ಬೆಂಗಳೂರು: ಭ್ರಷ್ಟ ರಾಜಕಾರಣಿಗಳ ಸಿಂಹಸ್ವಪ್ನವಾಗಿದ್ದ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹ ಅವರು ನಿನ್ನೆ ಸೇವೆಯಿಂದ ನಿವೃತ್ತಿಯಾದರು. ಈ ವೇಳೆ ಬೆಂಗಳೂರು ವಕೀಲರ ಸಂಘ ಹೃತ್ಪೂರ್ವಕ ಬೀಳ್ಕೊಡುಗೆ ನೀಡಿತು.
ಸೇವಾ ದಿನದ ಕೊನೆಯ ದಿನವಾದ ನಿನ್ನೆ ನ್ಯಾ. ಜಾನ್ ಮೈಕೆಲ್ ಕುನ್ಹ ಅವರು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ಅವರೊಂದಿಗೆ ಪೀಠ ಹಂಚಿಕೊಂಡು ಕೆಲ ಕಾಲ ಕಲಾಪ ನಡೆಸಿದರು. ಬಳಿಕ, ಹೈಕೋರ್ಟ್‌ನ ವಕೀಲರ ಸಂಘದ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ನ್ಯಾ. ಕುನ್ಹ ಅವರಿಗೆ ಬೀಳ್ಕೊಡುಗೆ ನೀಡಲಾಯಿತು.
ಈ ವೇಳೆ ಮಾತನಾಡಿದ ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕ, ಹೈಕೋರ್ಟ್ ನ್ಯಾಯಮೂರ್ತಿ ಆಗಿದ್ದ ಸಿಮೀತ ಅವಧಿಯಲ್ಲಿ ನ್ಯಾ. ಕುನ್ಹ ಅವರು 5 ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಿದ್ದಾರೆ. ಜಿಲ್ಲಾ ನ್ಯಾಯಾಧೀಶರಾಗಿ, ಹೈಕೋರ್ಟ್ ರಿಜಿಸ್ಟ್ರಾರ್ ಆಗಿ ಮತ್ತು ಹೈಕೋರ್ಟ್ ನ್ಯಾಯಮೂರ್ತಿ ಆಗಿ ಅವರ ಸೇವೆ ಗಮನಾರ್ಹ. ಅವರ ನಿವೃತ್ತಿ ನಂತರದ ಅವರ ಜೀವನ ಸಂತಸಮಯವಾಗಿರಲಿ. ಹಾಗೆಯೇ, ಸಮಾಜ ಮತ್ತು ನ್ಯಾಯಾಂಗಕ್ಕೆ ಉಪಯುಕ್ತವಾಗಿರಲಿ ಎಂದು ಹಾರೈಸಿದರು.
ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ. ರಂಗನಾಥ್ ಮಾತನಾಡಿ, ಜಯಲಲಿತಾ ಪ್ರಕರಣ ನ್ಯಾಯಾಂಗಕ್ಕೆ ಸವಾಲಾಗಿ ಪರಿಣಿಸಿತ್ತು. ಈ ವೇಳೆ ಸೆಷನ್ಸ್ ನ್ಯಾಯಾಧೀಶರಾಗಿದ್ದ ಕುನ್ಹ ಮಹತ್ವದ ತೀರ್ಪು ನೀಡುವ ಮೂಲಕ ಇಡೀ ದೇಶದ ಗಮನ ಸೆಳೆಯುವ ಜತೆಗೆ ನ್ಯಾಯಾಂಗದ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿದರು. ರಾಜ್ಯದ ಹಲವು ಮಾಜಿ, ಹಾಲಿ ಸಿಎಂಗಳ ಡಿನೋಟಿಫಿಕೇಷನ್ ಪ್ರಕರಣಗಳು, ಜನಪ್ರತಿನಿಧಿಗಳ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳಲ್ಲಿ ಗಮನಾರ್ಹ ತೀರ್ಪುಗಳನ್ನು ನೀಡಿ, ಭ್ರಷ್ಟ ರಾಜಕಾರಣಿಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದರು ಎಂದು ನ್ಯಾ. ಕುನ್ಹ ಅವರ ತೀರ್ಪುಗಳನ್ನು ಪ್ರಶಂಸಿಸಿದರು.
ಅಡ್ವೊಕೇಟ್ ಜನರಲ್ ಪ್ರಭುಲಿಂಗ್ ಕೆ. ನಾವದಗಿ ಮಾತನಾಡಿ, ನ್ಯಾ. ಕುನ್ಹ ಅವರ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬೀಳ್ಕೊಡುಗೆ ಸನ್ಮಾನ ಸ್ವೀಕರಿಸಿ ಮಾತನಾಡಿದ ನ್ಯಾ. ಕುನ್ಹ ತಮ್ಮ ಸೇವಾನುಭವಗಳನ್ನು ಹಂಚಿಕೊಳ್ಳುತ್ತಲೇ, ವಕೀಲರಿಂದ ಸಿಕ್ಕ ಸಹಕಾರವನ್ನು ಸ್ಮರಿಸಿದರು.
ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಸಿಜೆ ಓಕ ಸೇರಿದಂತೆ ಹೈಕೋರ್ಟ್ ನ ನ್ಯಾಯಮೂರ್ತಿಗಳು, ನ್ಯಾಯಾಂಗ ಅಧಿಕಾರಿಗಳು, ಹೈಕೋರ್ಟ್ ಸಿಬ್ಬಂದಿ, ಎಎಬಿ ಪದಾಧಿಕಾರಿಗಳು, ವಕೀಲರು ಮತ್ತು ನ್ಯಾ. ಕುನ್ಹ ಕುಟುಂಬಸ್ಥರು ಉಪಸ್ಥಿತರಿದ್ದರು. ಜಿಲ್ಲಾ ನ್ಯಾಯಾಧೀಶರಾಗಿ, ಹೈಕೋರ್ಟ್ ರಿಜಿಸ್ಟ್ರಾರ್ ಆಗಿ ಕಾರ್ಯನಿರ್ವಹಿಸಿದ್ದ ದಕ್ಷಿಣ ಕನ್ನಡದ ನ್ಯಾ. ಕುನ್ಹ ಅವರು 2016ರ ನ.14ರಂದು ಹೈಕೋರ್ಟ್ ನ್ಯಾಯಮೂರ್ತಿ ನೇಮಕಗೊಂಡಿದ್ದರು.