ಬೆಂಗಳೂರು : ರಾಜ್ಯದ ಜೈವಿಕ ವೈವಿಧ್ಯತೆಯನ್ನು ಆಧರಿಸಿ ನಿರ್ಮಿಸಿರುವ ‘ವೈಲ್ಡ್ ಕರ್ನಾಟಕ’ ಸಾಕ್ಷ್ಯಚಿತ್ರವನ್ನು ಯಾವುದೇ ರೂಪದಲ್ಲಿಯೂ ಪ್ರಸಾರ ಮಾಡಬಾರದು ಎಂದು ಹೈಕೋರ್ಟ್ ಚಿತ್ರದ ಪ್ರದರ್ಶನಕ್ಕೆ ಆಗಷ್ಟ್ 3ರವರೆಗೆ ತಡೆಯಾಜ್ಞೆ ನೀಡಿದೆ.
ಈ ಕುರಿತು ರವೀಂದ್ರ ಎನ್. ರೆಡ್ಕರ್ ಮತ್ತು ಆರ್.ಕೆ ಉಲ್ಲಾಸ್ ಕುಮಾರ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ಬಂಧ ವಿಧಿಸಿದೆ. ಸಾಕ್ಷ್ಯಚಿತ್ರವನ್ನು ಯಾವುದೇ ಮಾಧ್ಯಮಗಳ ಮೂಲಕ ಪ್ರದರ್ಶಿಸಬಾರದು.
ವಿತರಣೆ ಮಾಡಬಾರದು ಮತ್ತು ಮಾರುಕಟ್ಟೆ ಮಾಡಬಾರದು ಎಂದು ನ್ಯಾಯಾಲಯ ಮಧ್ಯಂತರ ಆದೇಶದಲ್ಲಿ ತಿಳಿಸಿದೆ. ಇದೇ ವೇಳೆ ಅರ್ಜಿ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ಅರಣ್ಯ ಮತ್ತು ಪರಿಸರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸೇರಿದಂತೆ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ.
ಅರ್ಜಿದಾರರ ಆರೋಪ :
ಅರಣ್ಯ ಇಲಾಖೆ ನೆರವಿನಿಂದ ನಿರ್ಮಿಸಿರುವ ‘ವೈಲ್ಡ್ ಕರ್ನಾಟಕ’ ಸಾಕ್ಷ್ಯಚಿತ್ರದ ಮೇಲೆ ಕರ್ನಾಟಕ ಅರಣ್ಯ ಇಲಾಖೆಗೆ ಸಂಪೂರ್ಣ ಹಕ್ಕು ಇದೆ. ಅದರೆ, ಖಾಸಗಿ ವ್ಯಕ್ತಿಗಳು ಅದನ್ನು ಅಂತಾರಾಷ್ಟ್ರೀಯ ಚಾನಲ್ಗಳಲ್ಲಿ ಹಾಗೂ ವಿದೇಶಿ ಸಂಸ್ಥೆಗಳಿಗೆ ವಾಣಿಜ್ಯ ರೂಪದಲ್ಲಿ ಮಾರಾಟ ಮಾಡಿದ್ದಾರೆ. ಅದರಿಂದ ಕೋಟ್ಯಂತರ ರೂಪಾಯಿ ಹಣ ಗಳಿಸುತ್ತಿದ್ದಾರೆ. ಈ ಮೂಲಕ ರಾಜ್ಯದ ಬೊಕ್ಕಸಕ್ಕೆ ದೊಡ್ಡ ನಷ್ಟವಾಗಿದೆ.
ವಿದೇಶಿ ಸಂಸ್ಥೆಗಳ ದೇಣಿಗೆ ಅರಣ್ಯ ಇಲಾಖೆಗೆ ಬಂದಿದ್ದರೆ, ಸಾಂಕ್ರಾಮಿಕದ ಈ ಸಮಯದಲ್ಲಿ ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ಮತ್ತು ಜೀವ ವೈವಿಧ್ಯಗಳನ್ನು ರಕ್ಷಿಸಲು ಅನುಕೂಲವಾಗುತ್ತಿತ್ತು. ಆದರೆ, ಪ್ರತಿವಾದಿಗಳು ವನ್ಯಜೀವಿಗಳನ್ನು ಮುಂದಿಟ್ಟುಕೊಂಡು ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ರಾಜ್ಯದ ಜೀವ ವೈವಿಧ್ಯತೆಯನ್ನು ಬಿಂಬಿಸುವ 52 ನಿಮಿಷಗಳ ‘ವೈಲ್ಡ್ ಕರ್ನಾಟಕ’ ಸಾಕ್ಷ್ಯಚಿತ್ರ ಮೊದಲಿಗೆ 2019ರ ಮಾರ್ಚ್ 3ರಂದು ಪ್ರಸಾರವಾಗಿತ್ತು.