ಬೆಂಗಳೂರು: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಚುನಾವಣೆ ನಡೆಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿದೆ.
ಅವಧಿ ಮುಗಿದಿರುವ ಪಾಲಿಕೆಗೆ ಚುನಾವಣೆ ನಡೆಸಲು ನಿರ್ದೇಶಿಸುವಂತೆ ಕೋರಿ ಹುಬ್ಬಳ್ಳಿಯ ಸಾಮಾಜಿಕ ಕಾರ್ಯಕರ್ತ ನಾಗರಾಜ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ, ಈ ಆದೇಶ ನೀಡಿದೆ.
ರಾಜ್ಯ ಸರ್ಕಾರ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ ಮರು ವಿಂಗಡಣೆ ಪ್ರಕ್ರಿಯೆಯನ್ನು 6 ವಾರಗಳಲ್ಲಿ ಪೂರ್ಣಗೊಳಿಸಬೇಕು. ಅದಾದ 2 ತಿಂಗಳ ಒಳಗೆ ವಾರ್ಡ್ ಮೀಸಲು ಅಧಿಸೂಚನೆಯನ್ನು ಪ್ರಕಟಿಸಬೇಕು. ರಾಜ್ಯ ಸರ್ಕಾರ ಮೀಸಲು ಅಧಿಸೂಚನೆ ಪ್ರಕಟಿಸಿದ 2 ತಿಂಗಳಲ್ಲಿ ರಾಜ್ಯ ಚುನಾವಣಾ ಆಯೋಗ ಮತದಾರರ ಪಟ್ಟಿ ಅಂತಿಮಗೊಳಿಸಬೇಕು. ಹಾಗೆಯೇ ಮುಂದಿನ 45 ದಿನಗಳಲ್ಲಿ ಚುನಾವಣಾ ವೇಳಾ ಪಟ್ಟಿ ಪ್ರಕಟಿಸಬೇಕು ಎಂದು ಆಯೋಗಕ್ಕೆ ಆದೇಶಿಸಿದೆ.
ಹೈಕೋರ್ಟ್ ಆದೇಶದಂತೆ 2021ರ ಜುಲೈ ವೇಳೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಚುನಾವಣೆ ನಡೆಯಲಿದೆ. ಒಂದು ವೇಳೆ ಹೈಕೋರ್ಟ್ ನೀಡಿರುವ ಗಡುವಿಗೆ ಮುನ್ನವೇ ವಾರ್ಡ್ ಮರು ವಿಂಗಡಣೆ, ವಾರ್ಡ್ ಮೀಸಲು ಪಟ್ಟಿ ಹಾಗೂ ಮತದಾರರ ಪಟ್ಟಿ ಸಿದ್ಧವಾದರೆ ಜುಲೈಗೂ ಮುನ್ನವೇ ಚುನಾವಣೆ ನಡೆಯುವ ಸಾಧ್ಯತೆ ಇದೆ.
ಪ್ರಕರಣದ ಹಿನ್ನೆಲೆ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸದಸ್ಯರ ಅವಧಿ 2019ರ ಮಾರ್ಚ್ 6ಕ್ಕೆ ಪೂರ್ಣಗೊಂಡಿತ್ತು. ಆದರೆ, ಚುನಾವಣೆ ನಡೆಸಬೇಕಿದ್ದ ಸರ್ಕಾರ, ಆಡಳಿತಾಧಿಕಾರಿ ನೇಮಿಸಿ ಅವರನ್ನೇ ಮುಂದುವರೆಸಿಕೊಂಡು ಬಂದಿತ್ತು. 2020ರ ಜನವರಿ 4ರಂದು ಸರ್ಕಾರದ ಕ್ರಮ ಪ್ರಶ್ನಿಸಿ ಪಿಐಎಲ್ ಸಲ್ಲಿಸಿದ ಬಳಿಕ ಸರ್ಕಾರ ಹಿಂದಿನ ಮೀಸಲು ಹಾಗೂ ವಾರ್ಡ್ ಮರು ವಿಂಗಡಣೆ ಅಧಿಸೂಚನೆಗಳನ್ನು ಹಿಂಪಡೆದು ಹೊಸದಾಗಿ ಪಟ್ಟಿಗಳನ್ನು ಸಿದ್ಧಪಡಿಸಿ ಚುನಾವಣೆ ನಡೆಸುವುದಾಗಿ ಭರವಸೆ ನೀಡಿತ್ತು.
ಇದಕ್ಕೂ ಮುನ್ನ ಚುನಾವಣೆ ಸಂಬಂಧ 2018ರಲ್ಲಿಯೇ ವಾರ್ಡ್ ಮರು ವಿಂಗಡಣೆ ಹಾಗೂ ಮೀಸಲು ಸಂಬಂಧ ರಾಜ್ಯ ಸರ್ಕಾರ ಎರಡು ಪ್ರತ್ಯೇಕ ಅಧಿಸೂಚನೆ ಹೊರಡಿಸಿತ್ತು. ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ಹೈಕೋರ್ಟ್, ತಡೆ ನೀಡಿದ್ದರಿಂದ ಅವುಗಳನ್ನು ಹಿಂಪಡೆಯುವುದಾಗಿ ಸರ್ಕಾರ ತಿಳಿಸಿತ್ತು. ಆದರೆ 2020ರಲ್ಲಿ ಚುನಾವಣೆ ನಡೆಸುವಂತೆ ಕೋರಿ ಅರ್ಜಿ ಸಲ್ಲಿಸುವವರೆಗೂ ಅಧಿಸೂಚನೆಗಳನ್ನು ಹಿಂಪಡೆದಿರಲಿಲ್ಲ. ಈ ವಿಚಾರವಾಗಿ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ನ್ಯಾಯಾಲಯಕ್ಕೆ ಕ್ಷಮೆ ಕೋರಿದ್ದರು. ಜೊತೆಗೆ ಹೈಕೋರ್ಟ್ ನಿರ್ದೇಶನಗಳನ್ನು ಪಾಲಿಸುವುದಾಗಿ ಹಾಗೂ ಚುನಾವಣೆ ನಡೆಸುವುದಾಗಿ ತಿಳಿಸಿದ್ದರು.