ಬೆಂಗಳೂರು : ಜೆಡಿಎಸ್ ಎಂದರೆ ಕೇವಲ ದೇವೇಗೌಡರ ಕುಟುಂಬ ಮತ್ತು ಒಕ್ಕಲಿಗರ ಪಕ್ಷ ಮಾತ್ರವಲ್ಲ. ಇದೆಲ್ಲವೂ ಅಪಪ್ರಚಾರ. ನಾನು ಮಂತ್ರಿಮಂಡಲ ಮಾಡಿದಾಗ ಒಕ್ಕಲಿಗರು ಇದ್ದದ್ದು ಕೇವಲ ನಾಲ್ವರು ಅಷ್ಟೇ.. ಓಬಿಸಿ, ಎಸ್ಸಿ-ಎಸ್ಟಿಗೆ ಹೆಚ್ಚು ಸ್ಥಾನ ಕೊಟ್ಟಿದ್ದೆ. ಎಲ್ಲ ವರ್ಗಗಳನ್ನು ಗುರುತಿಸಿ ನಾನು ಮಂತ್ರಿಮಂಡಲ ರಚನೆ ಮಾಡಿದ್ದೆ ಎಂದು ಜೆಡಿಎಸ್ ವರಿಷ್ಠ ಮತ್ತು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹೇಳಿದರು.
ನಗರದ ಜೆ.ಪಿ.ಭವನದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಸಿ.ಎಂ.ಇಬ್ರಾಹಿಂ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಟುಂಬ ಮತ್ತು ಒಂದೇ ವರ್ಗದ ಪಕ್ಷವಾಗಿದ್ದರೆ ಸಿ.ಎಂ. ಇಬ್ರಾಹಿಂ ಅವರನ್ನು ಯಾಕೆ ಅಧ್ಯಕ್ಷರಾಗಿ ಮಾಡಿದ್ದೇವೆ. ಮುಸ್ಲಿಂಮರಿಗೆ ಮೀಸಲಾತಿ ತಂದಿದ್ದು ನಾನು. ಜಫ್ರುಲ್ಲಾ ಖಾನ್ 10 ವರ್ಷಗಳ ಹಿಂದೆ ನನ್ನ ಜೊತೆ ಬಂದರು.
ನಬಿ ಅವರು ನನ್ನ ಜೊತೆ ಬಂದರು. ಫಾರೂಕ್ ನಮ್ಮ ಜೊತೆ ಬಂದರು. ಫಾರೂಕ್ ಅವರನ್ನು ರಾಜ್ಯಸಭೆ ಮಾಡಲು ಒದ್ದಾಡಿದೆವು. ಆದರೆ, ನಮ್ಮವರೇ ಅವರನ್ನು ಸೋಲಿಸಿದರು. ಆದರೂ ಅವರು ಕೆಲಸ ಮಾಡುತ್ತಿದ್ದಾರೆ ಎಂದರು. ಬಡ ಸಮುದಾಯಕ್ಕೆ ನನ್ನ ಅವಧಿಯಲ್ಲಿ ಸಹಾಯ ಮಾಡಿದೆ.
ನಾವು ಮಾಡಿದ ಕೆಲಸಕ್ಕೆ ಅವತ್ತು 16 ಸಂಸದ ಸ್ಥಾನಗಳನ್ನು ಗೆದ್ದೆವು. ನಾನು ಪ್ರಧಾನಿಮಂತ್ರಿ ಆದ ಕೂಡಲೇ ಫಾರೂಕ್ ಅವರಿಗೆ ಕೇಂದ್ರದ ಮಂತ್ರಿ ಮಾಡಿದೆ. ಇನ್ಮುಂದೆ ಇದು ಒಕ್ಕಲಿಗರ ಪಕ್ಷ ಅಂತಾ ಹೇಳಬೇಡಿ. ಅಂತಹ ಮಾತುಗಳನ್ನ ಅಲ್ಲಗಳೆಯುವ ಕೆಲಸ ಇಬ್ರಾಹಿಂ ಮಾಡುತ್ತಾರೆ. ಪಕ್ಷಕ್ಕೆ ಶಕ್ತಿ ತುಂಬುತ್ತಾರೆ ಎಂಬ ವಿಶ್ವಾಸ ಇದೆ ಎಂದರು.
