ಬೆಂಗಳೂರು: ಕೆಲವು ವೈಯಕ್ತಿಕ ಖಾತೆಗಳನ್ನು ನಿರ್ಬಂಧಿಸಿ ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶವನ್ನು ಎತ್ತಿಹಿಡಿದಿದ್ದ ಏಕ ಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಎಕ್ಸ್ ಕಾರ್ಪ್ (ಹಿಂದಿನ ಟ್ವಿಟರ್) ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 4 ಕ್ಕೆ ನಿಗದಿಪಡಿಸಿದೆ. ಎಕ್ಸ್ ಕಾರ್ಪ್ ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು ನ್ಯಾಯಮೂರ್ತಿ ಜಿ ನರೇಂದರ್ ಮತ್ತು ವಿಜಯ ಕುಮಾರ್ ಎ. ಪಾಟೀಲ್ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕೇಂದ್ರ ಸರ್ಕಾರದ ಪರ ವಕೀಲರು ಕೆಲವು ವಿಚಾರಗಳನ್ನು ನಿರ್ಧರಿಸಲು ಮೂರು ವಾರ ಕಾಲಾವಕಾಶ ನೀಡಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ ಮೂರು ವಾರಗಳ ವಿಚಾರಣೆ ಮುಗಿಸಿ, ಅರ್ಜಿಯನ್ನೇ ಇತ್ಯರ್ಥಪಡಿಸಬಹುದು ಎಂದಿತು. ಎಕ್ಸ್ ಕಾರ್ಪ್ ಪ್ರತಿನಿಧಿಸಿದ್ದ ವಕೀಲ ಕೇಂದ್ರ ಸರ್ಕಾರದ ಆದೇಶಗಳನ್ನು ಪಾಲಿಸಬೇಕೆ ಎಂಬುದು ವಿಚಾರವೇ ವಿನಾ 50 ಲಕ್ಷ ರೂಪಾಯಿ ದಂಡವನ್ನು ಪಾವತಿಸುವುದಲ್ಲ. ಪರಿಹಾರಕ್ಕಾಗಿ ನಾವು ನ್ಯಾಯಾಲಯದ ಮೆಟ್ಟಿಲೇರಿದೆವು. ಆದರೆ, ನಾವು ಸಮಯ ವ್ಯರ್ಥ ಮಾಡುತ್ತಿದ್ದೇವೆ ಎಂದು ಏಕಸದಸ್ಯ ಪೀಠ ಹೇಳಿತ್ತು ಎಂದರು.
ಇದನ್ನು ಆಲಿಸಿದ ಪೀಠವು ಅಕ್ಟೋಬರ್ 5ರಂದು ಮಧ್ಯಂತರ ಅರ್ಜಿಯ ವಿಚಾರಣೆ ನಡೆಸಿ, ಆದೇಶ ಮಾಡಲಾಗುವುದು ಎಂದಿತು. ಅರ್ಜಿದಾರರ ಕೋರಿಕೆಯ ಹಿನ್ನೆಲೆಯಲ್ಲಿ ಅಕ್ಟೋಬರ್ 4ಕ್ಕೆ ನ್ಯಾಯಾಲಯ ವಿಚಾರಣೆ ನಿಗದಿಪಡಿಸಿದೆ.
ಪ್ರಕರಣದ ಹಿನ್ನೆಲೆ ಏನು?: ಕೆಲ ವೈಯಕ್ತಿಕ ಖಾತೆಗಳನ್ನು ನಿರ್ಬಂಧಿಸಿ ಕೇಂದ್ರ ಸರ್ಕಾರ 2021ರ ಫೆಬ್ರವರಿ ಮತ್ತು 2022ರ ಅವಧಿಯಲ್ಲಿ ರದ್ದು ಮಾಡಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಎಕ್ಸ್ ಕಾರ್ಪ್ (ಟ್ವಿಟರ್) ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಏಕ ಸದಸ್ಯ ಪೀಠ, ಅರ್ಜಿ ವಜಾಗೊಳಿಸಿ 50 ಲಕ್ಷ ರೂ. ಗಳ ದಂಡವನ್ನು ವಿಧಿಸಿ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಎಕ್ಸ್ ಕಾರ್ಪ್ ದ್ವಿಸದಸ್ಯ ಪೀಠಕ್ಕೆ ಮೇಲ್ಮವಿ ಸಲ್ಲಿಸಿತ್ತು. ಅರ್ಜಿಯ ಕುರಿತು ಈ ಹಿಂದೆ ವಿಚಾರಣೆ ನಡೆಸಿದ ದ್ವಿಸದಸ್ಯ ಪೀಠ, 50 ಲಕ್ಷ ರೂ. ಗಳ ದಂಡದ ಆದೇಶಕ್ಕೆ ತಡೆ ನೀಡಿತ್ತು. ಎಕ್ಸ್ ಕಾರ್ಪ್ ತನ್ನ ನಂಬಿಕೆಯನ್ನು ಉಳಿಸಿಕೊಳ್ಳುವುದಕ್ಕಾಗಿ ದಂಡದ ಒಟ್ಟು ಮೊತ್ತದಲ್ಲಿ ಶೇ. 50ರಷ್ಟು (25 ಲಕ್ಷ ರೂ.) ಮುಂದಿನ ಒಂದು ವಾರದಲ್ಲಿ (ಠೇವಣಿ) ಪಾವತಿಸಲು ಪೀಠ ನಿರ್ದೇಶನ ನೀಡಿತ್ತು. ಜತೆಗೆ, ಈ ತಡೆಯಾಜ್ಞೆಯನ್ನು ತೆರವುಗೊಳಿಸುವುದಕ್ಕಾಗಿ ಕೇಂದ್ರ ಸರ್ಕಾರ ಆಕ್ಷೇಪಣೆಗಳನ್ನು ಸಲ್ಲಿಸಲು ಹೈಕೋರ್ಟ್ ನಿರ್ದೇಶನ ನೀಡಿತ್ತು. ಈ ನಡುವೆ ಎಕ್ಸ್ ಕಾರ್ಪ್ 25 ಲಕ್ಷ ರು.ಗಳನ್ನು ಹೈಕೋರ್ಟ್ನ ರಿಜಿಸ್ಟ್ರಾರ್ ಕಚೇರಿಗೆ ಪಾವತಿಸಿತ್ತು.
ಇದನ್ನೂ ಓದಿ: ಆಕ್ಷೇಪಾರ್ಹ ಟ್ವೀಟ್ ತೆಗೆದಿರುವ ಕುರಿತ ಆರೋಪಕ್ಕೆ ತನ್ನ ನಿಲುವು ತಿಳಿಸಲು ಕೇಂದ್ರಕ್ಕೆ ಹೈಕೋರ್ಟ್ ಸೂಚನೆ