ಬೆಂಗಳೂರು: ವಿಜಯನಗರ ಜಿಲ್ಲೆಯ ಸಂಡೂರಿನಲ್ಲಿ 3,667 ಎಕರೆ ಸರ್ಕಾರಿ ಜಮೀನನ್ನು ನ್ಯಾಯಾಲಯದ ವ್ಯಾಜ್ಯ ಮುಕ್ತಾಯವಾಗುವವರೆಗೆ ಜಿಂದಾಲ್ ಸಂಸ್ಥೆಗೆ ಪರಭಾರೆ ಮಾಡುವುದಿಲ್ಲ ಎಂಬ ಬಗ್ಗೆ ಸ್ಪಷ್ಟನೆ ನೀಡಲು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ 3 ವಾರ ಗಡುವು ನೀಡಿದೆ.
ಅತ್ಯಂತ ಕಡಿಮೆ ದರದಲ್ಲಿ ಸರ್ಕಾರಿ ಭೂಮಿಯನ್ನು ಖಾಸಗಿ ಸಂಸ್ಥೆಗೆ ಪರಭಾರೆ ಮಾಡಲು ಮುಂದಾದ ರಾಜ್ಯ ಸಚಿವ ಸಂಪುಟದ ನಿರ್ಣಯ ಪ್ರಶ್ನಿಸಿ ಬೆಂಗಳೂರಿನ ಕೆ.ಎ. ಪಾಲ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಸರ್ಕಾರದ ಪರ ವಕೀಲರು ವಾದಿಸಿ, ಕೋರ್ಟ್ನಲ್ಲಿ ಪ್ರಕರಣ ಮುಕ್ತಾಯವಾಗುವವರೆಗೆ ಜಿಂದಾಲ್ ಸಂಸ್ಥೆಗೆ ಸರ್ಕಾರಿ ಭೂಮಿ ಪರಭಾರೆಗೆ ಕ್ರಯಪತ್ರ ಮಾಡಿಕೊಡುವುದಿಲ್ಲ ಎಂಬ ಬಗ್ಗೆ ಸರ್ಕಾರದ ನಿಲುವು ಸ್ಪಷ್ಟಪಡಿಸುವಂತೆ ಪೀಠ ಜುಲೈ 19ರಂದು ಸರ್ಕಾರಕ್ಕೆ ಸೂಚಿಸಿದೆ. ಆದರೆ, ಬುಧವಾರವಷ್ಟೇ ನೂತನ ಸಚಿವ ಸಂಪುಟ ರಚನೆಯಾಗಿದ್ದು, ಸರ್ಕಾರದ ನಿಲುವು ತಿಳಿಸಲು 2 ವಾರ ಕಾಲಾವಕಾಶ ನೀಡಬೇಕು. ಅಲ್ಲಿಯವರೆಗೆ ಈ ಹಿಂದೆ ನೀಡಿರುವ ಭರವಸೆಯಂತೆ ಜಮೀನು ಪರಭಾರೆ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗುವುದು ಎಂದರು.
ಹೇಳಿಕೆ ಪರಿಗಣಿಸಿದ ಪೀಠ, ಅರ್ಜಿ ವಿಚಾರಣೆಯನ್ನು 3 ವಾರ ಕಾಲ ಮುಂದೂಡಿತು. ಜತೆಗೆ, ವ್ಯಾಜ್ಯ ಮುಕ್ತಾಯವಾಗುವವರೆಗೆ ಪರಭಾರೆಗೆ ಕ್ರಯಪತ್ರ ಮಾಡಿಕೊಡುವುದಿಲ್ಲ ಎಂಬ ಕುರಿತು ಭರವಸೆ ನೀಡುವ ಬಗ್ಗೆ ಮುಂದಿನ ವಿಚಾರಣೆ ವೇಳೆ ಸರ್ಕಾರ ತನ್ನ ಖಚಿತ ನಿಲುವು ತಿಳಿಸಬೇಕು ಎಂದು ಸೂಚಿಸಿತು.