ಬೆಂಗಳೂರು : ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಈವರೆಗೆ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯನ್ನಾಗಿ ಪ್ರಭಾಕರ ರೆಡ್ಡಿಯನ್ನು ಘೋಷಿಸಿದ್ದರು. ಆದರೆ, ಕಾಂಗ್ರೆಸ್ನಲ್ಲಿ ಬಂಡಾಯ ಅಭ್ಯರ್ಥಿಯೆಂದೇ ಬಿಂಬಿತರಾಗಿದ್ದ ರಾಜಗೋಪಾಲರೆಡ್ಡಿಗೆ ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ಇದೀಗ ಜೆಡಿಎಸ್ ಪಕ್ಷ ಸೇರ್ಪಡೆಗೊಂಡಿದ್ದು, ಖುದ್ದು ಹೆಚ್ಡಿಕೆ ಅವರೇ ರಾಜಗೋಪಾಲರೆಡ್ಡಿ ಅವರ ಹುಲಿಮಂಗಲದ ಮನೆಗೆ ಭೇಟಿ ನೀಡಿ ಇಂದು ನಾಮಪತ್ರ ಸಲ್ಲಿಸುವಂತೆ ತಿಳಿಸಿದ್ದಾರೆ. ಜೊತೆಗೆ ಪತ್ನಿ ಸುಷ್ಮಾ ಮತ್ತು ಮಗಳನ್ನು ಮಹಿಳಾ ಸಂಘಟಕಿಯಾಗಿ ಮುಂದಿನ ದಿನಗಳಲ್ಲಿ ಆಯ್ಕೆ ಮಾಡುವುದಾಗಿ ಘೋಷಿಸಿದ್ದಾರೆ.
ಈ ಕುರಿತು ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಹೆಚ್ಡಿಕೆ, ರಾಜಗೋಪಾಲರೆಡ್ಡಿ ಅವರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಬೇಕೆಂದು ಹಲವಾರು ವರ್ಷಗಳಿಂದ ಅವರ ಸಂಪೂರ್ಣ ಕುಟುಂಬ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಸಮಯವನ್ನು ಮೀಸಲಿಟ್ಟು ಶಕ್ತಿಯನ್ನು ತುಂಬಿದ್ರು. ಅಭ್ಯರ್ಥಿಯನ್ನು ನೇಮಕ ಮಾಡುವಾಗ ಅವರನ್ನು ಕಡೆಗಣಿಸಿದ್ದು, ಅವರ ಜೊತೆ ಮುಕ್ತವಾಗಿ ಚರ್ಚೆ ಮಾಡದೇ ತೀರ್ಮಾನ ಮಾಡಿರುವುದು ಅವರ ಮನಸ್ಸಿನ ಮೇಲೆ ಪರಿಣಾಮ ಬೀರಿದೆ. ಹೀಗಾಗಿ, ಇದೆಲ್ಲವನ್ನು ಚರ್ಚೆ ಮಾಡಿ ನಾನೇ ಖುದ್ದು ಅವರಿಗೆ ದೂರವಾಣಿ ಕರೆ ಮುಖಾಂತರ ಮಾತನಾಡಿದೆ. 2 ದಿನಗಳ ಸಮಯ ತೆಗೆದುಕೊಂಡಿದ್ರು. ಬುಧವಾರ ಅವರು ನಾಮಪತ್ರ ಸಲ್ಲಿಸಲಿದ್ದಾರೆ. ಈ ಹಿಂದೆ ಪ್ರಭಾಕರ ರೆಡ್ಡಿ ಕ್ಷೇತ್ರದಲ್ಲಿ ಹೆಚ್ಚು ಉತ್ಸಾಹದಿಂದ ಕಾಣಿಸಿಕೊಳ್ಳದೇ ಇದ್ದಿದ್ದರಿಂದ ಬದಲಾದ ಸನ್ನಿವೇಶದಲ್ಲಿ ರಾಜಗೋಪಾಲರೆಡ್ಡಿ ಹೆಸರನ್ನು ಘೋಷಿಸಲಾಗಿದೆ ಎಂದರು.
