ಬೆಂಗಳೂರು: ''ಜೆಡಿಎಸ್ ಕಾರ್ಯಕರ್ತರಿಗೆ ಕಿರುಕುಳ ನೀಡುವ ಕೆಲಸ ಮಾಡಿದರೆ ಸಹಿಸುವ ಪ್ರಶ್ನೆಯೇ ಇಲ್ಲ'' ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗರಂ ಆದರು. ಯಶವಂತಪುರ ಕ್ಷೇತ್ರದಲ್ಲಿ ಇಂದು ಸಂಜೆ ಪಂಚರತ್ನ ರಥಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದರು. ''ಜೆಡಿಎಸ್ ಕಾರ್ಯಕರ್ತರಿಗೆ ಕಿರುಕುಳ ವಿಚಾರದ ಬಗ್ಗೆ ಕಿಡಿಕಾರಿದ ಅವರು, ಅಂತಹ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
''ಕಾರ್ಯಕರ್ತರಿಗೆ ಧಮ್ಕಿ, ಕಿರುಕುಳ ಕೊಡುವುದು ಆಗ್ತಿದೆ. ಚುನಾವಣೆ ಬಂದಾಗಿನಿಂದ ಅದು ಜಾಸ್ತಿಯಾಗಿದೆ. ಬೇರೆ ಪಕ್ಷದಿಂದ ಬೇಸತ್ತು ನಮ್ಮ ಪಕ್ಷಕ್ಕೆ ಬರುವವರನ್ನು ಕೆಲವು ಕಡೆ ಪೋಲಿಸರ ಮಧ್ಯಸ್ಥಿಕೆಯಲ್ಲಿ ಹೆದರಿಸಿ ಅವರನ್ನು ಮತ್ತೆ ಅದೇ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ'' ಎಂದು ದೂರಿದರು. ''ನಾನು ಪೋಲಿಸರಿಗೆ ಎಚ್ಚರಿಕೆ ಕೊಡುತ್ತೇನೆ. ಇನ್ನೊಂದು ತಿಂಗಳು ಅಷ್ಟೇ ನಿಮ್ಮ ಸಮಯ. ಅಧಿಕಾರಿಗಳು ಕಾನೂನಿನ ಅಡಿಯಲ್ಲಿ ಕೆಲಸ ಮಾಡಬೇಕು. ಶಾಸಕರಿಗೆ ಅಡಿಯಾಳಾಗಿ ಕೆಲಸ ಮಾಡಿದರೆ ಜೂನ್ ತಿಂಗಳ ಬಳಿಕ ಪ್ರಾಯಶ್ಚಿತ ಅನುಭವಿಸಬೇಕಾಗುತ್ತದೆ'' ಎಂದು ನೇರವಾಗಿ ಎಚ್ಚರಿಕೆ ನೀಡಿದರು.
''ರಾಜ್ಯದ ಜನತೆಯ ಹಣದಿಂದ ನೀವು ಕೆಲಸ ಮಾಡ್ತಿದ್ದೀರಿ ಅನ್ನೋದನ್ನು ಅಧಿಕಾರಿಗಳು ನೆನಪಿನಲ್ಲಿಟ್ಟುಕೊಳ್ಳಬೇಕು. ನಾನೂ ಎರಡು ಬಾರಿ ಸಿಎಂ ಆಗಿ ಕೆಲಸ ಮಾಡಿದ್ದೇನೆ. ಎಂದೂ ಇಂಥ ದ್ವೇಷದ ರಾಜಕೀಯಕ್ಕೆ ಪ್ರೋತ್ಸಾಹ ಕೊಟ್ಟಿಲ್ಲ. ಅಧಿಕಾರಿಗಳು ತಮ್ಮ ನಡವಳಿಕೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಿದೆ'' ಎಂದು ತಿಳಿಸಿದರು.
ಸಚಿವ ನಾರಾಯಣಗೌಡ ವಿರುದ್ಧ ಕಿಡಿ: ತಮ್ಮ ಬಗ್ಗೆ ಕೀಳಾಗಿ ಹೇಳಿಕೆ ನೀಡಿರುವ ಸಚಿವ ನಾರಾಯಣಗೌಡ ವಿರುದ್ಧ ಮಾಜಿ ಮುಖ್ಯಮಂತ್ರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಒಬ್ಬರನ್ನು ತುಳಿಯಲು ಇನ್ನೊಬ್ಬರನ್ನು ಬೆಳೆಸುತ್ತಾರೆ ಎಂಬ ನಾರಾಯಣಗೌಡರ ಹೇಳಿಕೆ ವಿರುದ್ಧ ಕಿಡಿಕಾರಿದರು.