ನಾನು ಕೂಡ ಸುಮ್ಮನೆ ಕುಳಿತುಕೊಳ್ಳೊಲ್ಲ. ಪಕ್ಷದ ಪರವಾಗಿ ದುಡಿಮೆ ಮಾಡುವೆ. ಮುಂದಿನ ತಿಂಗಳು ಬೆಂಗಳೂರಿನಲ್ಲಿ 2.5 ಲಕ್ಷ ಜನ ಸೇರಿಸಿ ಸಮಾವೇಶ ಮಾಡುತ್ತೇವೆ. ಎಲ್ಲರೂ ಒಗ್ಗಟ್ಟಾಗಿ ಪ್ರತಿ ಜಿಲ್ಲೆಯ ಪ್ರವಾಸ ಮಾಡಬೇಕು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ನ ಮಿಷನ್ 123 ಅನುಷ್ಠಾನಕ್ಕೆ ಬರುತ್ತದೆ. ಭಗವಂತನ ಅನುಗ್ರಹದಿಂದ ಈ ಪಕ್ಷ ಉಳಿಯುತ್ತದೆ. ಈ ಪಕ್ಷವನ್ನು ಯಾರಿಂದಲೂ ತುಳಿಯಲು ಸಾಧ್ಯವಿಲ್ಲ ಎಂದು ದೇವೇಗೌಡರು ಹೇಳಿದರು.
ಎಂಟನೇ ಅದ್ಭುತ : ಕಾಂಗ್ರೆಸ್ಗೆ ಹೋರಾಟ ಮಾಡಲು ಯಾವುದೇ ವಿಷಯಗಳಿಲ್ಲ. ನನ್ನ ಬಗ್ಗೆ ಯಾರಾದರೂ ಭ್ರಷ್ಟಾಚಾರದ ಸಾಕ್ಷ್ಯ ತೋರಿಸಿದರೆ ರಾಜಕೀಯ ನಿವೃತ್ತಿ ಅಂತಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದ್ದಾರೆ. ಇದು ಎಂಟನೇ ಅದ್ಭುತವೇ ಸರಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವ್ಯಂಗ್ಯ ವಾಡಿದರು.
ಭ್ರಷ್ಟಾಚಾರದ ವಿರುದ್ಧ ಹೋರಾಡಲು ಕಾಂಗ್ರೆಸ್ಗೆ ಯಾವ ನೈತಿಕತೆ ಇದೆ. ನಮ್ಮ ನಿಲುವುಗಳ ಬಗ್ಗೆ ಕೆಲವರು ಅನಗತ್ಯ ಚರ್ಚೆ ಮಾಡುತ್ತಿದ್ದಾರೆ. ಇಬ್ರಾಹಿಂರನ್ನ ಪಕ್ಷಕ್ಕೆ ಕರೆ ತಂದಿರುವುದು ಒಂದು ವರ್ಗದ ಓಲೈಕೆಯ ಕಸರತ್ತು ಅಷ್ಟೇ ಅಂತಾ ಆರೋಪಿಸುತ್ತಾರೆ. ಜನರ ಜೀವನಕ್ಕಾಗಿ ನಾವು ಹೋರಾಟ ನಡೆಸುತ್ತಿದ್ದೇವೆ. ನಮ್ಮ ಹೋರಾಟ ಏನಿದ್ದರೂ 123 ಗುರಿ ಮುಟ್ಟುವುದು. ಪಕ್ಷದ ನಾಯಕರು ಚಳಿ ಬಿಟ್ಟು ಜನರ ಬಳಿ ಕೆಲಸ ಮಾಡಬೇಕಿದೆ ಎಂದು ಕರೆ ನೀಡಿದರು.
ಇದನ್ನೂ ಓದಿ: ಎರಡೂ ರಾಷ್ಟ್ರೀಯ ಪಕ್ಷಗಳು 'ಬ್ರಿಟಿಷ್ ನೀತಿ'ಯನ್ನು ಅನುಸರಿಸುತ್ತಿವೆ: ಮಾಜಿ ಸಿಎಂ ಹೆಚ್ಡಿಕೆ