ETV Bharat / state

ನಾಡಗೀತೆ ವಿಚಾರ: ಸಂಗೀತ ತಜ್ಞರು ನ್ಯಾಯಾಲಯಕ್ಕೆ ನೆರವಾಗುವಂತೆ ಹೈಕೋರ್ಟ್ ಸೂಚನೆ - ಈಟಿವಿ ಭಾರತ ಕನ್ನಡ

2 ನಿಮಿಷ 30 ಸೆಕೆಂಡುಗಳಲ್ಲಿ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಗಾಯಕರೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ ಮಾಡಲಾಗಿದೆ.

ಹೈಕೋರ್ಟ್
ಹೈಕೋರ್ಟ್
author img

By

Published : Aug 1, 2023, 7:44 AM IST

ಬೆಂಗಳೂರು: ನಾಡಗೀತೆ ಹಾಡುವುದಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅರ್ಜಿಯ ಕುರಿತು ಸಂಗೀತ ತಜ್ಞರನ್ನು ಕರೆಸಿ ನ್ಯಾಯಾಲಯಕ್ಕೆ ನೆರವಾಗಲು ಸಹಕರಿಸುವಂತೆ ಹೈಕೋರ್ಟ್ ಸೂಚನೆ ನೀಡಿದೆ. ದಿವಂಗತ ಮೈಸೂರು ಅನಂತಸ್ವಾಮಿ ಸಂಯೋಜಿಸಿದ ದಾಟಿಯಲ್ಲಿ 2 ನಿಮಿಷ 30 ಸೆಕೆಂಡ್​​​​​​ಗಳಲ್ಲಿ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಿ ಸರ್ಕಾರವು 2022ರ ಸೆಪ್ಟೆಂಬರ್ 25ರಂದು ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ಏಕಸದಸ್ಯ ಪೀಠ ಈ ಅಭಿಪ್ರಾಯ ಪಟ್ಟು ವಿಚಾರಣೆಯನ್ನು ಆಗಸ್ಟ್ 17ಕ್ಕೆ ಮುಂದೂಡಿತು. ವಿಚಾರಣೆ ವೇಳೆ, ಸಂಗೀತ ಶಾಸ್ತ್ರದ ದಿಗ್ಗಜರಲ್ಲಿ ಯಾರನ್ನು ನ್ಯಾಯಾಲಯಕ್ಕೆ ಕರೆಸಬಹುದು ಎಂದು ಪ್ರಶ್ನಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರೂ ಆದ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ, ಬಿ ಕೆ ಸುಮಿತ್ರಾ ಅವರನ್ನು ಕರೆಸಬಹುದು ಎಂದರು. ಆಗ ಪೀಠವು ಹಾಗಾದರೆ ಅವರನ್ನು ಮುಂದಿನ ವಿಚಾರಣೆಗೆ ಕರೆಯುತ್ತೀರಾ, ಸಂಗೀತಕ್ಕೆ ಸಂಬಂಧಿಸಿದ ಗ್ರಂಥಗಳನ್ನು ಓದಿಕೊಂಡು, ಅವುಗಳ ಮೂಲಕ ನ್ಯಾಯಾಲಯಕ್ಕೆ ಸಹಾಯ ಮಾಡಬೇಕು ಎಂದು ತಿಳಿಸಿ ವಿಚಾರಣೆ ಮುಂದೂಡಿತು.

ಅಲ್ಲದೆ, ರಾಗಕ್ಕೆ ಕಾಲ ಸಾಪೇಕ್ಷತೆ ಇದೆ. ಕೆಲವು ರಾಗಗಳನ್ನು ಮುಂಜಾನೆ ಹೇಳಲಾಗದು. ಮತ್ತೆ ಕೆಲವು ರಾಗಗಳನ್ನು ಮಧ್ಯಾಹ್ನ ಹೇಳಲಾಗದು. ಅದೊಂದು ವಿಜ್ಞಾನ. ಸಂಗೀತ ಶಾಸ್ತ್ರ ಆ ರೀತಿಯಲ್ಲಿ ಬೆಳವಣಿಗೆ ಕಂಡಿದೆ. ಅಲ್ಲದೇ, ಸಂಗೀತ ಶಾಸ್ತ್ರದ ಹಿನ್ನೆಲೆಯಲ್ಲಿ ಆ ಪದ್ಯವನ್ನು ನೋಡಿದ್ದೇನೆ. ಕೆಲವು ಚರಣಗಳು ರಾತ್ರಿ ರಾಗದಲ್ಲಿ, ಮತ್ತೆ ಕೆಲವು ಚರಣಗಳನ್ನು ಮಧ್ಯಾಹ್ನಿಕ ರಾಗದಲ್ಲಿ ಹೇಳಬೇಕಿದೆ. ಒಂದು ಚರಣ ಪ್ರಾರ್ಥನ ರಾಗದಲ್ಲಿದೆ. ಅದನ್ನು ಏಕೆ ಹಾಗೆ ಮಾಡಿದ್ದಾರೆ ಗೊತ್ತಿಲ್ಲ. ಯಾವುದೇ ಒಂದು ರಾಗದಲ್ಲಿ ಆ ಹಾಡನ್ನು ಹಾಡಬಹುದೇ ಎಂಬ ಪ್ರಶ್ನೆ ಹೇಳುತ್ತದೆ. ಇದು ಸಂಗೀತ ಶಾಸ್ತ್ರಕ್ಕೆ ಸಂಬಂಧಿಸಿದ ವಿಚಾರ. ಒಳ್ಳೆಯ ಸಂಗೀತ ಗ್ರಂಥಗಳನ್ನು ತಂದು ತಿಳಿಸಬೇಕು ಎಂದು ಪೀಠ ಹೇಳಿತು.

ಜತೆಗೆ, ದೇಶದ ಇತರ ರಾಜ್ಯಗಳಲ್ಲಿ ಇದೇ ರೀತಿಯ ನಾಡಗೀತೆಗಳು ಇವೆಯೇ? ಯಾವೆಲ್ಲಾ ರಾಜ್ಯಗಳಲ್ಲಿ ಇವೆ. ಅಲ್ಲಿನ ಸರ್ಕಾರ ಏನು ಮಾಡಿವೆ ಎಂದು ಪರಿಶೀಲಿಸಲು ನ್ಯಾಯಪೀಠ ಸೂಚನೆ ನೀಡಿತು. ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ವಕೀಲರು, ತಮಿಳುನಾಡಿನ ನಾಡಗೀತೆ ಇದೆ. ಕವಿಯೇ ರಾಗ ಸಂಯೋಜನೆ ಮಾಡಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಣೆ ನೀಡಿದರು.

ಇದನ್ನೂ ಓದಿ: ಡಿಕೆಶಿ ಪ್ರಕರಣದ ಕೇಸ್‌ ಡೈರಿ ಸಲ್ಲಿಸಿ.. ಸಿಬಿಐಗೆ ಹೈಕೋರ್ಟ್‌ ಸೂಚನೆ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.