ಬೆಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ(ಕೆಎಸ್ಓಯು)ದ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ. ಎ. ರಂಗಸ್ವಾಮಿ ಅವರ ಹೆಸರನ್ನು ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿವಿ ಹಾಗೂ ಕಲಬುರ್ಗಿ ವಿವಿಗಳ ಕುಲಪತಿ ಸ್ಥಾನಕ್ಕೆ ಮರು ಪರಿಶೀಲಿಸುವಂತೆ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ನಿರಾಧಾರ ಆರೋಪಗಳ ಹಿನ್ನೆಲೆಯಲ್ಲಿ ತಮ್ಮನ್ನು ಕುಲಪತಿ ಹುದ್ದೆಯಿಂದ ವಂಚಿತರನ್ನಾಗಿ ಮಾಡಲಾಗಿದೆ. ಹೀಗಾಗಿ ತಮ್ಮನ್ನು ಹುದ್ದೆಗೆ ಪರಿಗಣಿಸುವಂತೆ ನಿರ್ದೇಶಿಸಬೇಕು ಎಂದು ಕೋರಿ ಡಾ.ಎ.ರಂಗಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾ. ಜಾನ್ ಮೈಕೆಲ್ ಕುನ್ಹಾ ಅವರಿದ್ದ ಪೀಠ ಈ ತೀರ್ಪು ನೀಡಿದೆ.
ಗಂಗೂಬಾಯಿ ಸಂಗೀತ ವಿವಿ ಮತ್ತು ಕಲಬುರ್ಗಿ ವಿವಿಗಳ ಉಪಕುಲಪತಿಗಳ ಆಯ್ಕೆಗೆ ನೇಮಿಸಲಾಗಿದ್ದ ಶೋಧನಾ ಸಮಿತಿಗಳು ಡಾ.ಎ.ರಂಗಸ್ವಾಮಿ ಅವರ ಹೆಸರನ್ನು ಕೆಎಸ್ಒಯು ರಿಜಿಸ್ಟ್ರಾರ್ ಲಿಂಗರಾಜಗಾಂಧಿ ನೀಡಿದ್ದ ವರದಿ ಮೇರೆಗೆ ಕೈಬಿಡಲಾಗಿತ್ತು. ರಂಗಸ್ವಾಮಿ ವಿರುದ್ಧ ಶಿಸ್ತು ಸಮಿತಿ ವಿಚಾರಣೆ ಬಾಕಿ ಇದೆ ಎಂದು ವರದಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಮಿತಿ ಹೆಸರನ್ನು ಪರಿಗಣಿಸಿರಲಿಲ್ಲ. ಇದೀಗ ತೀರ್ಪು ನೀಡಿರುವ ಹೈಕೋರ್ಟ್, ಶೋಧನಾ ಸಮಿತಿ ಸುಳ್ಳು ಮಾಹಿತಿಯಿಂದ ಪ್ರಭಾವಿತವಾಗದೆ ಸ್ವತಂತ್ರವಾಗಿ ಮರುಪರಿಶೀಲನೆ ನಡೆಸಬೇಕು ಎಂದು ಆದೇಶಿಸಿದೆ. ಅಲ್ಲದೆ, ಯಾವುದೇ ಇಲಾಖಾ ತನಿಖೆ ಬಾಕಿ ಇಲ್ಲದಿದ್ದರೂ, ಶಿಸ್ತು ಸಮಿತಿ ರಚನೆಯಾಗದಿದ್ದರೂ, ಶೋಧನಾ ಸಮಿತಿಗೆ ದುರುದ್ದೇಶ ಪೂರ್ವಕವಾಗಿ ಸುಳ್ಳು ಮಾಹಿತಿ ನೀಡಿದ್ದ ಲಿಂಗರಾಜಗಾಂಧಿ ವಿರುದ್ಧ ತನಿಖೆ ನಡೆಸುವಂತೆ ಹೈಕೋರ್ಟ್, ಸರ್ಕಾರಕ್ಕೆ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ :
ಶೈಕ್ಷಣಿಕ ವಲಯದಲ್ಲಿ ಅಪಾರ ಅನುಭವ ಹೊಂದಿರುವ ಡಾ. ಎ. ರಂಗಸ್ವಾಮಿ, ಹಿಂದೆ ಗಂಗೂಬಾಯಿ ಹಾನಗಲ್ ವಿ.ವಿಯಲ್ಲಿ ರಿಜಿಸ್ಟ್ರಾರ್ ಆಗಿದ್ದರು. ಹಲವರಿಗೆ ಎಂಫಿಲ್ ಮತ್ತು ಪಿಹೆಚ್ಡಿಗೆ ಮಾರ್ಗದರ್ಶನ ನೀಡಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿವಿ ಹಾಗೂ ಕಲಬುರ್ಗಿ ವಿವಿಗಳ ಕುಲಪತಿ ಹುದ್ದೆಗೆ ಶೋಧನಾ ಸಮಿತಿ ರಚನೆ ಮಾಡಿದ್ದಾಗ ಇವರು ಕೂಡ ಕುಲಪತಿ ಹುದ್ದೆಗೆ ಅರ್ಜಿ ಹಾಕಿದ್ದರು. ನಿಯಮದಂತೆ ಅರ್ಜಿ, ಕೆಎಸ್ಓಯು ರಿಜಿಸ್ಟ್ರಾರ್ ಆಗಿದ್ದ ಲಿಂಗರಾಜಗಾಂಧಿ ಮೂಲಕ ಹೋಗಬೇಕಿತ್ತು. ಆದರೆ, ಅರ್ಜಿ ಶಿಫಾರಸು ಮಾಡುವಾಗ ಲಿಂಗರಾಜಗಾಂಧಿ, ರಂಗಸ್ವಾಮಿ ವಿರುದ್ಧ ಇಲಾಖಾ ತನಿಖೆ ಬಾಕಿ ಇದೆ, ಅದಕ್ಕಾಗಿ ಸಮಿತಿ ರಚನೆ ಮಾಡಲಾಗಿದೆ ಎಂದು ಸಮಿತಿಗಳಿಗೆ ಸುಳ್ಳು ಮಾಹಿತಿ ನೀಡಿದ್ದರು. ಇದರಿಂದಾಗಿ ರಂಗಸ್ವಾಮಿ ಕುಲಪತಿ ಹುದ್ದೆಗೆ ಪರಿಗಣಿಸಲ್ಪಟ್ಟಿರಲಿಲ್ಲ.