ಬೆಂಗಳೂರು : ಜಾತ್ಯತೀತತೆ ಬಗ್ಗೆ ಮಾತನಾಡುವುದಕ್ಕೆ ಕಾಂಗ್ರೆಸ್ಗೆ ಯಾವ ನೈತಿಕ ಹಕ್ಕಿದೆ. ಈ ದೇಶದಲ್ಲಿ ಯಾವುದಾದರೂ ರಾಜಕೀಯ ಪಕ್ಷ ಮಡಿವಂತಿಕೆಯಿಂದ, ನೇರ ಅಥವಾ ಪರೋಕ್ಷವಾಗಿ ಬಿಜೆಪಿ ಜೊತೆ ಸಂಬಂಧವೇ ಇಲ್ಲದೇ ನಾವು ಸ್ವಚ್ಛವಾಗಿ ಇದ್ದೇವೆಂದು ಹೇಳಲಿ. ಯಾವುದಾದರೂ ಒಂದು ಪಕ್ಷ ಇದ್ದರೆ, ನೀವು ಯಾರು ಬೇಕಾದರೂ ನಮ್ಮನ್ನು ಪ್ರಶ್ನೆ ಮಾಡಬಹುದು ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಟೀಕಾಕಾರನ್ನು ಪ್ರಶ್ನಿಸಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸೋಲಿಸಲು ಬಿಜೆಪಿಯ ಜೊತೆಗೆ ಎಡಪಂಥೀಯ ಕೆಲ ಮುಖಂಡರು ಕೆಲಸ ಮಾಡಿರುವುದು ಬಹಿರಂಗವಾಗಿಯೆ ಗೊತ್ತಿದೆ. ಎಲ್ಲಿ ಉಳಿದಿದೆ ನಿಮ್ಮ ಪಾವಿತ್ರತೆ ಎಂದು ಕಾಂಗ್ರೆಸ್ನವರಿಗೆ ತಿರುಗೇಟು ನೀಡಿದರು. ಕುಮಾರಸ್ವಾಮಿ ಅವರು ಬಿಜೆಪಿ ರಾಷ್ಟ್ರೀಯ ನಾಯಕರನ್ನು ಸಂಪರ್ಕ ಮಾಡುವ ಮುನ್ನವೇ ನಾನು ಮೊದಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆ ಚರ್ಚೆ ಮಾಡಿದ್ದೇನೆ. ಕದ್ದುಮುಚ್ಚಿ ಯಾವುದನ್ನೂ ಮಾತನಾಡಿಲ್ಲ. ಅವರ ಬಳಿ ಮಾತನಾಡುವಾಗ ಕರ್ನಾಟಕದ ಸ್ಥಿತಿಗತಿ ಏನಿದೆ ಎಂಬುದನ್ನು ತಿಳಿಸಿದ್ದೇನೆ. ಅಮಿತ್ ಶಾ ಜೊತೆ ಎಲ್ಲಾ ವಿಚಾರ ಮಾತನಾಡಿದ್ದೇನೆ. ನಾವು ಯಾರಿಗೂ ಹೆದರುವ ಅವಶ್ಯಕತೆ ಇಲ್ಲ ಎಂದರು.
ಕಾಂಗ್ರೆಸ್ ವಿರುದ್ಧ ದೇವೇಗೌಡ ವಾಗ್ದಾಳಿ: ಕಳೆದ 60 ವರ್ಷಗಳ ನನ್ನ ಹೋರಾಟದಲ್ಲಿ ಯಾವುದೇ ಸಮುದಾಯಕ್ಕೂ ಈ ಪಕ್ಷದಿಂದ ಅನ್ಯಾಯವಾಗಲು ಬಿಟ್ಟಿಲ್ಲ. ಯಾವುದೇ ಸಮುದಾಯ ಇರಲಿ. ಇವತ್ತು ಯಾಕೆ ಹೀಗಾಯ್ತು, ಇದಕ್ಕೆ ಯಾರು ಜವಾಬ್ದಾರರು ಯಾರು? ಕರ್ನಾಟಕದಲ್ಲಿ ಕುಮಾರಸ್ವಾಮಿಯವರ ಸರ್ಕಾರ ತೆಗೆದಿದ್ದು ಯಾರು? 17 ಜನ ಶಾಸಕರನ್ನು ಮುಂಬೈಗೆ ಕಳಿಸಿಕೊಟ್ಟಿದ್ದು ಯಾರು? ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲಿಕ್ಕೆ ಅವಕಾಶ ಮಾಡಿಕೊಟ್ಟವರು ಯಾರು? ಇದರ ಬಗ್ಗೆ ಚರ್ಚೆ ಮಾಡೋಣ. ಇದಕ್ಕೆಲ್ಲ ಜವಾಬ್ದಾರಿ ಯಾರು? ಎಂದು ಪ್ರಶ್ನಿಸಿದರು.
