ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ (ದೌರ್ಜನ್ಯ ತಡೆ) ಕಾಯ್ದೆ-1989ರ ‘ಸಾಂವಿಧಾನಿಕ ಸಿಂಧುತ್ವ’ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಈ ಕುರಿತು ಡಾ. ಬಿ.ಆರ್.ಅಂಬೇಡ್ಕರ್ ಪರಿಶಿಷ್ಟ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ರಾಯಚೂರು ಜಿಲ್ಲೆಯ ಮಹೇಂದ್ರಕುಮಾರ್ ಮಿತ್ರ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕೆಲಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠ, ಜಾತಿ ಮತ್ತು ಪಂಗಡ ಎಂಬ ಪದಕ್ಕೆ ಬೇರೆ ಬೇರೆ ಅರ್ಥ ಹಾಗೂ ವ್ಯಾಖ್ಯಾನವಿದೆ. ಅಲ್ಲದೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಪ್ರತ್ಯೇಕ ಸಚಿವಾಲಯವಿದೆ. ಆಯುಕ್ತರು ಪ್ರತ್ಯೇಕವಾಗಿದ್ದಾರೆ. ದೌರ್ಜನ್ಯ ಪ್ರಕರಣಗಳ ವಿಚಾರಣೆಗೆ ಪ್ರತ್ಯೇಕ ವಿಶೇಷ ನ್ಯಾಯಾಲಯಗಳು ಇವೆ. ಹೀಗಿದ್ದೂ ಕಾಯ್ದೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಎಂದು ಒಟ್ಟಿಗೆ ಸೇರಿಸುವುದು ಸರಿಯಲ್ಲ ಎಂದು ಅರ್ಜಿದಾರರು ವಾದಿಸುತ್ತಿದ್ದಾರೆ.
ಆದರೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ರಕ್ಷಣೆ, ದೌರ್ಜನ್ಯ ತಡೆಗೆ ಈ ಕಾಯ್ದೆ ಜಾರಿಗೆ ತರಲಾಗಿದೆ ಎಂದು ಕಾಯ್ದೆಯ ಪೀಠಿಕೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಅಲ್ಲದೇ, ಕಾಯ್ದೆಯ ರಚನೆಯಲ್ಲಿ ಶಾಸಕಾಂಗದ ಸಾಮರ್ಥ್ಯದ ಕೊರತೆ ಕಂಡು ಬಂದಾಗ ಸಂವಿಧಾನದ ನಿಯಮಗಳಿಗೆ ತದ್ವಿರುದ್ಧ ಅಥವಾ ಅಭಿವ್ಯಕ್ತಿಗೆ ಅಡ್ಡಿಪಡಿಸುವ ಸಂದರ್ಭಗಳಲ್ಲಿ ಮಾತ್ರ ನ್ಯಾಯಾಲಯ ಮಧ್ಯಪ್ರವೇಶಿಸಬಹುದು. ಆದರೆ ಈ ಅರ್ಜಿಯಲ್ಲಿ ಅಂತಹ ಯಾವುದೇ ಅಂಶಗಳು ಕಂಡು ಬರುತ್ತಿಲ್ಲ. ನ್ಯಾಯಾಲಯ ಮಧ್ಯಪ್ರವೇಶಿಸಿ ನಿರ್ದೇಶನಗಳನ್ನು ನೀಡುವ ಪ್ರಮೇಯ ಉದ್ಭವಿಸುವುದಿಲ್ಲ ಎಂದು ತಿಳಿಸಿ ಪೀಠ ಅರ್ಜಿ ವಿಚಾರಣೆಗೆ ತಿರಸ್ಕರಿಸಿತು.
ಇದನ್ನೂ ಓದಿ: ಸ್ವತಂತ್ರ ಭಾರತದ ಅಮೃತ ಘಳಿಗೆ: ಆಗಸದಲ್ಲಿ ಜೆಟ್ ಫೈಟರ್ಗಳ 75ರ ಅಂಕಿಯಾಟದ ಸೊಬಗು