ಬೆಂಗಳೂರು : ಕೊರೊನಾ ಸೋಂಕು ಹರಡುತ್ತದೆ ಎಂಬ ಅಂಶ ಪರಿಗಣಿಸಿ ಜಾಮೀನು ನೀಡುವಂತೆ ಕೋರಿ, ಅತ್ಯಾಚಾರ ಆರೋಪದಡಿ ಬಂಧಿತನಾಗಿರುವ ವ್ಯಕ್ತಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಕೊರೊನಾ ಸೋಂಕು ಸಮುದಾಯಕ್ಕೆ ಹರಡುತ್ತಿದೆ. ಇಂತಹ ಸಮಯದಲ್ಲಿ ಜೈಲುವಾಸ ಸುರಕ್ಷಿತವಲ್ಲ. ಹೀಗಾಗಿ, ತನಗೆ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಂಧಿತನಾಗಿರುವ ಅರವಿಂದ ಕುಮಾರ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದನು.
ಅರ್ಜಿ ವಿಚಾರಣೆ ನಡೆಸಿದ ನ್ಯಾ. ಬಿ.ಎ. ಪಾಟೀಲ ಅವರಿದ್ದ ಪೀಠವು, ಕೋವಿಡ್-19 ಸಮುದಾಯಕ್ಕೆ ಹರಡಿದೆ ಎಂಬ ಅಂಶವನ್ನು ಪರಿಗಣಿಸಿ ಆರೋಪಿಗೆ ಜಾಮೀನು ನೀಡಿದರೆ ಸಮಾಜಕ್ಕೆ ದೊಡ್ಡ ಮಟ್ಟದಲ್ಲಿ ತಪ್ಪು ಸಂದೇಶ ರವಾನೆ ಮಾಡಿದಂತಾಗುತ್ತದೆ. ಜತೆಗೆ, ಇದೇ ಆಧಾರದ ಮೇಲೆ ಪ್ರತಿಯೊಬ್ಬ ಆರೋಪಿಯೂ ರಕ್ಷಣೆ ಪಡೆಯಲು ಮುಂದಾಗುತ್ತಾನೆ. ಮುಖ್ಯವಾಗಿ ಆರೋಪಿ ಇರುವ ಜೈಲಿನಲ್ಲಿ ಕೊರೊನಾ ಸೋಂಕಿತರಿದ್ದು, ಅವರಿಂದ ಈತನಿಗೆ ಪ್ರಾಣಾಪಾಯ ಉಂಟಾಗಲಿದೆ ಎಂಬುದನ್ನು ಸಾಬೀತು ಮಾಡಿಲ್ಲ ಎಂದರು.
ಹೀಗಾಗಿ ಆರೋಪಿ ಅರವಿಂದ ಕುಮಾರ್ಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ತಿಳಿಸಿ, ಅರ್ಜಿ ವಜಾ ಮಾಡಿದೆ. 2018ರ ಸೆ.19ರಂದು ಇದೇ ಪ್ರಕರಣದಲ್ಲಿ ಹೈಕೋರ್ಟ್ ಆರೋಪಿಗೆ ಜಾಮೀನು ತಿರಸ್ಕರಿಸಿ, ಪ್ರಕರಣದ ವಿಚಾರಣೆಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ವಿಚಾರಣಾ ನ್ಯಾಯಾಲಯಕ್ಕೆ ಆದೇಶಿಸಿತ್ತು. ವಿಚಾರಣಾ ನ್ಯಾಯಾಲಯ ಆರೋಪ ದಾಖಲಿಸಿಕೊಂಡು ಒಂದು ವರ್ಷ ಕಳೆದಿದ್ದರೂ ವಿಚಾರಣೆ ಪೂರ್ಣಗೊಳಿಸಿಲ್ಲ. ಆರೋಪಿ ಎರಡೂವರೆ ವರ್ಷಕ್ಕಿಂತ ಅಧಿಕ ಸಮಯದಿಂದ ನ್ಯಾಯಾಂಗ ಬಂಧನದಲ್ಲಿದ್ದಾನೆ. ಹೀಗಾಗಿ, ಜಾಮೀನು ನೀಡಬೇಕು ಎಂಬ ಆರೋಪಿ ಪರ ವಕೀಲರ ವಾದವನ್ನು ಹೈಕೋರ್ಟ್ ಇದೇ ವೇಳೆ ತಿರಸ್ಕರಿಸಿದೆ. ಪೋಕ್ಸೋ ಕಾಯ್ದೆ ಸೆಕ್ಷನ್ 35 ಪ್ರಕಾರ ಆರೋಪ ದಾಖಲಿಸಿಕೊಂಡ ನಂತರ ಒಂದು ವರ್ಷದೊಳಗೆ ಮುಗಿಸಲು ಪ್ರಯತ್ನಿಸಬೇಕು. ಆದರೆ, ಪೋಕ್ಸೋ ವಿಶೇಷ ನ್ಯಾಯಾಲಯಕ್ಕೆ ಎಲ್ಲಾ ಪ್ರಕರಣಗಳ ವಿಚಾರಣೆಯನ್ನು ಸೆಕ್ಷನ್ 35ರ ಪ್ರಕಾರ ಒಂದು ವರ್ಷದೊಳಗೆ ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ : ಮಾರತಹಳ್ಳಿಯ ರಾಜೇಶ್ವರಿ ಬಡಾವಣೆ ನಿವಾಸಿ ಕೆ.ಎಸ್. ಅರವಿಂದ ಕುಮಾರ್ (21) ಮೊದಲನೇ ವರ್ಷದ ಡಿಪ್ಲೋಮಾ ವ್ಯಾಸಂಗ ಮಾಡುತ್ತಿದ್ದ ಅಪ್ರಾಪ್ತೆಯೊಬ್ಬಳನ್ನು ತನ್ನ ಕೊಠಡಿಯಲ್ಲಿ ಬಲವಂತವಾಗಿ ಇರಿಸಿಕೊಂಡು, 2018 ಜ.13 ರಿಂದ 24ರವರೆಗೆ ಆಕೆಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಕ್ರಿಯೆ ನಡೆಸಿದ ಆರೋಪಕ್ಕೆ ಒಳಗಾಗಿದ್ದನು. ಈ ಪ್ರಕರಣದಲ್ಲಿ ರಾಜಾಜಿನಗರ ಠಾಣಾ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ಆರೋಪಿ ಕಳೆದ ಎರಡೂವರೆ ವರ್ಷದಿಂದ ಜೈಲಿನಲ್ಲಿದ್ದಾನೆ. ಇತ್ತೀಚೆಗೆ ಕೊರೊನಾ ವ್ಯಾಪಿಸಲಾರಂಭಿಸಿದ್ದರಿಂದ ಇದೇ ಆಧಾರದಲ್ಲಿ ತನಗೆ ಪ್ರಾಣಾಪಾಯವಿದೆ ಎಂದು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ.