ಬೆಂಗಳೂರು : ಮೆಟ್ರೊ ರೈಲು ಮಾರ್ಗಕ್ಕೆ ಅಡ್ಡಿಯಾಗಿವೆ ಎನ್ನಲಾದ 872 ಮರಗಳನ್ನು ಸ್ಥಳಾಂತರಿಸುವ ಅಥವಾ ತೆರವು ಮಾಡುವ ಮುನ್ನ ತಜ್ಞರ ಅಭಿಪ್ರಾಯ ಪಡೆದುಕೊಳ್ಳಿ ಎಂದು ಹೈಕೋರ್ಟ್, ರಾಜ್ಯ ಸರ್ಕಾರ ಹಾಗೂ ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ ಸೂಚಿಸಿದೆ.
ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಮರಗಳನ್ನು ಬಲಿ ಕೊಡಲಾಗುತ್ತಿದೆ ಎಂದು ಆಕ್ಷೇಪಿಸಿ ಬೆಂಗಳೂರು ಎನ್ವಿರಾನ್‌ಮೆಂಟ್ ಟ್ರಸ್ಟ್ ಮತ್ತು ಪರಿಸರವಾದಿ ದತ್ತಾತ್ರೇಯ ಟಿ. ದೇವರೆ ಸಲ್ಲಿಸಿದ್ದ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ಓದಿ : ಡ್ರಗ್ಸ್ ಪ್ರಕರಣ: ನಟಿ ಸಂಜನಾ ಜಾಮೀನು ಅರ್ಜಿ ನಾಳೆ ವಿಚಾರಣೆ
ಅರ್ಜಿ ವಿಚಾರಣೆ ವೇಳೆ ಬಿಎಂಆರ್‌ಸಿಎಲ್ ಪರ ವಕೀಲರು ವಾದಿಸಿ, ಮೆಟ್ರೊ ರೈಲು ಮಾರ್ಗಕ್ಕೆ ಕಡಿಯಲು ಉದ್ದೇಶಿಸಿರುವ ಮರಗಳು ಕರ್ನಾಟಕ ಮರಗಳ ಸಂರಕ್ಷಣೆ ಕಾಯ್ದೆ ಅಡಿ ಬರುವುದಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಪರಿಸರ ಸಂರಕ್ಷಣೆಗೆ ಕಾಯ್ದೆಯೇ ಹೇಳಬೇಕು ಎಂದೇನಿಲ್ಲ. ಕಾನೂನಿನ ಹೊರತಾಗಿಯೂ ಸಾರ್ವಜನಿಕರ ಹಿತ ಗಮನದಲ್ಲಿಟ್ಟುಕೊಂಡು ಸರ್ಕಾರ ಹಾಗೂ ಪ್ರಾಧಿಕಾರಗಳು ಕಾರ್ಯನಿರ್ವಹಿಸಬೇಕು ಎಂದು ಅಭಿಪ್ರಾಯಪಟ್ಟಿತು.
ಅಲ್ಲದೆ, ರೈಲು ಮಾರ್ಗ ನಿರ್ಮಾಣಕ್ಕೆ ಅಡ್ಡಿಯಾಗಿವೆ ಎನ್ನಲಾದ ಮರಗಳನ್ನು ಕಡಿಯಬಹುದೇ ಅಥವಾ ಸ್ಥಳಾಂತರಿಸಬಹುದೇ ಎಂಬುವುದರ ಬಗ್ಗೆ ತಜ್ಞರ ಸಮಿತಿಯಿಂದ ವರದಿ ಪಡೆದುಕೊಳ್ಳಿ. ಅದಕ್ಕಾಗಿ ಹೊಸ ತಜ್ಞರ ಸಮಿತಿ ರಚಿಸುವ ಆಗತ್ಯವಿಲ್ಲ, ಈಗಾಗಲೇ ಇರುವ ತಜ್ಞರ ಸಮಿತಿಯೊಂದಿಗೆ ಸಮಾಲೋಚನೆ ನಡೆಸಿ, ಮಾಹಿತಿ ಪಡೆದು ಒಂದು ವಾರದಲ್ಲಿ ತಿಳಿಸಿ ಎಂದು ನಿರ್ದೇಶಿಸಿ, ವಿಚಾರಣೆ ಮುಂದೂಡಿತು.