ಇದನ್ನೂ ಓದಿ : ಮಂಡ್ಯದಲ್ಲಿ ಸುಮಲತಾ ಸ್ಪರ್ಧಿಸಲಿ, ರೈತ ಮಹಿಳೆಯನ್ನು ನಿಲ್ಲಿಸಿ ಗೆಲ್ಲಿಸಿಕೊಳ್ತೀನಿ: ಹೆಚ್ಡಿಕೆ
ಜೆಡಿಎಸ್ ಮತ್ತು ರಾಜಗೋಪಾಲರೆಡ್ಡಿ ಕುಟುಂಬ ಒಟ್ಟಾಗಿ ಸೇರಿದಾಗ ಬೆಂಗಳೂರು ದಕ್ಷಿಣ ಕ್ಷೇತ್ರ ಅಷ್ಟೇ ಅಲ್ಲ, ಬೊಮ್ಮನಹಳ್ಳಿ ಕ್ಷೇತ್ರಕ್ಕೂ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಸಹಾಯಕ. ಈ ಬಾರಿ ಬಿಜೆಪಿಯನ್ನು ಮಣಿಸಲು ಎಲ್ಲರೂ ಒಂದಾಗಿ ಕೆಲಸ ಮಾಡಬೇಕು ಎಂದು ನಿರ್ಧಾರ ಮಾಡಿದ್ದೇವೆ. ಆದ್ದರಿಂದ ಈ ಹೊಸ ಬದಲಾವಣೆಯನ್ನು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲೂ ನಾವು ಕಾಣಬಹುದು ಎಂಬ ನಿರೀಕ್ಷೆ ಇಟ್ಟಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ : 2 ಬಾರಿ ಸಮ್ಮಿಶ್ರ ಸರ್ಕಾರ ಮಾಡಿ ಸಾಕಷ್ಟು ಕಹಿ ಅನುಭವಿಸಿದ್ದೇವೆ, ಈ ಸಲ 123 ಸೀಟು ಬರುತ್ತೆ: ನಿಖಿಲ್ ಕುಮಾರಸ್ವಾಮಿ
ಬಳಿಕ, ಸಮಾಜದ ಮೀಸಲಾತಿ ಕುರಿತು ಬಿಜೆಪಿಗೆ ಎಳ್ಳಷ್ಟೂ ಜ್ಞಾನವಿಲ್ಲ. ಹೀಗಾಗಿ, ಕೆಲವೇ ದಿನಗಳಲ್ಲಿ ಅದನ್ನು ಜಾರಿಗೊಳಿಸದೆ ನಗೆ ಪಾಟಲಿಗೀಡಾಗುತ್ತಾರೆ ಎಂದು ಲೇವಡಿ ಮಾಡಿದರು. ಶಿಕಾರಿಪುರದಲ್ಲಿ ಕಾಂಗ್ರೆಸ್ ಸಮರ್ಥ ಅಭ್ಯರ್ಥಿಯನ್ನು ಹಾಕಿಲ್ಲ. ಒಳ ಒಪ್ಪಂದದ ರಾಜಕಾರಣಕ್ಕೆ ಸಾಕ್ಷಿ ನೀಡಲು ಎರಡು ಪಕ್ಷಗಳು ಹೊರಟಿವೆ. ಕುಟುಂಬ ರಾಜಕಾರಣದ ಕುರಿತು ಮಾತನಾಡಲು ಬಿಜೆಪಿಗೆ ನೈತಿಕ ಹಕ್ಕಿಲ್ಲ. ಈ ಬಾರಿ 38 ಟಿಕೆಟ್ಗಳನ್ನ ಬಿಜೆಪಿ ತಮ್ಮ ನಾಯಕರ ಕುಟುಂಬಗಳಿಗೆ ನೀಡಿದೆ ಎಂದು ಹೆಚ್ಡಿಕೆ ತಿರುಗೇಟು ನೀಡಿದರು.
ಇದನ್ನೂ ಓದಿ : ಈ ಬಾರಿ ಜೆಡಿಎಸ್ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ: ಹೆಚ್ಡಿಕೆ ವಿಶ್ವಾಸ