ಬೆಂಗಳೂರು: ವಿಪತ್ತು ನಿರ್ವಹಣಾ ಕಾಯ್ದೆ ಜಾರಿಗೆ ನಿಯಮಗಳನ್ನು ರೂಪಿಸುವ ವಿಚಾರದಲ್ಲಿ ತಪ್ಪು ಮಾಹಿತಿ ನೀಡಿರುವ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದೆ.
ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಲು ಹೈಕೋರ್ಟ್ ಕಾನೂನು ಸೇವಾ ಸಮಿತಿ ಹಾಗೂ ತುಮಕೂರಿನ ಮಲ್ಲಿಕಾರ್ಜುನ ಎಂಬುವವರು ಪ್ರತ್ಯೇಕವಾಗಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಇಂದು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಕಾಯ್ದೆ ಜಾರಿಗೆ ನಿಯಮಗಳನ್ನು ರೂಪಿಸುವ ವಿಚಾರದಲ್ಲಿ ತಪ್ಪು ಮಾಹಿತಿಗಳನ್ನು ನೀಡಿರುವ ಅಂಶ ಗಮನಿಸಿದ ಪೀಠ, ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು. ಕಾಯ್ದೆಗೆ ಸಂಬಂಧಿಸಿದ ಆದೇಶ ಮತ್ತು ಅಧಿಸೂಚನೆಗಳನ್ನು ನಿಯಮಗಳು ಎಂದು ಕಂದಾಯ ಇಲಾಖೆ ಜಂಟಿ ಕಾರ್ಯದರ್ಶಿ ಉಮಾಪತಿ ಸಲ್ಲಿಸಿರುವ ಪ್ರಮಾಣಪತ್ರವನ್ನು ಕಂಡು ಆಕ್ರೋಶ ವ್ಯಕ್ತಪಡಿಸಿತು.
ಅಧಿಕಾರಿಗೆ ಅಧಿಸೂಚನೆಗಳು ಮತ್ತು ನಿಯಮಗಳ ವ್ಯತ್ಯಾಸವೇ ಗೊತ್ತಿಲ್ಲ. ಶಾಸನ ಸಭೆಯಲ್ಲಿ ಒಪ್ಪಿಗೆ ಪಡೆದ ನಿಯಮಗಳು ಹಾಗೂ ಸರ್ಕಾರ ಹೊರಡಿಸುವ ಅಧಿಸೂಚನೆ ಒಂದೇ ಅಲ್ಲ. ಇವುಗಳ ನಡುವಿನ ವ್ಯತ್ಯಾಸ ಗೊತ್ತಿಲ್ಲದವರು ಅಧಿಕಾರಿಯಾಗಿರುವುದು ವಿಪರ್ಯಾಸ ಎಂದು ಅಸಮಾಧಾನ ವ್ಯಕ್ತಪಡಿಸಿತು. ಅಲ್ಲದೆ ಈ ವಿಚಾರವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸುತ್ತದೆ. ಇಂತಹ ತಪ್ಪು ಮಾಹಿತಿ ನೀಡಿರುವ ಜಂಟಿ ಕಾರ್ಯದರ್ಶಿ ಉಮಾಪತಿ ಖುದ್ದಾಗಿ ಪ್ರಮಾಣಪತ್ರ ಸಲ್ಲಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ನವೆಂಬರ್ 20ಕ್ಕೆ ಮುಂದೂಡಿತು.