''ನಾರಾಯಣಗೌಡರನ್ನು ಬೆಳೆಸೋಕೆ ನನ್ನ ಪಕ್ಷವನ್ನು ಹಾಳು ಮಾಡಿಕೊಳ್ಳಬೇಕಾ? ಇವರು ಮಹಾನ್ ಕೆಲಸ ಮಾಡಿದ್ದಾರೆ ಅಂತ ಹೇಳಿ ನಾನು ಅಭ್ಯರ್ಥಿ ಹಾಕದೇ ಇರಲಾ? ಕೃಷ್ಣ ವಿರುದ್ದ ಅಭ್ಯರ್ಥಿ ಆಗಬೇಕು ಅಂತ ಬಂದಾಗ ಅವತ್ತು ಈ ಪರಿಜ್ಞಾನ ಇರಲಿಲ್ಲವಾ ಇವರಿಗೆ? ಕೃಷ್ಣ ವಿರುದ್ಧ ಅಭ್ಯರ್ಥಿ ಆಗೋಕೆ ಯಾಕೆ ಬಂದರು ಇವರು. ಎರಡನೇ ಬಾರಿ ಟಿಕೆಟ್ ಕೊಡಬಾರದು ಅಂತ ಇದ್ದಿದ್ದು. ಆದರೂ ಟಿಕೆಟ್ ಕೊಟ್ಟೆವು. ಟಿಕೆಟ್ ಕೊಡಿಸಿದ್ದು ನಾನು. ಕುತ್ತಿಗೆ ಕೊಯ್ದು ಹೋದವನು ಈ ವ್ಯಕ್ತಿ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು. ನಿನ್ನಿಂದ ನಾವು ಪಾಠ ಕಲಿಯಬೇಕಿಲ್ಲ. ನಾವು ಯಾವ ರೀತಿ ನಡೆದುಕೊಳ್ಳಬೇಕು ಅಂತ ನಮಗೆ ಗೊತ್ತಿದೆ. ನಿನ್ನ ಕಾಲ ಮುಗಿದಿದೆ'' ಎಂದು ಅವರು ವಾಗ್ದಾಳಿ ನಡೆಸಿದರು.
ಹೆಚ್ಡಿಕೆಗೆ ಮುತ್ತಿಟ್ಟ ಮಹಿಳೆ: ಯಶವಂತಪುರ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ ಸಾಗುತ್ತಿದ್ದ ವೇಳೆ ವಾಹನ ಏರಿದ ಮಹಿಳೆಯೊಬ್ಬರು, ಕುಮಾರಸ್ವಾಮಿ ಅವರು ಕೆನ್ನೆಗೆ ಮುತ್ತಿಟ್ಟ ಪ್ರಸಂಗವೂ ನಡೆಯಿತು. ಈ ವೇಳೆ ಜೊತೆಯಲ್ಲಿದ್ದ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ, ಮುಖಂಡರಾದ ಹನುಮಂತೇಗೌಡ ಮತ್ತಿತರರು ಹಾಗೂ ಕುಮಾರಸ್ವಾಮಿ ಅವರ ಗನ್ ಮ್ಯಾನ್ಗಳು ನಿಬ್ಬೆರಗಾಗಿ ನೋಡುತ್ತಿದ್ದ ದೃಶ್ಯ ಕಂಡು ಬಂತು.
