ಬೆಂಗಳೂರು: ರಾಜ್ಯದಲ್ಲಿ ಲಾಕ್‌ಡೌನ್ ಇದ್ದು ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದ್ದರೂ ಸಹ ಆಹಾರ ಧಾನ್ಯ, ತರಕಾರಿ, ಆಸ್ಪತ್ರೆ ಹಾಗೂ ಔಷಧ ಮಳಿಗೆಗಳಿಗೆ ತೆರಳುವವರಿಗೆ ಅನಗತ್ಯವಾಗಿ ತೊಂದರೆ ಕೊಡಬಾರದು ಎಂದು ಪೊಲೀಸರಿಗೆ ಹೈಕೋರ್ಟ್ ಸೂಚಿಸಿದೆ.
ಅನಿವಾರ್ಯ ಸಂದರ್ಭಗಳಲ್ಲಿ ಮನೆಯಿಂದ ಹೊರಬರುವ ಸಾರ್ವಜನಿಕರ ಮೇಲೆ ಪೊಲೀಸರು ಬೇಕಾಬಿಟ್ಟಿ ಲಾಠಿ ಚಾರ್ಜ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ವಕೀಲ ಎನ್.ಪಿ.ಅಮೃತೇಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ವೀಡಿಯೋ ಕಾನ್ಫರನ್ಸ್ ಮೂಲಕ ವಿಚಾರಣೆ ನಡೆಸಿತು.
ಕೆಲ ಕಾಲ ವಾದ ಆಲಿಸಿದ ಪೀಠ, ಕೊರೊನಾ ತಡೆಗಟ್ಟಲು ಸರ್ಕಾರ ಹೊರಡಿಸಿರುವ ಲಾಕ್‌ಡೌನ್ ಆದೇಶ ಪಾಲನೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಆದರೆ, ಅಗತ್ಯ ವಸ್ತುಗಳ ಖರೀದಿಗಾಗಿ, ವೈದ್ಯಕೀಯ ಸೇವೆಗಾಗಿ ಅಥವಾ ಬೇರಿನ್ನಾವುದೇ ತುರ್ತು ಕಾರಣಗಳಿಗಾಗಿ ಹೊರ ಬರುವ ಸಾರ್ವಜನಿಕರ ಮೇಲೆ ಪೊಲೀಸರು ಅನಗತ್ಯ ತೊಂದರೆ ಮಾಡಬಾರದು. ಸೂಕ್ತ ಕಾರಣ ನೀಡದಿದ್ದರೆ ಮಾತ್ರ ಕಾನೂನು ರೀತಿ ಕ್ರಮ ಜರುಗಿಸಬಹುದು. ಈ ನಿಟ್ಟಿನಲ್ಲಿ ಬೆಂಗಳೂರು ಮಾದರಿಯಲ್ಲೇ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಗೆ ಸುತ್ತೋಲೆ ಹೊರಡಿಸಬೇಕು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪೀಠ ನಿರ್ದೇಶನ ನೀಡಿತು.