ಬೆಂಗಳೂರು: ಯಲಹಂಕ-ದೊಡ್ಡಬಳ್ಳಾಪುರ ಮಾರ್ಗವಾಗಿ ಆಂಧ್ರಪ್ರದೇಶದ ಗಡಿಭಾಗದವರೆಗೆ ಅಗಲೀಕರಣ ಮಾಡಿರುವ ರಾಜ್ಯ ಹೆದ್ದಾರಿ-9 ರಲ್ಲಿ ಕಾಮಗಾರಿ ಪೂರ್ಣಗೊಳ್ಳದಿದ್ದರೂ ರಾಜಾನುಕುಂಟೆ ಸಮೀಪದ ಟೋಲ್ ಕೇಂದ್ರದಲ್ಲಿ ಅಕ್ರಮವಾಗಿ ಟೋಲ್ ಶುಲ್ಕ ಸಂಗ್ರಹಿಸಲಾಗುತ್ತಿದೆ ಎಂದು ಆರೋಪಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಈ ಕುರಿತು ದೊಡ್ಡಬಳ್ಳಾಪುರದ ವಕೀಲ ಜಿ. ವೆಂಕಟೇಶ್ ಮತ್ತು ಅಲ್ಲಾಳಸಂದ್ರ ನಿವಾಸಿ ಎಸ್. ನವೀನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಟೋಲ್ ಕೇಂದ್ರದ ಪರ ವಕೀಲರು ಪೀಠಕ್ಕೆ ವಿವರಣೆ ನೀಡಿ, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದೊಂದಿಗೆ ಮಾಡಿಕೊಂಡ ಒಪ್ಪಂದದ ಪ್ರಕಾರ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಇನ್ನೂ ಕಾಮಗಾರಿಯು ಶೇ.96 ರಷ್ಟು ಪೂರ್ಣಗೊಂಡಿದೆ. ಟೋಲ್ ಸಂಗ್ರಹದಲ್ಲಿ ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ ಎಂದು ವಿವರಿಸಿದರು.
ಹೇಳಿಕೆ ಪರಿಗಣಿಸಿದ ಪೀಠ, ಅರ್ಜಿ ವಜಾಗೊಳಿಸಿತು. ಅರ್ಜಿದಾರರು, ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ನಿಯಮದ ವಿರುದ್ಧ ರಸ್ತೆ ನಿರ್ಮಾಣ ಕಾಮಗಾರಿ ಕನಿಷ್ಠ ಶೇ.75 ರಷ್ಟು ಪೂರ್ಣಗೊಳ್ಳದ ಹೊರತು ಆ ರಸ್ತೆಯಲ್ಲಿ ಪ್ರಯಾಣಿಸುವ ವಾಹನ ಸವಾರರದಿಂದ ಟೋಲ್ ಸಂಗ್ರಹಿಸುವಂತಿಲ್ಲ. ಯಲಹಂಕ-ದೊಡ್ಡಬಳ್ಳಾಪುರ ರಾಜ್ಯ ಹೆದ್ದಾರಿ ನಿರ್ಮಾಣ ಕಾಮಗಾರಿ ಶೇ.40 ರಷ್ಟು ಸಹ ಪೂರ್ಣಗೊಂಡಿಲ್ಲ. ರಸ್ತೆಯಲ್ಲಿ ಸಾಕಷ್ಟು ಕೆಲಸಗಳು ಬಾಕಿ ಇದ್ದರೂ, ರಾಜಾನುಕುಂಟೆ ಸಮೀಪದ ಟೋಲ್ ಕೇಂದ್ರದಲ್ಲಿ ವಾಹನ ಸವಾರದಿಂದ ಅಕ್ರಮವಾಗಿ ಟೋಲ್ ಸಂಗ್ರಹಿಸಲಾಗುತ್ತಿದೆ ಎಂದು ಆರೋಪಿಸಿ 2019ರಲ್ಲಿ ಪಿಐಎಲ್ ಸಲ್ಲಿಸಿದ್ದರು.