ಆಗ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕೆಂದು ಅವರ ಮನೆ ಬಾಗಿಲಿಗೆ ಹೋಗಿಲ್ಲ. ನಮ್ಮ ಬಳಿ ಬಂದಿದ್ದು ಯಾರು, ಗುಲಾಬ್ ನಬಿ ಆಜಾದ್ ಹಾಗೂ ರಾಜಸ್ಥಾನ ಸಿಎಂ ನಮ್ಮ ಮನೆಗೆ ಬಂದು ನನ್ನನ್ನು ಒತ್ತಾಯ ಮಾಡಿದರು. ಆಗಲೂ ಸಹ ನಿಮ್ಮ ಸಹವಾಸ ಬೇಡ ಅಂತ ಹೇಳಿದೆ. ಆದರೂ, ಒತ್ತಾಯ ಮಾಡಿದರು. ಇವತ್ತು ಬಿಜೆಪಿ ಜೊತೆ ಯಾಕೆ ಸಂಬಂಧ ಬೆಳೆಸಿದ್ದೀರಿ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಫಾರೂಕ್ ಅಬ್ದುಲ್ಲಾ ಸರ್ಕಾರವನ್ನು ತೆಗೆದಿದ್ದು ಯಾರು, ಬಿಜೆಪಿನಾ, ಕಾಂಗ್ರೆಸ್ಸಾ? ನನ್ನ ಸರ್ಕಾರ 10 ತಿಂಗಳಿತ್ತು ಎಂಬುದರ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ. ನಾನು ಎಲ್ಲ ಶಾಸಕರ ಜೊತೆ ಚರ್ಚೆ ಮಾಡಿದ ಮೇಲೆ ಕುಮಾರಸ್ವಾಮಿ ಅವರಿಗೆ ಅನುಮತಿ ನೀಡಿದೆ. ಈ ಮೈತ್ರಿಯಿಂದ ಪಕ್ಷಕ್ಕೆ ಏನೂ ತೊಂದರೆ ಇಲ್ಲ, 19 ಮಂದಿ ಶಾಸಕರ ಜೊತೆಯೂ ಚರ್ಚೆ ಮಾಡಿದ್ದೇನೆ ಎಂದ ಹೆಚ್ಡಿಡಿ, ಇಂದು ನಾನು ಗ್ಯಾರಂಟಿಗಳ ಬಗ್ಗೆ ಮಾತನಾಡುವುದಿಲ್ಲ. ಅದರಿಂದ ಲಾಭದ ಬಗ್ಗೆಯೂ ಮಾತನಾಡುವುದಿಲ್ಲ ಎಂದರು.
ಕುಮಾರಸ್ವಾಮಿ ಅವರು ಯಾರ ಜೊತೆಗಾದರೂ ಹೋಗಿದ್ರಾ? 8 ಮಂದಿ ನೀವು ಆ ಕಡೆ ನಿಂತುಕೊಂಡು ಫಾರೂಕ್ ಅವರನ್ನ ಸೋಲಿಸಿದ್ರಲ್ಲ? ಅವರ ಹೈಕಮಾಂಡ್ ಇದ್ಯಾ? ಹೀಗೆ ಹತ್ತು ಹಲವಾರು ವಿಷಯ ಪ್ರಸ್ತಾಪಿಸಬಲ್ಲೆ, ಆದರೆ ಜೆಡಿಎಸ್ ಬಗ್ಗೆ ಮಾತನಾಡಬೇಡಿ. ಇದು ಅವಕಾಶವಾದಿತನ ಅಲ್ಲ. ಪಕ್ಷವನ್ನು ಉಳಿಸಲೇಬೇಕೆಂದು 40 ವರ್ಷದಿಂದ ನಡೆಸಿದ ಹೋರಾಟ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ ನಾಯಕ ಎ.ಕೆ. ಆಂಟೋನಿ ಪುತ್ರ ಬಿಜೆಪಿಗೆ ಹೋದರು, ಇದೇ ರೀತಿ ನಾನಾ ವಿಷಯಗಳಿವೆ. ನಾನು ಲಘುವಾಗಿ ಮಾತನಾಡುವುದಿಲ್ಲ. ಇದಕ್ಕೆಲ್ಲ ಮುಖ್ಯ ಕಾರಣ ಕಾಂಗ್ರೆಸ್ ಸ್ವಾರ್ಥ. ಯಾರ ವ್ಯಕ್ತಿತ್ವನ್ನೂ ಕುಂದಿಸಲು ಈ ದೇವೇಗೌಡ ಹೋಗಲ್ಲ. ಫಾರೂಕ್ ಅಬ್ದುಲ್ಲಾ ಏಕೆ ಹೋದ್ರು, ಸರ್ಕಾರ ತೆಗೆದವರು ಯಾರು? 10 ವರ್ಷ ಆದ ಮೇಲೆ ಲಂಡನ್ನಿಂದ ಕರೆಸಿ ಚುನಾವಣೆಯಲ್ಲಿ ಗೆಲ್ಲಿಸಿದ್ದು ಯಾರು? ಅವರನ್ನ ಮುಖ್ಯಮಂತ್ರಿ ಮಾಡಿದ್ದು ಯಾರು.. ಒಬ್ಬ ಸಾಮಾನ್ಯ ವ್ಯಕ್ತಿ ನಾನು ಎಂದರು.
ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಜೊತೆ ಸರ್ಕಾರ ಮಾಡಿದಾಗ ಮಂಗಳೂರಿನಲ್ಲಿ ಎರಡು ಮುಸ್ಲಿಮರ ಹೆಣ ಬಿತ್ತು. ಕುಮಾರಸ್ವಾಮಿ ಅವರು ಪ್ರವಾಸದಲ್ಲಿದ್ರು. ನಾನು ದೂರವಾಣಿ ಮೂಲಕ ಮಾತನಾಡಿ ಸ್ಥಳಕ್ಕೆ ಹೋಗುವಂತೆ ಹೇಳಿದೆ. ಕುಮಾರಸ್ವಾಮಿಯವರು ಮಂಗಳೂರಿಗೆ ಹೋಗಿ ಹಿಂದು- ಮುಸ್ಲಿಂ ಸಮುದಾಯದ ಮುಖಂಡರ ಸಭೆ ಮಾಡಿದರು. ಆರೋಪಿಗಳಿಗೆ ಶಿಕ್ಷೆ ಕೊಡಿಸಿದರು, ಆಗ ಕುಮಾರಸ್ವಾಮಿ ಸಿಎಂ, ಬಿಜೆಪಿಯವರು ಗೃಹ ಸಚಿವರು. ನಾವು ಅಲ್ಪಸಂಖ್ಯಾತ ಸಮುದಾಯಕ್ಕೆ ಎಲ್ಲೂ ಧಕ್ಕೆ ಆಗಲು ಬಿಡುವುದಿಲ್ಲ ಭರವಸೆ ನೀಡಿದರು.
ನಮ್ಮದು ಜಾತ್ಯತೀತ ಪಕ್ಷ: ಕಾಂಗ್ರೆಸ್ ಒಂದು ಕುಟುಂಬ ಅಧಿಕಾರ ವಹಿಸಲು ರಾಜಕೀಯ ಮಾಡಿದೆ, ದೇಶದ ಜನ ಮುರ್ಖರಾ? ಗುಲಾಂ ನಬಿ ಆಜಾದ್ ಪಕ್ಷದಿಂದ ಹೊರ ಬಂದರು. ಹಿಂದುತ್ವದ ಬಗ್ಗೆ ಕಾಂಗ್ರೆಸ್‌ನವರು ಮಾತನಾಡುತ್ತಾರೆ. ಕಮಲ್ ನಾಥ್ ಏನು ಮಾತಾಡಿದ್ರು. ನಾವು ನಿಮ್ಮ ಮನೆ ಬಾಗಿಲಿಗೆ ಬಂದಿರಲಿಲ್ಲ. ನಾವು ಫಾರೂಕ್ ಅವರನ್ನ ರಾಜ್ಯಸಭೆಗೆ ನಿಲ್ಲಿಸಿದ್ದೆವು. ಯಾರು ಅವರನ್ನು ಸೋಲಿಸಿದ್ದು? ದೊಡ್ಡ ನಾಯಕರು? ನಾನೀಗ ಅವರ ಹೆಸರು ತೆಗೆದುಕೊಳ್ಳಲ್ಲ, 8 ನಾಯಕರು, ಮಂಡ್ಯದ ದೊಡ್ಡ ನಾಯಕರು, ಅವರು ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದರು. ನಮ್ಮದು ಜಾತ್ಯತೀತ ಪಕ್ಷ. ನಾನು ಇಂತಹ ನೂರು ಉದಾಹರಣೆ ಕೊಡಬಲ್ಲೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ನಮ್ಮ ಜಾತ್ಯತೀತ ನಿಲುವನ್ನು ಬಿಟ್ಟು ನಾವು ರಾಜಕಾರಣ ಮಾಡುವುದಿಲ್ಲ. ಯಾವ ಕಾರಣಕ್ಕೂ ಆ ನಿಲುವು ಬಿಡುವುದಿಲ್ಲ. ಕೋರ್ ಕಮಿಟಿ ಸದಸ್ಯ ಜಿ ಟಿ ದೇವೆಗೌಡ ರಾಜ್ಯ ಪ್ರವಾಸದಲ್ಲಿದ್ದಾರೆ. ಅವರು ಎಲ್ಲರ ಜೊತೆ ಮಾತನಾಡುತ್ತಾರೆ. ಕಾರ್ಯಕರ್ತರ ವಿರೋಧ ಇದೆಯೋ, ಇಲ್ಲವೋ ಎಂಬುದನ್ನು ನೋಡುತ್ತಾರೆ. ಜೆಡಿಎಸ್ ಯಾವ ಕಾರಣಕ್ಕೆ ಬಿಜೆಪಿ ಜೊತೆ ಹೋಗಿದೆ ಎಂದು ಎಲ್ಲರೂ ಕೇಳ್ತಾರೆ. ಇದಕ್ಕೆ ನಾನು ಸ್ಪಷ್ಟನೆ ಕೊಡುತ್ತೇನೆ ಎಂದು ಹೇಳಿದರು.
