನಡೆಸಿ ಕುಮಾರಸ್ವಾಮಿ ಅವರಿಗೆ ವರದಿ ಸಲ್ಲಿಸಲಿವೆ. ನಂತರ ಕುಮಾರಸ್ವಾಮಿ ಆ ವರದಿಯನ್ನು ಜನತೆಯ ಮುಂದಿಡಲಿದ್ದಾರೆ. ಈ ವೇಳೆ ಸರ್ಕಾರದ ನ್ಯೂನತೆಗಳ ಕುರಿತು ಮಾಹಿತಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಜ್ಯದಲ್ಲಿ ಬರ ಎದುರಾಗಿದ್ದು, ರಾಜ್ಯ ಸರ್ಕಾರ ಅದನ್ನು ನಿಭಾಯಿಸಲು ವಿಫಲವಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಆದರೆ, ಈಗಾಗಲೇ ಬರಪೀಡಿತ ತಾಲೂಕುಗಳನ್ನು ಘೋಷಿಸಿ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದೇವೆ ಎಂದು ಕಾಂಗ್ರೆಸ್ ಸರ್ಕಾರ ಸಮರ್ಥಿಸಿಕೊಂಡಿದೆ.
ಬಿಜೆಪಿಯಿಂದ ಬರ ಅಧ್ಯಯನ: ಪ್ರಮುಖ ನಾಯಕರ ನೇತೃತ್ವದಲ್ಲಿ ಬಿಜೆಪಿಯು ಬರ ಅಧ್ಯಯನಕ್ಕಾಗಿ ಈಗಾಗಲೇ ತಂಡಗಳು ರಚಿಸಿದೆ. ನಿನ್ನೆಯಿಂದಲೇ ಬರ ಅಧ್ಯಯನ ಆರಂಭಿಸಿದೆ. ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಆರ್ ಅಶೋಕ್, ಈಶ್ವರಪ್ಪ ಸೇರಿ ಹಲವರ ನೇತೃತ್ವದ ತಂಡಗಳು ಕ್ಷೇತ್ರಗಳಿಗೆ ತೆರಳಿ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಲಿವೆ.
ಇದನ್ನೂ ಓದಿ: ಮುಂದಿನ ವರ್ಷ ನಡೆದುಕೊಂಡು ಬರುವಷ್ಟು ಶಕ್ತಿ ಕೊಡು ತಾಯಿ.. ಹಾಸನಾಂಬೆಗೆ ದೇವೇಗೌಡರ ಪ್ರಾರ್ಥನೆ