ದೇವೇಗೌಡರ ಅಧ್ಯಕ್ಷತೆಯಲ್ಲಿ ನಡೆದ ಸಭೆ: ಹಾಸನ ಕ್ಷೇತ್ರದ ಟಿಕೆಟ್ ಗೊಂದಲ ಇನ್ನೂ ಮುಂದುವರೆದಿದ್ದು, ಈ ಸಂಬಂಧ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ನಿವಾಸದಲ್ಲಿ ಇಂದು ಹಾಸನ ಜಿಲ್ಲೆಯ ಮುಖಂಡರ ಸಭೆ ಕರೆಯಲಾಗಿತ್ತು. ಪದ್ಮನಾಭನಗರದಲ್ಲಿರುವ ಗೌಡರ ನಿವಾಸದಲ್ಲಿ ದೇವೇಗೌಡರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಾಸನ ಜಿಲ್ಲೆ ಹಾಗೂ ಹಾಸನ ಕ್ಷೇತ್ರದ ಟಿಕೆಟ್ಗೆ ಸಂಬಂಧಿಸಿದಂತೆ ಚರ್ಚೆ ನಡೆದಿದೆ. ಈ ವೇಳೆ ಕೆಲವು ಮುಖಂಡರು ಭವಾನಿ ರೇವಣ್ಣ ಅವರಿಗೆ ಟಿಕೆಟ್ ಕೊಡುವಂತೆ ಒತ್ತಾಯಿಸಿದ್ದಾರೆ. ಒಂದು ವೇಳೆ ಭವಾನಿ ರೇವಣ್ಣ ಅವರಿಗೆ ಟಿಕೆಟ್ ಕೊಡದಿದ್ದರೆ ಹೆಚ್.ಡಿ. ರೇವಣ್ಣರನ್ನು ಹಾಸನದಿಂದ ಕಣಕ್ಕಿಳಿಸುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಪರಿಶೀಲನೆ ಮಾಡಿಯೇ ಹಾಸನ ಕ್ಷೇತ್ರದಲ್ಲಿ ಟಿಕೆಟ್ ನೀಡುವುದಾಗಿ ಹೇಳಿರುವ ದೇವೇಗೌಡರು, ಹೊಳೆನರಸೀಪುರದಿಂದ ರೇವಣ್ಣನವರಿದ್ದಾರೆ. ಎರಡೂ ಕ್ಷೇತ್ರದಲ್ಲಿ ರೇವಣ್ಣ ಚುನಾವಣೆಗೆ ನಿಲ್ಲುವುದಿಲ್ಲ. ಹಾಸನ ಕ್ಷೇತ್ರಕ್ಕೆ ಟಿಕೆಟ್ ಯಾರಿಗೆ ಕೊಡಬೇಕು ಎನ್ನುವುದನ್ನು ನಿರ್ಧಾರ ಮಾಡುತ್ತೇನೆ. ಎಲ್ಲರೂ ಬೆಂಬಲಿಸುವಂತೆ ಸಭೆಯಲ್ಲಿ ಮನವಿ ಮಾಡಲಾಗಿದೆ ಎಂದು ಹೇಳಿದರು.
ಹಾಸನ ಟಿಕೆಟ್ ವಿಚಾರ: ಸಭೆ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಜೆಡಿಎಸ್ ಶಾಸಕ ಹೆಚ್.ಕೆ. ಕುಮಾರಸ್ವಾಮಿ, ಪಕ್ಷದ ಕೆಲ ಮುಖಂಡ ತಮ್ಮ ಅಭಿಪ್ರಾಯ ಹೇಳಿದ್ದಾರೆ. ಗೌಡರಿಗೆ ಆರೋಗ್ಯ ಸರಿಯಿಲ್ಲ. ಬೆಂಬಲಿಗರು ಬೇಡಿಕೆ ಇಟ್ಟಿದ್ದಾರೆ. ಸೂಕ್ತ ನಿರ್ಣಯ ಆಗುತ್ತದೆ. ಆದರೆ ಇಂತಹ ನಿರ್ಣಯ ಆಗುತ್ತದೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ಹಾಸನ ಟಿಕೆಟ್ ವಿಚಾರ ಇನ್ನೂ ಚರ್ಚೆಯ ಹಂತದಲ್ಲಿದೆ. ಎಲ್ಲರೂ ಒಗ್ಗೂಡಿ ಒಂದೇ ತೀರ್ಮಾನವಾಗುತ್ತದೆ. ಅದಕ್ಕೆ ಎಲ್ಲರೂ ಬದ್ಧ. ಈಗ ನಡೆದ ಸಭೆಯಲ್ಲಿ ಯಾವುದೇ ತೀರ್ಮಾನ ಆಗಿಲ್ಲ. ಎರಡು ದಿನ ಕಾದು ನೋಡೋಣ ಎಂದು ಕುಮಾರಸ್ವಾಮಿ ಹೇಳಿದರು.
ಇದನ್ನೂ ಓದಿ: ಹಾಸನ ವಿಧಾನಸಭೆ ಸೇರಿ ಅಭ್ಯರ್ಥಿಗಳ 2ನೇ ಪಟ್ಟಿ ಸೋಮವಾರ ಬಿಡುಗಡೆ: ಹೆಚ್ಡಿಕೆ