ಬಿಜೆಪಿ ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ ನಾಗಾಲೋಟಕ್ಕೆ ಬ್ರೇಕ್ ಹಾಕ್ತಿರಾ ಎಂಬ ಪ್ರಶ್ನೆಗೆ ವ್ಯಂಗ್ಯವಾಗಿ ಉತ್ತರಿಸಿದ ದೇವೇಗೌಡರು, ಎಲ್ಲಿದೆ ರಿ ನಾಗಾಲೋಟ.? ನಾಗಾಲೋಟದಂತೆ ಕಾವೇರಿ ನೀರು ಓಡ್ತಿದೆ.. ಓಡ್ತಿದೆ.. ಓಡ್ತಿದೆ. ನಮ್ಮ ಜಲಸಂಪನ್ಮೂಲ ಸಚಿವರು ಖುಷಿಯಾಗಿದ್ದಾರೆ. ಅವರಿಗೆ ಸ್ಟಾಲಿನ್ ಗೆಲ್ಲಬೇಕು. ನನ್ನ ರಾಜ್ಯದ ಮರಣ ಶಾಸನಕ್ಕೆ ನಾನು ಬಿಡುವುದಿಲ್ಲ ಎಂದು ಗುಡುಗಿದರು.
ಸೀಟು ಹಂಚಿಕೆ ಇನ್ನೂ ಆಗಿಲ್ಲ: ಬಿಜೆಪಿ ಜೊತೆ ಸರ್ಕಾರ ಮಾಡಿದರೂ ಅಲ್ಪಸಂಖ್ಯಾತರನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ. ಯಾವುದೇ ಅಪನಂಬಿಕೆ ಬೇಡ. ರಾಜ್ಯದ ಪರಿಸ್ಥಿತಿಯಲ್ಲಿ ಇನ್ನೂ ಸೀಟು ಹಂಚಿಕೆ ಚರ್ಚೆ ಆಗಿಲ್ಲ. ಮೋದಿಯವರ ಜೊತೆ ಮಾತನಾಡಿಲ್ಲ. ಅಮಿತ್ ಶಾ ರಾಜ್ಯದ ಎಲ್ಲ ವಿಚಾರ ತಿಳಿದುಕೊಂಡಿದ್ದಾರೆ. ಅವರ ಜೊತೆ ಮಾತನಾಡಿದ್ದೇನೆ. ಅವರು ಸಹ ನಾಳೆ ಬೆಳಗ್ಗೆ ತೀರ್ಮಾನ ಮಾಡೋಣ ಎಂದು ಹೇಳಿಲ್ಲ. ಪಾರ್ಲಿಮೆಂಟ್ ಬೋರ್ಡ್ನಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡೋಣ ಎಂದಿದ್ದಾರೆ. ಹಾಗಾಗಿ, ಮೈತ್ರಿ ಮಾತುಕತೆ ಬಗ್ಗೆ ಪಾರ್ಲಿಮೆಂಟರಿ ಬೋರ್ಡ್ ಜೊತೆ ಚರ್ಚೆ ಮಾಡಿದ ಬಳಿಕ ಹೇಳುತ್ತೇವೆ. ಅದಕ್ಕಿನ್ನೂ ಸಮಯ ಇದೆ ಎಂದು ಹೇಳಿದರು.