ಬೆಂಗಳೂರು: ಕೃಷ್ಣೆಯ ಕಡೆಗೆ, ಕಾಂಗ್ರೆಸ್ ನಡಿಗೆ ಎಂದು ಹೇಳಿ ಉತ್ತರ ಕರ್ನಾಟಕದ ಜನರಿಗೆ ಟೋಪಿ ಹಾಕಿದ ಕಾಂಗ್ರೆಸ್ ನಾಯಕರು, ಈಗ ಮೇಕೆದಾಟು ಪಾದಯಾತ್ರೆ ಹೆಸರಿನಲ್ಲಿ ಈ ಭಾಗದ ಜನರಿಗೂ ಮಕ್ಮಲ್ ಟೋಪಿ ಹಾಕಲು ಹೊರಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಟೀಕಾಪ್ರಹಾರ ನಡೆಸಿದರು.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಪಾದಯಾತ್ರೆಯಲ್ಲಿ ಭಾಗವಹಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ.ಶಿವಕುಮಾರ್ ನೀಡಿರುವ ಆಹ್ವಾನದ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಅವರು, ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ನಾವು ಕೈಗೊಂಡಿರುವ ಹೋರಾಟ ಪಕ್ಷಾತೀತ. ಇದನ್ನು ಟೀಕೆ ಮಾಡುತ್ತಿರುವ ಹೆಚ್.ಡಿ.ಕುಮಾರಸ್ವಾಮಿ ಅವರೂ ಪಾದಯಾತ್ರೆಯಲ್ಲಿ ಭಾಗವಹಿಸಬಹುದು ಎಂದಿದ್ದಾರೆ ಕೆಪಿಸಿಸಿ ಅಧ್ಯಕ್ಷರು. ಅವರು ನನ್ನನ್ನೂ ಸೇರಿಸಿ 83 ತಾಲೂಕುಗಳ ಜನರಿಗೆ ‘ಮೇಕೆದಾಟು ಮಕ್ಮಲ್ ಟೋಪಿʼ ಹಾಕಲು ಹೊರಟಿದ್ದಾರೆ ಎಂದರು.
ನೀರಾವರಿ ವಿಷಯದಲ್ಲಿ ರಾಜ್ಯಕ್ಕೆ ಹೆಚ್.ಡಿ.ದೇವೇಗೌಡರು ಕೊಟ್ಟ ಕಾಣಿಕೆ ಅಗಣಿತ. ತಮ್ಮ ಜೀವಿತಾವಧಿಯನ್ನೇ ಈ ನೆಲಕ್ಕೆ ನೀರು ಹರಿಸಲು ಮುಡಿಪಿಟ್ಟ ಭಗೀರಥರು ಅವರು. ಮೇಕೆದಾಟು ಯೋಜನೆಯ ಮೂಲ ರೂವಾರಿಯೇ ಅವರು. ಅವರನ್ನೇ ಮರೆತ ಕಾಂಗ್ರೆಸ್ ನಾಯಕರು ‘ಸತ್ಯಕ್ಕೆ ಸಮಾಧಿ’ ಕಟ್ಟುತ್ತಿದ್ದಾರೆ ಎಂದಿದ್ದಾರೆ.