ಬೆಂಗಳೂರು: ತುಮಕೂರು ಕ್ಷೇತ್ರ ಸಂಬಂಧ ಬಿಕ್ಕಟ್ಟು ಮುಂದುವರಿದಿದ್ದು, ಜೆಡಿಎಸ್ ಅಂತಿಮ ನಿರ್ಧಾರಕ್ಕೆ ಬರುವಲ್ಲಿ ಸಾಧ್ಯವಾಗಿಲ್ಲ.
ಇದೇ ವಿಚಾರವಾಗಿ ಇಂದು ಬೆಳಗಿನ ಜಾವದವರೆಗೆ ದೊಡ್ಡಗೌಡರ ನಿವಾಸದಲ್ಲಿ ಗಂಭೀರ ಚರ್ಚೆ ನಡೆದಿದೆ. ದೆಹಲಿಯಿಂದ ವಾಪಸಾಗುತ್ತಿದ್ದಂತೆ ದೇವೇಗೌಡರ ನಿವಾಸದಲ್ಲಿ ಸಭೆ ನಡೆಸಲಾಯಿತು. ಬೆಳಗಿನ ಜಾವದವರೆಗೆ ತುಮಕೂರು ಕ್ಷೇತ್ರದ ಬಗ್ಗೆ ಚರ್ಚೆ ನಡೆದಿದೆ.
ನಿನ್ನೆ ರಾತ್ರಿ 1ರಿಂದ 3.30ರವರೆಗೆ ಹೆಚ್.ಡಿ.ದೇವೇಗೌಡ, ಸಿಎಂ ಕುಮಾರಸ್ವಾಮಿ, ಹೆಚ್.ಡಿ ರೇವಣ್ಣ ಮಾತುಕತೆ ನಡೆಸಿದ್ದಾರೆ. ಮೂವರು ನಾಯಕರು ಸುಮಾರು ಎರಡೂವರೆ ಗಂಟೆ ಚರ್ಚಿಸಿದ್ದು, ಮಂಡ್ಯ ಕ್ಷೇತ್ರದ ಸ್ಥಿತಿಗತಿಗಳ ಬಗ್ಗೆಯೂ ಮಾತುಕತೆ ನಡೆಸಿದ್ದಾರೆ.
ತುಮಕೂರು ಕ್ಷೇತ್ರಕ್ಕೆ ದೇವೇಗೌಡರೇ ಸ್ಪರ್ಧಿಸುವ ಬಗ್ಗೆ ಚಿಂತನೆ ನಡೆದಿದೆ ಎನ್ನಲಾಗಿದೆ. ಇಲ್ಲವಾದರೆ ಕ್ಷೇತ್ರ ಬಿಟ್ಟು ಕೊಡುವಂತೆ ಕಾಂಗ್ರೆಸ್ ಒತ್ತಡ ಹೇರುತ್ತಿರುವುದರಿಂದ, ಕ್ಷೇತ್ರವನ್ನ ಕೈ ಪಕ್ಷಕ್ಕೆ ಬಿಟ್ಟು ಕೊಡುವ ಅನಿವಾರ್ಯತೆ ಎದುರಾಗುತ್ತದೆ.
ಇನ್ನು ಜೆಡಿಎಸ್ ನಿಂದ ಮುದ್ದುಹನುಮೇಗೌಡರಿಗೆ ಅವಕಾಶ ಕಡಿಮೆ ಇದೆ. ದೇವೇಗೌಡರ ಸ್ಪರ್ಧೆ ಇಲ್ಲ ಎಂದಾದಲ್ಲಿ ಕ್ಷೇತ್ರ ಕಾಂಗ್ರೆಸ್ಗೆ ಹೋಗುವ ಸಾಧ್ಯತೆ ಹೆಚ್ಚಿದೆ. ಹಾಗಾದಲ್ಲಿ ಜೆಡಿಎಸ್ ಪಾಲಾಗಿರುವ ಕ್ಷೇತ್ರಗಳು 8 ರಿಂದ 7ಕ್ಕೆ ಇಳಿಯಲಿದೆ.
ಅದರ ಬದಲಿಗೆ ಬೇರೆ ಯಾವುದಾದರು ಕ್ಷೇತ್ರ ಪಡೆಯಬಹುದಾ ಮುಂತಾದ ವಿಚಾರಗಳ ಬಗ್ಗೆ ಗಂಭೀರ ಚರ್ಚೆ ನಡೆಸಲಾಗಿದೆ. ಕೈ ನಾಯಕರ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲು ಜೆಡಿಎಸ್ ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.